Advertisement

ನದಿ ಪಾತ್ರಗಳಲ್ಲಿ ಅಕ್ರಮ ಮರಳುಗಾರಿಕೆ

07:30 PM Oct 11, 2021 | Team Udayavani |

ಬೆಳ್ತಂಗಡಿ: ಮರಳುಗಾರಿಕೆ ಮಾಯಾಜಾಲ ಬೆಳ್ತಂಗಡಿ ತಾಲೂಕಿನಾದ್ಯಂತ ವ್ಯಾಪಕವಾಗಿ ವಿಸ್ತರಿಸುತ್ತಿದೆ. ಈ ಜಾಲ ದೊಡ್ಡ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದರೂ ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿ ಕಂಡುಬರುತ್ತಿದೆ.

Advertisement

ಖಚಿತ ಮಾಹಿತಿಯಂತೆ ತಾಲೂಕಿನ ನೇತ್ರಾವತಿ, ಮೃತ್ಯುಂಜಯ ನದಿಗಳ ಪಾತ್ರಗಳಲ್ಲಿ ಧರ್ಮಸ್ಥಳ ಗ್ರಾಮದ ಅಜಿಕುರಿ, ಕಲ್ಮಂಜ ಗ್ರಾಮದ ಪಜಿರಡ್ಕ, ಇಂದಬೆಟ್ಟು ಗ್ರಾಮದ ಬೆಳ್ಳೂರು ಬೈಲು, ಮಿತ್ತಬಾಗಿಲು ಗ್ರಾಮದ ಕಿಲ್ಲೂರು, ಮುಂಡಾಜೆ ಗ್ರಾಮದ ಗುಂಡಿ, ಹೊಸಕಾಪು ಹಾಗೂ ಕೊಯ್ಯೂರು ಗ್ರಾಮದ ಡೆಂಬುಗ ಪ್ರದೇಶಗಳ ನದಿ ಪಾತ್ರಗಳಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಹಾಗೂ ದಿನಂಪ್ರತಿ ಹತ್ತಾರು ಲೋಡ್‌ ಮರಳು ಸಾಗಾಟವಾಗುತ್ತಿದೆ ಎಂಬ ವರದಿಯನ್ನು ಜಿಲ್ಲಾಧಿಕಾರಿಗೆ ಸಂಬಂಧಪಟ್ಟ ಇಲಾಖೆ ನೀಡಿದೆ.

ಧರ್ಮಸ್ಥಳ ಸಮೀಪದ ಅಜಿಕುರಿ ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ದೋಣಿಗಳನ್ನು ಬಳಸಿ ಭಾರೀ ಪ್ರಮಾಣದಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತ, ತಹಶೀಲ್ದಾರ್‌, ಪೊಲೀಸ್‌, ಗಣಿ ಇಲಾಖೆಗೆ ಮಾಹಿತಿ ಇದ್ದರೂ ಪ್ರಭಾವಿಗಳ ಕುಣಿಕೆಯಿಂದಾಗಿ ಮೌನಕ್ಕೆ ಶರಣಾಗಿದೆ.

ಮುಂಡಾಜೆ ಗ್ರಾಮದ ಗುಂಡಿ, ಹೊಸಕಾಪು ಪ್ರದೇಶಗಳ ಮೃತ್ಯುಂಜಯ ನದಿ ಪಾತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಇದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಪರಿಣಾಮ ಸ್ಥಳೀಯ ರಸ್ತೆಗಳು ಹಾಳಾಗುತ್ತಿರುವ ಕುರಿತು ಗ್ರಾಮಸ್ಥರು ಹಲವು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ:ಗಾಂಧೀಜಿ, ಜೆಪಿ ತಂದುಕೊಟ್ಟ ಸ್ವಾತಂತ್ರ್ಯ ನಶಿಸಿ ಹೋಗುತ್ತಿದೆ : ಮಾಜಿ ಪ್ರಧಾನಿ ಎಚ್ ಡಿಡಿ

Advertisement

ಸರಕಾರಕ್ಕೆ ಲಕ್ಷಾಂತರ ರೂ. ತೆರಿಗೆ ವಂಚಿಸಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವ ಮರಳು ಮಾಫಿಯಾದ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಅಧಿಕಾರಿಗಳು ದಾಳಿ ನಡೆಸುವ ಮುನ್ನವೇ ಮಾಫಿಯಾ ರೂವಾರಿಗಳಿಗೆ ಮಾಹಿತಿ ಲಭಿಸುತ್ತಿರುವುದು ಅಚ್ಚರಿ. ಎರಡು ದಿನಗಳಿಂದ ದಾಳಿ ಸಾಧ್ಯತೆ ಹಿನ್ನೆಲೆ ಬೋಟ್‌ಗಳನ್ನು ನದಿಯಿಂದ ಮೇಲೆತ್ತಿರುವುದು ಇದಕ್ಕೆ ಸಾಕ್ಷಿ.

ಟೆಂಡರ್‌ದಾರರಿಗೆ ಕಂಟಕ
ತಾಲೂಕಿನ ಪಟ್ರಮೆಯಲ್ಲಿ ಮಾತ್ರ 5 ವರ್ಷಗಳ ಅವಧಿಗೆ ಮರಳು ತೆಗೆಯಲು ಪರವಾನಿಗೆ ನೀಡಿರುವುದಾಗಿ ಸಂಬಂಧಪಟ್ಟ ಇಲಾಖೆ ತಿಳಿಸಿದೆ. ಆದರೆ ಈ ಭಾಗಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮರಳು ಪೂರೈಕೆ ಮಾಡುತ್ತಿರುವುದರಿಂದ ಸುಮಾರು 15 ಲಕ್ಷ ರೂ. ವ್ಯಯಿಸಿ ಪರವಾನಿಗೆ ಪಡೆದು ನಡೆಸುತ್ತಿರುವ ಟೆಂಡರ್‌ದಾರರಿಗೆ ಕಂಟಕ ಎದುರಾಗಿದೆ.

ಪ್ರತ್ಯೇಕ ತಂಡ
ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ವಿಚಾರವಾಗಿ ಈಗಾಗಲೆ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತ್ಯೇಕ ತಂಡ ರಚಿಸಿ ಅಗತ್ಯ ಕ್ರಮ ವಹಿಸಲಾಗುವುದು.
-ಡಾ| ರಾಜೇಂದ್ರ ಕೆ.ವಿ.,
ಜಿಲ್ಲಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next