Advertisement

illegal Sand: ತುಂಬೆ, ಮಾರಿಪಳ್ಳ: ಮರಳು ಅಡ್ಡೆಗೆ ದಾಳಿ; 20 ಬೋಟ್‌ಗಳ ವಶ

01:49 AM Oct 05, 2024 | Team Udayavani |

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಬಂಟ್ವಾಳ ತಾಲೂಕಿನ ತುಂಬೆ, ಮಾರಿಪಳ್ಳ ಭಾಗದ ನೇತ್ರಾವತಿ ನದಿಯಲ್ಲಿ ಬೋಟ್‌(ಬೃಹತ್‌ ದೋಣಿ) ಮೂಲಕ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಶುಕ್ರವಾರ ದ.ಕ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಬಂಟ್ವಾಳ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಒಟ್ಟು 20 ಬೋಟ್‌ಗಳನ್ನು ವಶಪಡಿಸಿಕೊಂಡಿದ್ದು, ಅಧಿಕಾರಿಗಳ ದಾಳಿಯ ವೇಳೆ ಮರಳುಗಾರಿಕೆ ನಡೆಸುತ್ತಿದ್ದ ಕಾರ್ಮಿಕರು ಓಡಿ ತಪ್ಪಿಸಿಕೊಂಡಿದ್ದಾರೆ.

Advertisement

ವಶಪಡಿಸಿಕೊಂಡ ದೋಣಿಗಳನ್ನು 4ರಂತೆ ಜೋಡಿಸಿಕೊಂಡು 5 ತಂಡಗಳ ಮೂಲಕ ನದಿಯಲ್ಲೇ ಮಂಗಳೂರಿನ ಅಡ್ಯಾರ್‌ವರೆಗೆ ಸಾಗಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಬೋಟ್‌ಗಳಲ್ಲಿ ಯಾವುದೇ ರೀತಿಯ ಮರಳು ಪತ್ತೆಯಾಗಿಲ್ಲ. ಮರಳುಗಾರಿಕೆಯಲ್ಲಿ ತೊಡಗಿದ್ದವರು ಯಾರು, ಬೋಟ್‌ಗಳು ಯಾರಿಗೆ ಸಂಬಂಧಪಟ್ಟಿವೆ ಎಂಬುದರ ಕುರಿತು ಅಧಿಕಾರಿಗಳ ತನಿಖೆಯ ಬಳಿಕ ತಿಳಿದುಬರಬೇಕಿದೆ.

ಬಂಟ್ವಾಳ ತಾಲೂಕಿನ ಹಲವೆಡೆ
ನದಿಯಲ್ಲಿ ದೋಣಿಗಳ ಸಹಾಯದಿಂದ ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಂಡು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳು ಸಾಕಷ್ಟು ಸಮಯದಿಂದ ಕೇಳಿಬರುತ್ತಿದ್ದು, ಈ ಕುರಿತು ದ.ಕ.ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ದೂರುಗಳು ಕೂಡ ಹೋಗಿದ್ದವು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಅಕ್ರಮವನ್ನು ಮಟ್ಟ ಹಾಕುವಂತೆ ಗಣಿ ಇಲಾಖೆಗೆ ಆದೇಶ ನೀಡಿದ್ದರು.

ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ, ಬಂಟ್ವಾಳ ತಹಶೀಲ್ದಾರ್‌ ಅರ್ಚನಾ ಡಿ. ಭಟ್‌, ಮಂಗಳೂರು ತಹಶೀಲ್ದಾರ್‌ ಪ್ರಶಾಂತ್‌ ಪಾಟೀಲ್‌, ಹಿರಿಯ ಭೂ ವಿಜ್ಞಾನಿ ಗಿರೀಶ್‌ಮೋಹನ್‌, ಭೂ ವಿಜ್ಞಾನಿ ಮಹಾದೇಶ್ವರ, ಬಂಟ್ವಾಳ ಕಂದಾಯ ನಿರೀಕ್ಷಕ ಜನಾರ್ದನ್‌ ಜೆ., ಗ್ರಾಮಕರಣಿಕರು, ಕಂದಾಯ ಇಲಾಖೆ ಸಿಬಂದಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next