Advertisement

ಹಗಲಿರುಳು ಅಕ್ರಮ ಮರಳು ಸಾಗಣೆ

09:56 AM Jan 01, 2019 | Team Udayavani |

ಸಿರವಾರ: ಪಟ್ಟಣದ ಸುತ್ತಲೂ ಮರಳಿನ ಸಂಗ್ರಹ ಕೇಂದ್ರಗಳಿಲ್ಲದಿದ್ದರೂ ಪಕ್ಕದ ದೇವದುರ್ಗ, ಮಾನ್ವಿಯಿಂದ ರಾತ್ರೋರಾತ್ರಿ ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮ ಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ. ಒಂದರ್ಥದಲ್ಲಿ ರಾತ್ರಿ ಈ ದಂಧೆ ಜೋರಾಗಿದ್ದರೂ ಕೆಲವೊಮ್ಮೆ ಹಗಲಲ್ಲೂ ನಡೆಯುತ್ತಿದ್ದು, ಹೊತ್ತು ಗೊತ್ತಿಲ್ಲದಂತಾಗಿದೆ. 

Advertisement

ಪಟ್ಟಣದ ಸುತ್ತಮುತ್ತಲು ಯಾವುದೇ ನದಿ-ಹಳ್ಳಗಳು ಇಲ್ಲದಿರುವುದರಿಂದ ದೂರದ ಮಾನ್ವಿ ಸಮೀಪದ ತುಂಗಭದ್ರಾ ನದಿಯ ಚೀಕಲಪರ್ವಿ, ಜೂಕೂರು, ರಾಜೋಳಿ ಹಾಗೂ ದೇವದುರ್ಗ ತಾಲೂಕಿನ ಕೃಷ್ಣ ನದಿ ತೀರದ ಕರ್ಕಳ್ಳಿ, ನಿಲವಂಜಿ, ಲಿಂಗದಹಳ್ಳಿ ಸ್ಟಾಕ್‌ ಯಾರ್ಡ್‌ಗಳಿಂದ ಮರಳು ಕೆಲ ಪ್ರಭಾವಿ ಮಧ್ಯವರ್ತಿಗಳ ಮೂಲಕ ಪಟ್ಟಣಕ್ಕೆ ಬಂದು ಸೇರುತ್ತಿದೆ. ಹೀಗೆ ಬಂದ ಮರಳಿನ ದರ ಗಗನಕ್ಕೆ ಮುಟ್ಟಿದ್ದು, ಬಡವರು ಮನೆ ಕಟ್ಟುವುದು ಸಾಧ್ಯವೇ ಇಲ್ಲವೇನೊ ಎಂಬಂಥ ಸ್ಥಿತಿಗೆ ಬಂದಿದೆ.

ಬಡವರ ಜೀವ ಹಿಂಡುತ್ತಿರುವ ದರ: ಒಂದು ಟಿಪ್ಪರ್‌ ಮರಳಿಗೆ 16 ರಿಂದ 18 ಸಾವಿರ, ಟ್ರ್ಯಾಕ್ಟರ್‌ ಮರಳಿಗೆ 3ರಿಂದ 4 ಸಾವಿರ ರೂ. ಹಣ ನೀಡಿ ಖರೀದಿಸಬೇಕಿದೆ. ಪಟ್ಟಣದಲ್ಲಿ ಹಣವಂತರು ರಾಯಲ್ಟಿ ಮೂಲಕ ತರೆಸಿಕೊಂಡರೆ ಬಡವರು ಹೆಚ್ಚು ಹಣ ನೀಡಿ ಮರಳು ಖರೀದಿಸಬೇಕಿದೆ. ಇನ್ನು ವಸತಿ ಯೋಜನೆ ಫಲಾನುಭವಿಗಳು ಮರಳು ಸಿಗದೆ ಪೇಚಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಕ್ರಮ ಕಡಿವಾಣಕ್ಕೆ ತೊಂದರೆ: ಪಟ್ಟಣದ ಪೊಲೀಸ್‌ ಠಾಣೆಗೆ ಸಿಬ್ಬಂದಿ ಕೊರತೆ ಇರುವುದರಿಂದ ರಾತ್ರಿ ಕಾವಲುಗಾರರ ಸಂಖ್ಯೆ ಕಡಿಮೆಯಿದೆ. ಪಟ್ಟಣದ ಸುತ್ತಲೂ ನಾಲ್ಕು ದಿಕ್ಕಿಗೂ ಅಕ್ರಮ ಮರಳು ಸಾಗಾಣೆಗೆ ರಸ್ತೆ ಸಂಪರ್ಕ ಸಾಧ್ಯವಿದೆ. ಹೀಗಾಗಿ ಅಕ್ರಮ ದಂಧೆಕೋರರು ಪ್ರತಿದಿನ ಒಂದೊಂದು ದಾರಿ ಮೂಲಕ ಪೊಲೀಸ್‌ ಇಲಾಖೆ ಕಣ್ಣು ತಪ್ಪಿಸಿ ಮರಳು ಸಾಗಣೆ ಮಾಡುತ್ತಿದ್ದಾರೆ. ಅಲ್ಲದೇ, ಈ ದಾರಿಯಲ್ಲಿ ಪೊಲೀಸರಿದ್ದರೆ ಮತ್ತೂಂದು ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಕಾರಣಕ್ಕೋ ಏನೋ ಸಿರವಾರ ಪೊಲೀಸ್‌ ಠಾಣೆಯಲ್ಲಿ ಕಳೆದ ಒಂದು ವರ್ಷದಲ್ಲಿ ಕೇವಲ
4 ಅಕ್ರಮ ಮರಳು ಸಾಗಣೆ ಪ್ರಕರಣಗಳು ದಾಖಲಾಗಿವೆ.

ಬರಿದಾದ ಹಳ್ಳಗಳು: ಸಮೀಪದ ಮಲ್ಲಟ, ನಾರಬಂಡ ಹಳ್ಳಗಳಿಂದ ಹಲವು ವರ್ಷಗಳಿಂದ ರಾತ್ರೋರಾತ್ರಿ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ಆದರೆ, ಸ್ಥಳೀಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಹಳ್ಳಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಹಳ್ಳಗಳು ತಗ್ಗುಬಿದ್ದು ಬಾವಿಗಳಾಗಿ ಮಾರ್ಪಟ್ಟಿವೆ. ಇದರಿಂದ ಜನ ಜಾನುವಾರುಗಳಿಗೆ ಬೇಸಿಗೆ ಬಂದರೆ ಹನಿ ನೀರು ಸಿಗದಂತಾಗಿದೆ

Advertisement

ಮಲ್ಲಟ ಹಳ್ಳದ ಮರಳು ಸಾಗಣೆಗೆ ಸಂಬಂಧಪಟ್ಟಂತೆ ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅವರು ಕ್ರಮಕ್ಕೆ ಮುಂದಾಗುತ್ತಿಲ್ಲ. ನದಿಗಳು ಮಾತ್ರ ನಮ್ಮ ಕಾರ್ಯವ್ಯಾಪ್ತಿಗೆ ಬರುತ್ತವೆ ಎಂದು ಹೇಳುತ್ತಾರೆ.  ರಾಜಕುಮಾರ, ಮಲ್ಲಟ ಕಂದಾಯ ಅಧಿಕಾರಿ ಕಳೆದ ಅನೇಕ ದಿನಗಳಿಂದ ಮರಳು ಸಾಗಣೆಗೆ ಸಂಬಂಧಪಟ್ಟಂತೆ ತನಿಖೆ ಕೈಗೊಂಡಿದ್ದು, ಈವರೆಗೂ ಯಾವುದೇ ರೀತಿಯ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿಲ್ಲ. ಆ ರೀತಿ ನಡೆದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.
 ಸುಜಾತಾ ನಾಯಕ, ಪಿಎಸ್‌ಐ ಸಿರವಾರ

ಮಹೇಶ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next