ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ ಪೊಲೀಸರು ನಾವೂರು ಗ್ರಾಮದ ಮಣಿಹಳ್ಳ ಹಾಗೂ ಸಜೀಪನಡು ಜಂಕ್ಷನ್‌ನ ಎರಡು ಪ್ರತ್ಯೇಕ ಕಡೆ ಮರಳು ಸಹಿತ 2 ಲಾರಿಗಳನ್ನು ವಶಪಡಿಸಿಕೊಂಡು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ಮೂರ್ತಿ ಅವರು ಫೆ. 5ರಂದು ನಾವೂರು ಗ್ರಾಮದ ಮಣಿಹಳ್ಳದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಟಿಪ್ಪರ್ ಲಾರಿಯನ್ನು ತಡೆದು ವಿಚಾರಿಸಿದಾಗ ಅಕ್ರಮ ಮರಳು ಸಾಗಾಟ ಬೆಳಕಿಗೆ ಬಂದಿದೆ.
ಲಾರಿ ಚಾಲಕ ಸುಧಾಕರನ್ನು ವಿಚಾರಿಸಿದಾಗ ಅತ್ತಾವುಲ್ಲಾ ಎಂಬಾತನು ತುಂಬೆಯ ನೇತ್ರಾವತಿ ಕಿನಾರೆಯಲ್ಲಿ ಲಾರಿಗೆ ಮರಳು ಲೋಡ್ ಮಾಡಿ ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ವೇಳೆ ಪೊಲೀಸರು ಮರಳು ಸಹಿತ ಲಾರಿಯನ್ನು ವಶಪಡಿಸಿಕೊಂಡಿದ್ದು, 5 ಲಕ್ಷ ರೂ. ಲಾರಿಯ ಮೌಲ್ಯ ಹಾಗೂ 5 ಸಾವಿರ ರೂ. ಮರಳಿನ ಮೌಲ್ಯವೆಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ಮೂರ್ತಿ ಅವರ ತಂಡ ಫೆ. 6ರಂದು ಸಜೀಪನಡು ಜಂಕ್ಷನ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಮುಂಜಾನೆ 3ಕ್ಕೆ ಲಾರಿಯೊಂದನ್ನು ನಿಲ್ಲಿಸಿ ಚಾಲಕ ರಮ್ಲಾನ್‌ನನ್ನು ವಿಚಾರಿಸಿದಾಗ ವಳಚ್ಚಿಲ್ ನೇತ್ರಾವತಿ ಕಿನಾರೆಯಲ್ಲಿ ಅಕ್ರಮವಾಗಿ ಮರಳು ಲೋಡ್ ಮಾಡಿರುವುದಾಗಿ ತಿಳಿಸಿದ್ದಾನೆ.
ಮರಳು ಸಹಿತ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, 5 ಲಕ್ಷ ರೂ. ಲಾರಿಯ ಮೌಲ್ಯ ಹಾಗೂ 5 ಸಾವಿರ ರೂ. ಮರಳಿನ ಮೌಲ್ಯವೆಂದು ಅಂದಾಜಿಸಲಾಗಿದೆ. ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.