Advertisement

ಅಕ್ರಮ ಮರಳು ದಾಸ್ತಾನು ಶಂಕೆ: ಕ್ರಿಮಿನಲ್‌ ಕೇಸಿನ ಎಚ್ಚರಿಕೆ

11:48 PM Feb 07, 2020 | Team Udayavani |

ಉಡುಪಿ: ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ತೆಗೆಯುವ ಅವಧಿ ಮುಕ್ತಾಯ ಗೊಂಡಿದ್ದು ಈ ಅವಧಿಯಲ್ಲಿ 4 ಲಕ್ಷ ಮೆಟ್ರಿಕ್‌ ಟನ್‌ ಮರಳು ತೆಗೆಯಲಾಗಿದೆ. ಈ ಮರಳು ಜಿಲ್ಲೆಯಿಂದ ಹೊರ ಹೋಗಲು ಅವಕಾಶ ನೀಡಿಲ್ಲ, ಆದರೆ ತೆಗೆದಿರುವ ಅಷ್ಟೂ ಮರಳನ್ನು ಸಾರ್ವಜನಿಕರಿಗೆ ವಿತರಿಸದೆ ಅನಧಿ ಕೃತವಾಗಿ ದಾಸ್ತಾನು ಮಾಡಿರುವ ಸಾಧ್ಯತೆ ಇದ್ದು, ಅಂಥವರನ್ನು ಪತ್ತೆಹಚ್ಚಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಇನ್ನಷ್ಟು ಮರಳು
ತೆಗೆಯಲು ಕೋರಿಕೆ
ಇನ್ನೂ 4 ಲ.ಮೆ.ಟನ್‌ ಮರಳು ತೆಗೆಸಲು ಕೆಸಿಝಡ್‌ಎಂಎಗೆ ಪ್ರಸ್ತಾ ವನೆ ಕಳುಹಿಸಿದ್ದೇವೆ. ಅನುಮತಿ ಬಂದ ಅನಂತರ ಮರಳು ತೆರವುಗೊಳಿ ಸಲಾಗುವುದು. ಒಂದು ವಾರ/ 10 ದಿನಗಳಲ್ಲಿ ಅನುಮತಿ ಬರಬಹುದು. ಈಗ ಸದ್ಯ ಮರಳು ತೆಗೆಯುವುದನ್ನು ನಿಲ್ಲಿಸಿದ್ದೇವೆ. ಇಷ್ಟು ಕಡಿಮೆ ಅವಧಿ ಯಲ್ಲಿ 4 ಲ.ಮೆ.ಟನ್‌ ಮರಳು ಬಳಕೆಯಾಗಿದೆ ಎನ್ನುವುದು ಸಂಶಯ ಮೂಡಿಸುತ್ತದೆ ಎಂದರು.

ಅಕ್ರಮ ಪತ್ತೆಗೆ ಕ್ರಮ
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅನಧಿಕೃತ ಮರಳು ದಾಸ್ತಾನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಮರಳು ತುಂಬಿದ ವಾಹನಗಳು ಸ್ಟಾಕ್‌ ಯಾರ್ಡ್‌ನಿಂದ ಹೊರಟಿರುವ ಮತ್ತು ಮರಳು ವಿತರಣೆ ಮಾಡಿರುವ ಪ್ರದೇಶಗಳ ಮಾಹಿತಿಯನ್ನು ಮರಳು ಸಾಗಾಟ ವಾಹನಗಳಿಗೆ ಅಳವಡಿಸಿ ರುವ ಜಿಪಿಎಸ್‌ ಮೂಲಕ ಪತ್ತೆಹಚ್ಚಲಾ ಗುತ್ತಿದ್ದು, ಅನಧಿಕೃತವಾಗಿ ಮರಳು ದಾಸ್ತಾನು ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾ ಗುವುದು ಎಂದರು.

ಶಾಸ್ತ್ರಿ ಸರ್ಕಲ್‌
ಕಾಮಗಾರಿ ಪ್ರಗತಿ
ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ರಾ.ಹೆ. ಕಾಮಗಾರಿ ತ್ವರಿತಗೊಳಿಸಲು ಮಂಗಳೂರು ಪಂಪ್‌ವೆಲ್‌ನಿಂದ ಕಾರ್ಮಿಕರು, ಯಂತ್ರಗಳನ್ನು ಸ್ಥಳಾಂತ ರಿಸಿದ್ದಾರೆ. ಮಾ. 31ರ ಒಳಗೆ ಕಾಮಗಾರಿ ಮುಗಿಸಬೇಕಾಗಿದೆ. 1 ತಿಂಗಳು ಹೆಚ್ಚಿಗೆ ಕೇಳಿದ್ದಾರೆ. ಕೆಲಸದ ಪ್ರಗತಿ ನೋಡಿ ನಿರ್ಧಾರ ತಳೆಯುತ್ತೇವೆ ಎಂದು ಹೇಳಿದ್ದೇನೆ. ಪಡುಬಿದ್ರಿಯಲ್ಲಿಯೂ ರಾ.ಹೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಡಿಸಿ ತಿಳಿಸಿದರು.

ಮೈಕ್ರೋ ಫೈನಾನ್ಸ್‌ – ಆರ್‌ಬಿಐ
ಮೈಕ್ರೋ ಫೈನಾನ್ಸ್‌ನವರ ಕುರಿತು ಗಮನ ಸೆಳೆದಾಗ, ಮೈಕ್ರೋ ಫೈನಾನ್ಸ್‌ ನವರ ಸಭೆ ನಡೆಸಿ ಆರ್‌ಬಿಐ ಮಾರ್ಗ ದರ್ಶಿ ಸೂತ್ರಗಳನ್ನು ಪಾಲಿಸಲು ಸೂಚಿಸಿ ದ್ದೇನೆ. ಇವರೂ ಆರ್‌ಬಿಐ ಸೂತ್ರ ಪಾಲಿಸಬೇಕು, ಸಾಲ ಪಡೆದುಕೊಂಡ ವರೂ ಪಾಲಿಸಬೇಕು. ಸದ್ಯ ಋಣಮುಕ್ತ ಕಾಯಿದೆ ಇಲ್ಲ. ಹೀಗಾಗಿ ಅದರಡಿ ಮೈಕ್ರೋ ಫೈನಾನ್ಸ್‌ ಬರುವುದಿಲ್ಲ. ಈಗ ಏನಿದ್ದರೂ ಆರ್‌ಬಿಐ ಮಾರ್ಗದರ್ಶಿ ಸೂತ್ರ ಅನ್ವಯವಾಗಲಿದೆ. ಋಣಮುಕ್ತ ಕಾಯಿದೆಗೆ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದರಿಂದ ಅದು ತೆರವಾದ ಬಳಿಕವೇ ಅನ್ವಯವಾಗಲಿದೆ. ಸಂತ್ರಸ್ತರೆನಿಸಿದವರಲ್ಲಿ ಯಾರಾದರೂ ಹಣ ಕೇಳಿದರೆ ಕೊಡಬಾರದು ಎಂದು ತಿಳಿಸಿದರು.

Advertisement

ಭತ್ತಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ದರ
ಭತ್ತ ಖರೀದಿ ಕೇಂದ್ರಕ್ಕೆ ಭತ್ತ ಬಾರದೆ ಇರಲು ಮಾರುಕಟ್ಟೆಯಲ್ಲಿ ಅದಕ್ಕಿಂತ ಹೆಚ್ಚು ದರ ಸಿಗುವುದೇ ಕಾರಣ. ಸರಕಾರದ ಉದ್ದೇಶವೂ ರೈತರಿಗೆ ಹೆಚ್ಚಿನ ದರ ಸಿಗಬೇಕೆಂಬುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಇಂದಿನಿಂದ ಬೆಳೆ ಸಾಲ ಅಭಿಯಾನ
ಉಡುಪಿ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಅರ್ಜಿ ಸಲ್ಲಿಸಿದವರ ಸಂಖ್ಯೆಗೂ ಬೆಳೆ ಸಾಲ ಪಡೆದ ರೈತರ ಸಂಖ್ಯೆಗೂ ಭಾರೀ ವ್ಯತ್ಯಾಸವಿರುವ ಕಾರಣ ಸರಕಾರದ ನಿರ್ದೇಶನದಂತೆ ಫೆ. 8ರಿಂದ 24ರ ವರೆಗೆ ಬೆಳೆ ಸಾಲ ಅಭಿಯಾನವನ್ನು ಎಲ್ಲ ಬ್ಯಾಂಕುಗಳೂ ನಡೆಸಲಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿಲ್ಲಾ ಅಗ್ರಣಿ ಬ್ಯಾಂಕ್‌ ಪ್ರಬಂಧಕ ರುದ್ರೇಶ್‌ ಮತ್ತು ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರಕಾರದ 6,000 ರೂ., ರಾಜ್ಯ ಸರಕಾರದ 4,000 ರೂ. ನೆರವು ಕಿಸಾನ್‌ ಸಮ್ಮಾನ್‌ ಯೋಜನೆಯಡಿ ನಾಲ್ಕು ಕಂತುಗಳಲ್ಲಿ ಸಿಗಲಿದೆ. ಜಿಲ್ಲೆಯಲ್ಲಿ 1,34,217 ರೈತರು ಅರ್ಜಿ ಸಲ್ಲಿಸಿದ್ದು ಕೆಲವರಿಗೆ ಎರಡು, ಮೂರು ಕಂತುಗಳು ಸಿಕ್ಕಿವೆ. ಕೆಲವರಿಗೆ ಕೊನೆಯ ಕಂತೂ ಬಂದಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವೇ ಮಂದಿಗೆ ಬಂದಿಲ್ಲ; ಅದನ್ನು ಪರಿಹರಿಸಲಾಗುತ್ತಿದೆ. ಆದರೆ ರಾಷ್ಟ್ರೀಕೃತ, ಗ್ರಾಮೀಣ, ಡಿಸಿಸಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದುಕೊಂಡವರು ಕೇವಲ 30,940 ರೈತರು. ರೈತರಾಗಿ ಅರ್ಜಿ ಸಲ್ಲಿಸಿದ 1,03,277 ಮಂದಿಗೆ ಬೆಳೆ ಸಾಲ ಸಿಗಲಿಲ್ಲ ಎಂಬ ಸೂಚನೆ ಇದು ಎಂದರು.

ಬ್ಯಾಂಕ್‌ನವರು ಸಾಲ ಕೊಡುತ್ತಿದ್ದಾರೋ ಇಲ್ಲವೋ? ಮಾಹಿತಿ ಕೊರತೆಯೋ ಎಂಬ ಸಂಶಯ ಮೂಡುತ್ತಿದೆ. ಬ್ಯಾಂಕ್‌ನವರಿಗೆ ಬೆಳೆ ಸಾಲ ಕೊಡಲು ಸೂಚನೆ ನೀಡಲಾಗಿದೆ. ಇನ್ನೊಮ್ಮೆ ಸಭೆ ಕರೆದು ಯಾವುದೇ ವಿಳಂಬವಿಲ್ಲದೆ ಸಾಲ ಕೊಡಲು ಸೂಚನೆ ನೀಡಲಾಗುವುದು. ಅಭಿಯಾನದ ಅವಧಿಯಲ್ಲಿ ರೈತರು ಬೆಳೆಸಾಲಕ್ಕೆ ಹೆಸರು ನೋಂದಾಯಿಸಬಹುದು. ಕಡಿಮೆ ಜಾಗವಿದ್ದವರಿಗೂ ಸಾಲ ನೀಡಲಾಗುವುದು. ಅಗತ್ಯವಿರುವವರಿಗೆ ಸಾಲ ಸಿಗುವುದಿಲ್ಲ ಎಂದಾಗಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು

ಬ್ಯಾಂಕ್‌ ಅಧಿಕಾರಿಗಳು ಬೆಳೆ ಸಾಲ ನೀಡುವುದಿಲ್ಲ ಎಂದು ಹೇಳಿದರೆ, ಅನಗತ್ಯವಾಗಿ ವಿಳಂಬ ಮಾಡಿದರೆ ಜಿಲ್ಲಾ ಅಗ್ರಣಿ ಬ್ಯಾಂಕ್‌ ಪ್ರಬಂಧಕ ರುದ್ರೇಶ್‌ (9449860858), ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ (8277932500), ಉಪನಿರ್ದೇಶಕ ಚಂದ್ರಶೇಖರ್‌ (8277932501) ಅವರನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next