ಲಕ್ಷ್ಮೇಶ್ವರ: ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಪಂ ವ್ಯಾಪ್ತಿಯ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಸ್ಥಳಕ್ಕೆ ಸೋಮವಾರ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಇಲ್ಲಿನ ದೊಡ್ಡ ಹಳ್ಳಕ್ಕೆ ಹೊಂದಿಕೊಂಡಿರುವ ಸರ್ವೇ ನಂ.71ರ 6.02ಎಕರೆ ಸ್ಮಶಾನ ಭೂಮಿಯಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಯ ಕಣ³ತ್ತಪ್ಪಿಸಿ ಹಗಲು, ರಾತ್ರಿ ಮರಳನ್ನು ಲೂಟಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತು. ಸ್ಮಶಾನ ಭೂಮಿಯಲ್ಲಿ ಗುಹೆಯಾಕಾರದ ಹತ್ತಾರು ಅಡಿ ಆಳ ತೋಡಿ ಮರಳನ್ನು ತೆಗೆದು ಸಾಗಾಣಿಕೆ ಮಾಡಲಾಗಿದೆ. ಅಲ್ಲದೇ, ಮರಳು ತೆಗೆದ ಮೇಲೆ ಉಂಟಾಗಿರುವ ಗುಂಡಿಗಳನ್ನು ಜೆಸಿಬಿ ಬಳಸಿ ಮುಚ್ಚಲಾಗಿದೆ.
ಕಳೆದ ಅನೇಕ ವರ್ಷಗಳಿಂದ ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಸಾಗಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ ಎಂಬ ಮಾಹಿತಿಯನ್ನು ಸ್ಥಳೀಯರಿಂದ ಪಡೆದುಕೊಂಡರು. ಬಳಿಕ ಗ್ರಾಮ ಲೆಕ್ಕಾಧಿಕಾರಿ ಆರ್.ಟಿ. ನೆಗಳೂರ ಮತ್ತು ಪಿಡಿಒ ಎಂ.ಆರ್. ಮಾದರ ಅವರಿಗೆ ಸ್ಮಶಾನ ಭೂಮಿಯ ಸುತ್ತಲೂ ಆಳವಾದ ತಗ್ಗು(ಟ್ರೆಂಚ್)ತೋಡಿಸುವಂತೆ ಮತ್ತು ಸ್ಮಶಾನ ಭೂಮಿ ಸುತ್ತಲಿನ ರೈತರು ಮರಳು ದಂಧೆಕೋರರಿಗೆ ರಸ್ತೆ ಅವಕಾಶ ಕಲ್ಪಿಸಕೂಡದು. ಹಾಗೂ ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಈ ವೇಳೆ ಗ್ರಾಮದ ಕೆಲವರು ಮಾತನಾಡಿ, ಇಲ್ಲಿ ಕಳೆದ ಏಳೆಂಟು ವರ್ಷದಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ. ಗ್ರಾಮದಿಂದ ದೂರವಿರುವ ಈ ಸ್ಮಶಾನಭೂಮಿ ಹೆಸರಿಗೆ ಮಾತ್ರ ಆದಂತಾಗಿದೆ. ಅಧಿಕಾರಿಗಳು ಏನೆಲ್ಲ ಸರ್ಕಸ್ ಮಾಡಿದರೂ ಈ ಅಕ್ರಮ ದಂಧೆ ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಸ್ಮಶಾನ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಗ್ರಾಮದ ಹತ್ತಿರ ಬೇರೆ ಸ್ಮಶಾನ ಭೂಮಿ ವ್ಯವಸ್ಥೆ ಮಾಡಬೇಕು. ಇಲ್ಲಿ ಮರಳು ತೆಗೆಯಲು ಅ ಧಿಕೃತ ಪರವಾನಗಿ ನೀಡಿದರೆ ಸರ್ಕಾರಕ್ಕೆ ರಾಜಸ್ವವಾದರೂ ಸಂಗ್ರಹವಾಗುತ್ತದೆ ಮತ್ತು ಗ್ರಾಮದ ಜನರ ಸ್ಮಶಾನಭೂಮಿ ಸಮಸ್ಯೆಗೂ ಪರಿಹಾರ ಸಿಕ್ಕಂತಾಗುತ್ತದೆ ಎಂದರು.
ಎಲ್ಲವನ್ನೂ ಆಲಿಸಿದ ತಹಶೀಲ್ದಾರ್‌ರು, ಈ ಬಗ್ಗೆ ಸಮಗ್ರ ವರದಿಯನ್ನು ಜಿಲ್ಲಾ ಧಿಕಾರಿಗಳಿಗೆ ಸಲ್ಲಿಸಲಾಗುವುದು ಮತ್ತು ಇಲ್ಲಿನ ಅಕ್ರಮ ತಡೆಯಲು ಪೊಲೀಸರು, ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಪಂ ಆಡಳಿತ ಮಂಡಳಿಗೆ ಸೂಚಿಸಲಾಗುವುದು ಎಂದರು. ಈ ವೇಳೆ ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಪಿ.ಎಂ.ಬಡಿಗೇರ, ಗ್ರಾಪಂ ಸಿಬ್ಬಂದಿ, ಗ್ರಾಪಂ ಸದಸ್ಯರು ಇದ್ದರು.