ಮಂಜೇಶ್ವರ: ಮಂಜೇಶ್ವರ ಕುಂಡು ಕೊಳಕೆ ಬೀಚ್ ಪರಿಸರದಿಂದ ರಾತ್ರಿ 8 ಗಂಟೆಯಿಂದ ಮುಂಜಾನೆ 5 ಗಂಟೆಯ ತನಕ ಎಗ್ಗಿಲ್ಲದೆ ಸಾಗುತ್ತಿರುವ ಅಕ್ರಮ ಮರಳು ಸಾಗಾಟವನ್ನು ತಡೆಯಲು ಪರಿಸರ ವಾಸಿಗಳು ಕಾನೂನು ಪಾಲಕರಲ್ಲಿ ಹಲವು ಬಾರಿ ಆಗ್ರಹಿಸಿದ್ದರೂ ಈ ಬಗ್ಗೆ ಕಿಂಚತ್ತೂ ತಲೆಕೆಡಿಸಿಕೊಳ್ಳದ ಕಾನೂನು ಪಾಲಕರ ವಿರುದ್ಧ ಆಕ್ರೋಶಗೊಂಡ ಸ್ಥಳೀಯರು ಶುಕ್ರವಾರ ಮುಂಜಾನೆ ಯುವಕರು,ವೃದ್ಧರು, ಮಹಿಳೆಯರು ಸೇರಿ ಮರಳು ಸಾಗಾಟ ಮಾಡುತ್ತಿರುವ ಟಿಪ್ಪರ್ ಲಾರಿಗಳನ್ನು ತಡೆದಿದ್ದಾರೆ.
ಈ ಸಂದರ್ಭ ರೊಚ್ಚಿಗೆದ್ದ ಮರಳು ಮಾಫಿಯಾ ತಂಡ ಮಾರಕಾಯುಧಗಳಿಂದ ಊರವರನ್ನು ಆಕ್ರಮಿಸಲು ಬಂದಿದ್ದಾರೆ. ಮಾತ್ರ ವಲ್ಲದೆ ಸ್ಥಳೀಯ ನಿವಾಸಿಯೊಬ್ಬರ ಮನೆ ಯವರ ಗೇಟನ್ನು ಮುರಿದು ಹಾಕಿ ಅವರಿಗೆ ಹಲ್ಲೆಗೈದಿರು ವುದಾಗಿ ದೂರಲಾಗಿದೆ. ಮಾತ್ರವಲ್ಲದೆ ತಡೆ ಹಿಡಿದ 5 ವಾಹನಗಳ ಪೈಕಿ ನಾಲ್ಕು ಟಿಪ್ಪರ್ ಲಾರಿಗಳನ್ನು ಬಲ ಪ್ರಯೋಗಿಸಿ ಕೊಂಡು ಹೋಗಿ ಊರವರಿಗೆ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಮಂಜೇಶ್ವರ ಕುಂಡುಕೊಳಕೆ ಬೀಚ್ ಪರಿಸರದಿಂದ ನಂಬ್ರ ಪ್ಲೇಟ್ ಅಳವಡಿಸದ ಟಿಪ್ಪರ್ ಲಾರಿ ಹಾಗೂ ಪಿಕಪ್ ವಾಹನಗಳಲ್ಲಿ ಪ್ರತೀ ದಿನ ರಾತ್ರಿ 50 ಲೋಡ್ ಮರಳು ಸಾಗಾಟವಾಗುತ್ತಿರು ವುದಾಗಿ ಊರವರು ಹೇಳುತಿದ್ದಾರೆ.
ಕಡಲ್ಕೊರೆತದಿಂದ ಹಲವಾರು ಮನೆಗಳು ಕಡಲು ಪಾಲಾಗುತ್ತಿರುವುದು ದಿನ ನಿತ್ಯದ ದೃಶ್ಯವಾಗಿದ್ದರೂ ಕುಂಡುಕೊಳಕೆ ಬೀಚ್ ಪರಿಸರದಿಂದ ತೆಗೆದ ಮರಳಿನಿಂದಾಗಿ ಅಲ್ಲಲ್ಲಿ ಆಳವಾದ ಹೊಂಡ ಸೃಷ್ಟಿಯಾಗಿದೆ. ಇದೆಲ್ಲವನ್ನೂ ಕಂಡೂ ಕಾಣದಂತೆ ನಟಿಸುತ್ತಿರುವ ಕಾನೂನು ಪಾಲಕರ ವಿರುದ್ಧ ನಾಗರಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಊರವರು ತಡೆದ 5 ವಾಹನಗಳ ಪೈಕಿ ಒಂದು ಮಾತ್ರ ಅಲ್ಲಿ ಉಳಿದಿದ್ದು ಅದನ್ನು ಊರವರು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೂಡಲೇ ಕ್ರಮ ಕೈಗೊಳ್ಳದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟಕ್ಕೆ ಮುಂದಾಗು ವುದಾಗಿ ಊರವರು ಎಚ್ಚರಿಕೆ ನೀಡಿದ್ದಾರೆ.