ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ರಸ್ತೆಯಲ್ಲಿ ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಕೆ.ಪಿ.ಮೊಹಲ್ಲಾದ ಫರ್ಹಾದ್ ಉರ್ ರೆಹಮಾನ್ (33) ಮತ್ತು ಯಾಸಿರ್ ಅರಾಫತ್ (19) ಬಂಧಿತರು. ಇವರಿಂದ 8 ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಆಧರಿಸಿ ನಗರದ ಸೈಬರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹದೇವಶೆಟ್ಟಿ, ಸಬ್ ಇನ್ಸ್ಪೆಕ್ಟರ್ ಮಾದೇಶ್ ಹಾಗೂ ಸಿಬ್ಬಂದಿ ಖರೀದಿದಾರರಂತೆ ನಟಿಸಿ ದಾಳಿ ಮಾಡಿದ್ದರು. ಬಳಿಕ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು 3.50 ಲಕ್ಷ ರೂ. ಬೆಲೆಬಾಳುವ 8 ಹುಲಿ ಉಗುರುಗಳನ್ನು ವಶಪಡಿಸಿಕೊಂಡರು.
ಇದನ್ನೂ ಓದಿ:ಮೂಡಿಗೆರೆ: ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ : ಆರು ಮಂದಿ ಬಂಧನ, ನಗದು ವಶ
ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಚಾಮರಾಜನಗರ ವಲಯಾರಣ್ಯಾಧಿಕಾರಿ ವಶಕ್ಕೆ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಸೈಬರ್ ಠಾಣೆಯ ಸಿಬ್ಬಂದಿ ರಾಜು, ಮಂಜುನಾಥ, ಜಗದೀಶ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಹೇಮಂತಕುಮಾರ್, ಜಗದೀಶ್ ಪಾಲ್ಗೊಂಡಿದ್ದರು.