Advertisement

ಮಠದ ಆಸ್ತಿ ಅಕ್ರಮ ಮಾರಾಟ: ಆರೋಪ

11:06 AM Jun 01, 2019 | Suhan S |

ರಾಮನಗರ: ತಾಲೂಕಿನ ಕೇತೋಹಳ್ಳಿ ಗ್ರಾಮದಲ್ಲಿರುವ ವಿರೂಪಾಕ್ಷ ದೇವರ ಮಠದ ಸುಮಾರು 10 ಎಕರೆ ಜಮೀನಿ ಇಂದಿನ ಮಾರುಕಟ್ಟೆ ಬೆಲೆ ಕೋಟ್ಯಂತರ ರೂ. ಬೆಲೆ ಬಾಳುತ್ತದೆ. ಮಠದ ಸ್ವತ್ತನ್ನು ವಿರೂಪಾಕ್ಷ ಸ್ವಾಮೀಜಿ ಅವರು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ, ಸ್ವತ್ತು ಉಳಿಸಿಕೊಡಿ ಎಂದು ವೀರಶೈವ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಶೈವರ ಸಂಘದ ಅಧ್ಯಕ್ಷ ಎಂ.ಆರ್‌.ಶಿವಕುಮಾರಸ್ವಾಮಿ, ಕೇತೋಹಳ್ಳಿಯ ವಿರೂಪಾಕ್ಷ ಮಠದ ಆಸ್ತಿ ಭಕ್ತವೃಂದ ಆಸ್ತಿ. ಮಠದ ಸ್ವತ್ತನ್ನು ವಿರೂಪಾಕ್ಷ ಸ್ವಾಮೀಜಿ ಅವರು ಗೌಪ್ಯವಾಗಿ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾಮೀಜಿ ಅವರ ಸ್ವಯಾರ್ಜಿತ ಸ್ವತ್ತಲ್ಲ: ರಾಮನಗರ ತಾಲೂಕು ಕಸಬಾ ಹೋಬಳಿ ಕೇತೋಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 68ರಲ್ಲಿ 4 ಎಕರೆ 36 ಗುಂಟೆ ಹಾಗೂ ಸರ್ವೆ ಸಂಖ್ಯೆ 69ರಲ್ಲಿ 5 ಎಕರೆ 18 ಗುಂಟೆ ಜಮೀನು ಭಕ್ತರ ಮೂಲದಿಂದ ವಿರೂಪಾಕ್ಷ ದೇವರ ಮಠಕ್ಕೆ ಸೇರಿದ್ದಾಗಿದೆ. ಸದರಿ ಸ್ವತ್ತುಗಳಿಂದ ಬರುತ್ತಿದ್ದ ಆದಾಯ, ಉತ್ಪತ್ತಿ ಎಲ್ಲವೂ ಮಠದ ಅಭಿವೃದ್ಧಿಗೆ ಮೀಸಲಾಗಿದೆ. ಆಸ್ತಿ ವಿರೂಪಾಕ್ಷ ಸ್ವಾಮೀಜಿ ಹೆಸರಿನಲ್ಲಿದೆ. ಆದರೆ ಈ ಆಸ್ತಿ ಅವರ ಸ್ವಯಾರ್ಜಿತ ಸ್ವತ್ತಲ್ಲ ಎಂಬುದು ಮುಖ್ಯ ಎಂದರು.

ತಮ್ಮ ಸ್ವಯಾರ್ಜಿತ ಸ್ವತ್ತು ಎಂಬಂತೆ ಮಾರಾಟ ಮಾಡಿದ್ದು ಗುರುಪರಂಪರೆಗೆ ಮಾಡಿದ ಕಳಂಕ
ಸ್ವಾಮೀಜಿ ಮೇಲೆ ಮಠದ ಆಸ್ತಿ ಖಾಸಗಿ ವ್ಯಗಿಕೆ ಮಾರಾಟ ಮಾಡಿರುವ ಆರೋಪ ಸದರಿ ಸ್ವತ್ತುಗಳಿಂದ ಬರುತ್ತಿದ್ದ ಆದಾಯ, ಉತ್ಪತ್ತಿ ಎಲ್ಲವೂ ಮಠದ ಅಭಿವೃದ್ಧಿಗೆ ಮೀಸಲಾಗಿದೆ
ಕೋಟ್ಯಂತರ ರೂ. ಬೆಲೆ ಬಾಳುವ ಸ್ವತ್ತಿಗೆ ಕಡಿಮೆ ನೋಂದಣಿ ಶುಲ್ಕವನ್ನು ಪಾವತಿಸಲಾಗಿದೆ
ರಾಮನಗರ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಸದರಿ ಸ್ವತ್ತು ಖಾಸಗಿ ವ್ಯಕ್ತಿಗೆ ನೋಂದಣಿ
15 ಕೋಟಿ ಜಾಗವನ್ನು ಸ್ವಾಮೀಜಿ ಅಕ್ರಮವಾಗಿ 2.5 ಕೋಟಿ ರೂ.ಗೆ ತರಾತುರಿಯಲ್ಲಿ ಮಾರಾಟ ಮಾಡಿರುವ ವಿರೂಪಾಕ್ಷ ಸ್ವಾಮೀಜಿ

ರಾಮಲಿಂಗೇಶ್ವರ ಮಠದ ಶಾಖಾ ಮಠವಿದು: ಸದರಿ ಮಠವು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ರಾಮಲಿಂಗೇಶ್ವರ ಮಠದ ಶಾಖಾ ಮಠ ಎಂದು ಉಚ್ಚ ನ್ಯಾಯಾಲಯ 27.6.2015ರಲ್ಲಿ ಆದೇಶ ಮಾಡಿದೆ. ಹೀಗಾಗಿ ಸ್ವತ್ತು ಯಾವುದೇ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಹೀಗಿದ್ದರು ವಿರೂಪಾಕ್ಷ ಸ್ವಾಮೀಜಿ ಅವರು ಸ್ವಹಿತಾಸಕ್ತಿಗೆ ಹೆಚ್ಚು ಮಹತ್ವ ಕೊಟ್ಟು ಮೇ 20ರಂದು ಪರಮಶಿವಯ್ಯ ಎಂಬ ವ್ಯಕ್ತಿಗೆ ಕಾನೂನು ಬಾಹೀರವಾಗಿ ಮಾರಾಟ ಮಾಡಿದ್ದಾರೆ. ರಾಮನಗರ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಸದರಿ ಸ್ವತ್ತು ಖಾಸಗಿ ವ್ಯಕ್ತಿಗೆ ನೋಂದಾಯವಾಗಿದೆ. ಕೋಟ್ಯಂತರ ರೂ. ಬೆಲೆ ಬಾಳುವ ಸ್ವತ್ತಿಗೆ ಕಡಿಮೆ ನೋಂದಣಿ ಶುಲ್ಕವನ್ನು ಪಾವತಿಸಲಾಗಿದೆ. ನೋಂದಣಿಯನ್ನು ತಕ್ಷಣ ಜಿಲ್ಲಾಡಳಿತ ತಡೆಹಿಡಿಯಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು.

ಹೋರಾಟದ ಎಚ್ಚರಿಕೆ: ಅಕ್ರಮವಾಗಿ ಆಸ್ತಿ ಖರೀದಿಸಿದ ವ್ಯಕ್ತಿ ಜೂನ್‌ 1ರಂದು ಆಯೋಜಿಸಿರುವ ಕಾರ್ಯಕ್ರಮವನ್ನು ತಕ್ಷಣ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ತಕ್ಷಣ ತಡೆಯಬೇಕು. ಆಸ್ತಿಯನ್ನು ಮಠಕ್ಕೆ ವಹಿಸಬೇಕು, ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಸಭೆಯಲ್ಲಿ ಹಾಜರಿದ್ದ ವಿರೂಪಾಕ್ಷ ದೇವರ ಮಠದ ಭಕ್ತರು ಒಕ್ಕೊರಲಿನ ಎಚ್ಚರಿಕೆ ನೀಡಿದರು.

Advertisement

ಕೆ.ಎಂ.ಎಫ್ ಅಧ್ಯಕ್ಷ ಪಿ.ನಾಗರಾಜು ಮಾತನಾಡಿದರು. ವೀರಶೈವ ಮುಖಂಡರುಗಳಾದ ರಾಜಶೇಖರ್‌, ಚಂದ್ರಶೇಖರ್‌, ಯೋಗಾನಂದ್‌, ಹೊನ್ನಶೆಟ್ಟಿ, ಜಗದೀಶ್‌, ಡಿ.ಎಸ್‌.ಶಿವಕುಮಾರಸ್ವಾಮಿ, ವಿಭೂತಿಕೆರೆ ಶಿವಲಿಂಗಯ್ಯ, ಎ.ಜೆ.ಸುರೇಶ್‌, ಬಾಬು, ರೇಣುಕಾಪ್ರಸಾದ್‌, ಲೋಕೇಶ್‌, ಶಿವಶಂಕರ್‌, ಎಂ.ಮಹೇಶ್‌, ಶಿವಸ್ವಾಮಿ, ಚಂದ್ರಶೇಖರ್‌, ಬಸವಣ್ಣ, ಮಹದೇವು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಗುರು ಪರಂಪರೆಗೆ ಕಳಂಕ:

ವೀರಶೈವ ಮುಖಂಡ ಕೆ.ಎಸ್‌.ಶಂಕರಯ್ಯ ಮಾತನಾಡಿ, ಮಠಕ್ಕೆ ಸೇರಿದ ಸ್ವತ್ತನ್ನು ಸ್ವಾಮೀಜಿ ಅವರು ತಮ್ಮ ಸ್ವಯಾರ್ಜಿತ ಸ್ವತ್ತು ಎಂಬಂತೆ ಮಾರಾಟ ಮಾಡಿದ್ದು ಗುರುಪರಂಪರೆಗೆ ಮಾಡಿದ ಕಳಂಕ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಠದ ಅಭಿವೃದ್ಧಿಗೆ ಈ ಹಿಂದೆ ಸರ್ಕಾರದ ಅನುದಾನವನ್ನು ಪಡೆದುಕೊಳ್ಳಲಾಗಿದೆ. ಈ ಆಸ್ತಿ ಮಠದ ಆಸ್ತಿ ಎಂಬುದಕ್ಕೆ ಈ ನಿದರ್ಶನಗಳು ಸಾಕ್ಷಿ. ಸುಮಾರು 15 ಕೋಟಿಗೂ ಹೆಚ್ಚು ಮಾರುಕಟ್ಟೆ ಬೆಲೆ ಇರುವ ಆಸ್ತಿಯನ್ನು ಸ್ವಾಮೀಜಿ ಅವರು ಅಕ್ರಮವಾಗಿ 2.5 ಕೋಟಿ ರೂಗೆ ತರಾತುರಿಯಲ್ಲಿ ಮಾರಾಟ ಮಾಡಿದ್ದಾರೆ. ಈ ವಿಚಾರ ಗ್ರಾಮಸ್ಥರಿಗೆ ತಡವಾಗಿ ಗೊತ್ತಾಗಿದೆ ಎಂದರು. ಮಠದ ಆಸ್ತಿಯನ್ನು ಅಕ್ರಮವಾಗಿ ಖರೀದಿಸಿರುವ ಪರಮಶಿವಯ್ಯ ಎಂಬ ಖಾಸಗಿ ವ್ಯಕ್ತಿ ಎಂ.ಎಸ್‌.ಎಸ್‌. ಟ್ರಸ್ಟ್‌ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಆಸ್ತಿ ಕಬಳಿಸುವ ದುರುದ್ದೇಶದಿಂದ ಸ್ಥಾಪನೆಯಾಗಿರುವ ಸಂಘಟನೆ ಇದು. ವೃದ್ಧಾಶ್ರಮ ಮತ್ತು ವಿಕಲ ಚೇತನ ಆಶ್ರಮಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಇದೇ ಜೂನ್‌ 1ರಂದು ಆಯೋಜಿಸಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಗಳು ತಕ್ಷಣ ಈ ಕಾರ್ಯಕ್ರಮವನ್ನು ನಿಲ್ಲಿಸಬೇಕು. ಮಠದ ಸ್ವತ್ತನ್ನು ಯಾವುದೇ ಕಾರಣಕ್ಕೂ ಇತರರಿಗೆ ಮಾರಾಟ ಮಾಡುವುದನ್ನು ತಡೆ ಹಿಡಿಯಬೇಕು. ಸ್ವತ್ತನ್ನು ಮಠದ ಸುಪರ್ದಿಗೆ ನೀಡಬೇಕು ಎಂದು ಒತ್ತಾಯಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next