ಚಿಂಚೋಳಿ: ತಾಲೂಕಿನ ಕಲ್ಲೂರ-ಮಿರಿಯಾಣ ಗ್ರಾಮಗಳ ಮಧ್ಯೆ ಇರುವ ಪದ್ಮನಾಭ ಫ್ಯೂಲ್ಸ್ ಪೆಟ್ರೋಲ್ ಪಂಪ್‌ನಿಂದ ರಾತ್ರಿ ವೇಳೆ ಟ್ಯಾಂಕರ್‌ದಲ್ಲಿ ಡೀಸೆಲ್ ತುಂಬಿಕೊಂಡು ಅಕ್ರಮವಾಗಿ ಮಾರಾಟ ಮಾಡಲು ತೆಲಂಗಾಣದ ನಿಜಾಮಬಾದ ವಿಕಾರಬಾದ ಜಿಲ್ಲೆಗಳಿಗೆ ಹೊರಟಿದ್ದ ಮೂರು ಟ್ಯಾಂಕರ್‌ಗಳನ್ನು ಮಿರಿಯಾಣ ಪೊಲೀಸರು ದಾಳಿ ನಡೆಸಿ, ಲಾರಿ ಚಾಲಕನನ್ನು ಬಂಧಿಸಿ ಡೀಸೆಲ್ ತುಂಬಿದ ಟ್ಯಾಂಕರ್ ವಶಪಡಿಸಿಕೊಂಡಿದ್ದಾರೆ ಎಂದು ಸಿಪಿಐ ಮಹಾಂತೇಶ ಪಾಟೀಲ ತಿಳಿಸಿದ್ದಾರೆ.
ಮಿರಿಯಾಣ ಗ್ರಾಮದ ಹತ್ತಿರ ಇರುವ ಪದ್ಮಾನಾಭ ಪೆಟ್ರೋಲ್ ಬಂಕ್ ನಿಂದ ಅಕ್ರಮವಾಗಿ ತೆಲಂಗಾಣ ರಾಜ್ಯದ ವಿಕಾರಬಾದ ಮತ್ತು ನಿಜಾಮಬಾದ ಜಿಲ್ಲೆಗಳಲ್ಲಿ ಹೆಚ್ಚು ದರಕ್ಕೆ ಮಾರುವುದಕ್ಕಾಗಿ ಇಲ್ಲಿಂದ ರಾತ್ರಿ ವೇಳೆ ತೆಲಂಗಾಣ ರಾಜ್ಯದ ಟ್ಯಾಂಕರ್‌ಗಳಲ್ಲಿ ಡೀಸೆಲ್ ತುಂಬಿಸಿಕೊಂಡು ಹೊರಟಿರುವ ವಾಹನಗಳನ್ನು ಖಚಿತ ಮಾಹಿತಿ ಆಧರಿಸಿ 112 ಪೊಲೀಸರು ದಾಳಿ ಮಾಡಿ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡು ಮಿರಿಯಾಣ ಪೋಲಿಸರಿಗೆ ಒಪ್ಪಿಸಿದ್ದಾರೆ.
ಚಿಂಚೋಳಿ ಪೊಲೀಸ್ ಠಾಣೆಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನಕುಮಾರ ದೇಸಾಯಿ ಭೇಟಿ ನೀಡಿದ ಸಂದರ್ಭದಲ್ಲಿ ತಾಲೂಕಿನ ಗಡಿಪ್ರದೇಶದಲ್ಲಿ ಕೆಲವು ಪೆಟ್ರೋಲ್ ಪಂಪ್‌ಗ್ಳಿಂದ ಅಕ್ರಮವಾಗಿ ಪೆಟ್ರೋಲ್, ಡೀಸೆಲ್ ತೆಲಂಗಾಣ ರಾಜ್ಯಗಳಿಗೆ ಟ್ಯಾಂಕರ್‌ಗಳನ್ನು ತುಂಬಿ ಸಾಗಿಸಲಾಗುತ್ತಿದೆ. ಅಂತವರವನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಶುಕ್ರವಾರ ರಾತ್ರಿ 10ಗಂಟೆಗೆ ತೆಲಂಗಾಣ ರಾಜ್ಯದ ಟ್ಯಾಂಕ್‌ನಲ್ಲಿ ಆರು ಸಾವಿರ ಲೀಟರ್ ಡೀಸೆಲ್ ತುಂಬಿಕೊಂಡು ಹೊರಟಿದ್ದ ಲಾರಿ ಚಾಲಕ ಶೇಖ ಯೂಸೂಫ್ ನಿಜಾಮಾಬಾದ ಎನ್ನುವನನ್ನು ವಿಚಾರಿಸಿದಾಗ ಮಾಲಿಕ ನವೀನಕುಮಾರ ಎನ್ನುವವರು ಇಲ್ಲಿಂದ ಡೀಸೆಲ್ ತುಂಬಿಕೊಂಡು ಬರುವಂತೆ ಹೇಳಿದ್ದರಿಂದ ಟ್ಯಾಂಕರ್‌ದಲ್ಲಿ ತುಂಬಿಕೊಂಡು ವಿಕಾರಾಬಾದಗೆ ಕೊಂಡ್ನೂತ್ತಿದ್ದೇನೆ ಎಂದು ತಿಳಿಸಿದ್ದಾನೆ.
ಚಿಂಚೋಳಿ ತಾಲೂಕಿನ ಮಿರಿಯಾಣ ಗ್ರಾಮದ ಪದ್ಮನಾಭನ್ ಪೆಟ್ರೋಲ್ ಬಂಕನಿಂದ ತೆಲಂಗಾಣ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಡಿಸೇಲ್ ಟ್ಯಾಂಕರ್ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಪೆಟ್ರೋಲ್ ಬಂಕ ಮಾಲೀಕ ಚಂದ್ರಕಾಂತರೆಡ್ಡಿ ಮಿರಿಯಾಣ ಎನ್ನುವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕಲಬುರಗಿ ನಗರದಿಂದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ವತಿಯಿಂದ ಪ್ರತಿ ದಿವಸ 20ಸಾವಿರ ಲೀಟರ್ ಡೀಸೆಲ್ ತರಿಸಲಾಗುತ್ತಿದೆ. ಅದರಂತೆ ಪ್ರತಿನಿತ್ಯ 16ಸಾವಿರ ಲೀಟರ್ ಡೀಸೆಲ್ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾನೆ.
ಪದ್ಮಾನಾಭನ್ ಪೆಟ್ರೋಲ್ ಪಂಪ್‌ನಲ್ಲಿ ರಾತ್ರಿ ಸಮಯ ದಲ್ಲಿ ತೆಲಂಗಾಣ ರಾಜ್ಯದ ಟ್ಯಾಂಕರ್‌ಗಳು ಡೀಸೆಲ್ ತುಂಬಿಸಿಕೊಂಡು ಸಂಚರಿಸುತ್ತಿದ್ದರೂ, ಹೆದ್ದಾರಿಯಲ್ಲಿಯೇ ಮಿರಿಯಾಣ ಪೊಲೀಸ್ ಠಾಣೆ ಇದ್ದರೂ ಪೊಲೀಸರು ಗಮನಹರಿಸದೇ ಇರುವುದು ಗಮನಾರ್ಹ ವಿಷಯವಾಗಿದೆ. ಲಾರಿ ಚಾಲಕನ ವಿರುದ್ಧ ಮಿರಿಯಾಣ ಸಬ್ ಇನ್ಸಪೆಕ್ಟರ್ ನಿಂಗಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸಿಪಿಐ ಮಹಾಂತೇಶ ಪಾಟೀಲ ತಿಳಿಸಿದ್ದಾರೆ.