Advertisement

ಅಕ್ರಮ ಮರಳುಗಾರಿಕೆ: ತಹಶೀಲ್ದಾರ್‌ ತರಾಟ

10:44 AM Oct 06, 2018 | Team Udayavani |

ಚಿಂಚೋಳಿ: ಅಕ್ರಮ ಮರಳು ಸಾಗಿಸುವ ಲಾರಿ ಹಿಡಿಯಲು ಹೋದಾಗ ಚಾಲಕ ನನ್ನ ಮೇಲೆ ಲಾರಿ ಹಾಯಿಸಲು ಬಂದಿದ್ದ, ತಾಲೂಕಿನಲ್ಲಿ ನಾನೊಬ್ಬನೇ ಅಧಿಕಾರಿ ಇರುವುದಾ? ತಾಪಂ ಇಒ ಹಾಗೂ ಲೋಕೋಪಯೋಗಿ ಇಲಾಖೆ ಎಇಇಗೆ ಯಾವುದೇ ಜವಾಬ್ದಾರಿ ಇಲ್ಲವೇ ಎಂದು ತಹಶೀಲ್ದಾರ್‌ ಪಂಡಿತ ಬಿರಾದಾರ ತರಾಟೆ ತೆಗೆದುಕೊಂಡರು.

Advertisement

ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಹಲಕೋಡಾ, ಪೋತಂಗಲ ಗ್ರಾಮಗಳಲ್ಲಿ ಹರಿಯುವ ಮುಲ್ಲಾಮಾರಿ ಕಾಗಿಣಾ ನದಿಯಲ್ಲಿನ ಬೆಲೆ ಬಾಳುವ ಉಸುಕನ್ನು ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಲಾರಿಗಳ ಮೂಲಕ ಸಾಗಿಸಲಾಗುತ್ತಿದೆ. ಇದನ್ನು ತಡೆಯಲು ಹೋದರೆ ಜೀವಕ್ಕೆ ಅಪಾಯ ಎದುರಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ತಾಪಂ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಮಾತನಾಡಿ, ಹಲಕೋಡಾ, ಪೋತಂಗಲ್‌, ಮುಲ್ಲಾಮಾರಿ, ಕಾಗಿಣಾ ನದಿ ಪಾತ್ರದಲ್ಲಿನ ಬೆಲೆ ಬಾಳುವ ಉಸುಕನ್ನು ಬೇಕಾಬಿಟ್ಟಿಯಾಗಿ ಲಾರಿಗಳ ಮೂಲಕ ಸಾಗಿಸಲಾಗುತ್ತಿದೆ. ಸರಕಾರಕ್ಕೆ ಕೇವಲ ಒಂದು ರಾಯಲ್ಟಿ ತುಂಬಿ, ಒಂದೇ ಚೀಟಿಯಿಂದ ನಾಲ್ಕು ಟಿಪ್ಪರ ಉಸುಕು ಸಾಗಿಸಲಾಗುತ್ತಿದೆ. ಕಂದಾಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆಯೇ ಎಂದು ಕೇಳಿದಾಗ ತಹಶೀಲ್ದಾರರು ಹಾಗೂ ತಾಪಂ ಇಒ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಅಕ್ರಮವಾಗಿ ಉಸುಕು ತುಂಬಿದ ಲಾರಿಗಳನ್ನು ಜಪ್ತಿ ಮಾಡುವ ಅಧಿಕಾರ ನನಗೊಬ್ಬನಿಗೆ ಇಲ್ಲ. ಲೋಕೋಪಯೋಗಿ ಇಲಾಖೆ ಎಇಇ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಪೋಲಿಸರ ಕರ್ತವ್ಯವೂ ಆಗಿದೆ. ನಿಡಗುಂದಾ ಗ್ರಾಮದ ಹತ್ತಿರ ಉಸುಕು ತುಂಬಿ ಲಾರಿ ನಿಲ್ಲಿಸಲು ಹೋದಾಗ ಲಾರಿ ಚಾಲಕ ನನ್ನ ಮೇಲೆ ಲಾರಿ ಹಾಯಿಸಲು ಪ್ರಯತ್ನಿಸಿದ್ದ. ಇದಕ್ಕೆ ಯಾರು ಜವಾಬ್ದಾರರು ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡ ಕಾಮಗಾರಿಗಳು ಚುರುಕಿನಿಂದ ನಡೆಯುತ್ತಿಲ್ಲ. ಅನೇಕ
ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳ ಕೆಲಸ ನಿಂತುಕೊಂಡಿವೆ. ಸಮಸ್ಯೆ ಇದ್ದರೆ ನನಗೆ ಮಾಹಿತಿ ನೀಡಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ ಮೈನೋದ್ದೀನ್‌ ಪಟಲಿಕರ ಜಿಪಂ ಎಇಇ ಅಶೋಕ ತಳವಾಡೆ ಅವರಿಗೆ ತಿಳಿಸಿದರು. 

Advertisement

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಎಇ ನೀಲಕಂಠ ಮಾತನಾಡಿ, ಶುದ್ಧ ನೀರು
ಘಟಕ, ಅಂಗನವಾಡಿ ಕೇಂದ್ರ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಂಡಿವೆ ಎಂದು ತಿಳಿಸಿದಾಗ ಅನೇಕ ಗ್ರಾಮಗಳಲ್ಲಿ ಶುದ್ಧ ನೀರು ಘಟಕಗಳು ಹಾಳಾಗಿ ಹೋಗಿವೆ. ಕಿಟಕಿ ಗಾಜು ಒಡೆದಿವೆ. ಗಡಿಕೇಶ್ವಾರ ಗ್ರಾಮದಲ್ಲಿ ಜನರಿಗೆ ಶುದ್ಧ ನೀರು ಪೂರೈಕೆ ಆಗುತ್ತಿಲ್ಲ. ಏನು ಪ್ರಗತಿ ಮಾಡಿದ್ದಿರಿ. ಸುಳ್ಳು ವರದಿ ನೀಡಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ತಾಪಂ ಇಒ ಎಚ್ಚರಿಕೆ ನೀಡಿದರು. 

ಸಹಾಯಕ ಕೃಷಿ ನಿರ್ದೇಶಕ ಎಸ್‌. ಎಚ್‌. ಗಡಗಿಮನಿ ಮಾತನಾಡಿ, ತಾಲೂಕ  ಬರಗಾಲ ಪೀಡಿತ ಪ್ರದೇಶವೆಂದು
ಸರ್ಕಾರ ಘೋಷಿಸಿದೆ. ರೈತರ ಬೆಳೆಸಮೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಡಾ|ಧನರಾಜ ಬೊಮ್ಮ, ಸಿಡಿಪಿಒ ತಿಪ್ಪಣ್ಣ ಸರಡಗಿ, ಬಿಸಿಎಂ ಅಧಿಕಾರಿ ಶರಣಬಸಪ್ಪ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಾಂತಕುಮಾರ ಹಿರೇಮಠ, ಎಇಇ ಬಸವರಾಜ ನೇಕಾರ, ಎಇ ಗಿರಿರಾಜ ಸಜ್ಜನಶೆಟ್ಟಿ, ಎಇ ಕಲಿಮೋದ್ದೀನ್‌, ಬಿಇಒ ನಿಂಗಪ್ಪ ಸಿಂಪಿ ಪ್ರಗತಿ ವರದಿಯನ್ನು ವಿವರಿಸಿದರು. ವ್ಯವಸ್ಥಾಪಕ ಅಣ್ಣಾರಾವ್‌ ಪಾಟೀಲ ಸ್ವಾಗತಿಸಿದರು, ಚಂದ್ರಕಾಂತ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next