ಬೆಂಗಳೂರು: ವೀಸಾ ಅವಧಿ ಮುಗಿದ ಬಳಿಕವೂ ವಿದೇಶಿ ವಿದ್ಯಾರ್ಥಿಗಳು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, “ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಇದೊಂದು ಅಪಾಯಕಾರಿ ಬೆಳವಣಿಗೆ’ ಎಂದು ಆತಂಕ ವ್ಯಕ್ತಪಡಿಸಿದೆ.
ಆದ್ದರಿಂದ, ವೀಸಾ ಅವಧಿ ಮುಗಿದಿದ್ದರೂ ರಾಜ್ಯದಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು, ಅದರಲ್ಲಿ ಎಷ್ಟು ಮಂದಿ ತಲೆ ಮರೆಸಿಕೊಂಡಿದ್ದಾರೆ, ಅವರ ವಿರುದ್ಧ ಏನೆಲ್ಲ ಕ್ರಮಗಳನ್ನು ಕೈಗೊಳ್ಳಳಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವೀಸಾ ಅವಧಿ ಮುಗಿದ್ದಿದ್ದರೂ ರಾಜ್ಯದಲ್ಲಿ ವಾಸ ಮಾಡುತ್ತಿರುವ ಆರೋಪದಲ್ಲಿ ತನ್ನ ವಿರುದ್ಧ ದಾಖಲಿಸಿರುವ ದೂರು ಹಾಗೂ ವಿಚಾರಣೆ ರದ್ದುಗೊಳಿಸುವಂತೆ ಕೋರಿ ಕಾಂಗೋದ ವಿದ್ಯಾರ್ಥಿ ಹೊಸೈ ಬಿಕುಂಡ ಸಿಡ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರವಿಂದ ಕುಮಾರ್, ವೀಸಾ ಅವಧಿ ಮುಗಿದ ಬಳಿಕವೂ ವಿದೇಶಿ ವಿದ್ಯಾರ್ಥಿಗಳು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಹೇಳಿತು.
ವಿಚಾರಣೆ ವೇಳೆ, ಇದು ರಾಷ್ಟ್ರೀಯ ಭದ್ರತೆಗೆ ಅತ್ಯಂತ ಅಪಾಯಕಾರಿ. ಈ ರೀತಿ ವೀಸಾ ಅವಧಿ ಮುಗಿದ ಬಳಿಕ ಇಲ್ಲೇ ವಾಸ ಮಾಡುವ ಬಹುತೇಕ ವಿದೇಶಿ ವಿದ್ಯಾರ್ಥಿಗಳು ಮಾದಕ ದ್ರವ್ಯ ಮತ್ತಿತರರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪ್ರಕರಣಗಳು ಕಳವಳಕಾರಿ. ಆದ್ದರಿಂದ ಈ ವಿಚಾರದಲ್ಲಿ ಸರ್ಕಾರ ಅಗತ್ಯ ಸಹಕಾರ ನೀಡಬೇಕು ಎಂದು ಅಡ್ವೋಕೇಟ್ ಜನರಲ್ ಅವರಿಗೆ ನ್ಯಾಯಪೀಠ ನಿರ್ದೇಶನ ನೀಡಿತು.
ಜೊತೆಗೆ, “ಒಂದು ಅಂದಾಜಿನಂತೆ ವೀಸಾ ಅವಧಿ ಮುಗಿದಿದ್ದರೂ ಸಹ ರಾಜ್ಯದಲ್ಲಿ ಸುಮಾರು 25 ಸಾವಿರ ವಿದೇಶಿ ವಿದ್ಯಾರ್ಥಿಗಳು ಅಕ್ರಮವಾಗಿ ನೆಲೆಸಿದ್ದಾರೆ. ಅವರಲ್ಲಿ ಬಹುತೇಕರು ತಾಂಜೇನಿಯಾ, ಕಾಂಬೋಡಿಯಾ, ಕಾಂಗೋ ಮತ್ತಿತರ ದೇಶದ ವಿದ್ಯಾರ್ಥಿಗಳಾಗಿದ್ದು, ಬಹುತೇಕರು ಮಾದಕ ದ್ರವ್ಯ ಕಳ್ಳ ಸಾಗಣೆ ಮತ್ತಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇದು ಗಂಭೀರ ವಿಚಾರ’. ಆದ್ದರಿಂದ, ರಾಜ್ಯ ಸರ್ಕಾರ ಬೆಂಗಳೂರಿನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ)ಯಿಂದ ರಾಜ್ಯದಲ್ಲಿ ಎಷ್ಟು ಮಂದಿ ವಿದೇಶಿ ವಿದ್ಯಾರ್ಥಿಗಳ ವೀಸಾ ಅವಧಿ ಮುಗಿದಿದೆ, ಅವರನ್ನು ಗಡಿಪಾರು ಮಾಡಲು ಕೈಗೊಂಡಿರುವ ಕ್ರಮಗಳೇನು ಎಂದು ಮಾಹಿತಿ ಪಡೆದುಕೊಂಡುವ ವಿವರಿಸುವಂತೆ ಸೂಚಿಸಿ ವಿಚಾರಣೆಯನ್ನು ಏ.5ಕ್ಕೆ ಮುಂದೂಡಿತು.
ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ತಮ್ಮ ಕಕ್ಷಿದಾರ ಸಿಡ್ನಿ ವಿರುದ್ಧ 2017ರಲ್ಲಿಯೇ ಪ್ರಕರಣದ ದಾಖಲಿಸಿ ಕೊಂಡಿದ್ದರೂ, ಇಲ್ಲಿಯವರೆಗೆ ವಿಚಾರಣೆ ನಡೆಸಿಲ್ಲ. ಇತರೆ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ತಮ್ಮ ಕಕ್ಷಿದಾರರನ್ನು ಅಲೆದಾಡಿಸಲಾಗುತ್ತಿದೆ. ಆತನ ಪಾಸ್‌ಪೋರ್ಟ್ ವಶಪಡಿಸಿಕೊಂಡಿರು ವುದರಿಂದ ಆತ ಸ್ವದೇಶಕ್ಕೆ ಮರಳುವಂತೆಯೂ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.