ವರದಿ: ಡಾ|ಬಸವರಾಜ ಹೊಂಗಲ್
ಧಾರವಾಡ: ಸಾವಿರ ಕೋಟಿ ರೂ.ಗಳ ಯೋಜನೆಯಾದರೂ ಪ್ರಾರ್ಥನಾ ಸ್ಥಳದ ಬಳಿ ರಸ್ತೆಯೇ ಬದಿಗೆ ಸರಿದು ಹೋಗಿದೆ. ಕೋಟ್ಯಂತರ ರೂ. ಹಣ ಖರ್ಚು ಮಾಡಿ ಕಟ್ಟಿದ ಸಿಮೆಂಟ್ ಗಟಾರಗಳು ದೇವಸ್ಥಾನವೊಂದರ ಸಲುವಾಗಿ ತಿರುವು ತೆಗೆದುಕೊಂಡು ಮುನ್ನಡೆದಿವೆ. ಒಟ್ಟಾರೆ ಅಭಿವೃದ್ಧಿ ಯೋಜನೆಗಳಿಗೆ ಅನಧಿಕೃತವಾಗಿ ತಲೆ ಎತ್ತಿದ ಮಂದಿರ, ಮಸೀದಿಗಳು ಅಡ್ಡಲಾಗಿ ನಿಂತಿದ್ದು, ಇವುಗಳ ತೆರವಿಗೆ ಜಿಲ್ಲಾಡಳಿತ ಮೀನಾಮೇಷ ಎನಿಸುತ್ತಿದೆ.
ಹೌದು. ಮೈಸೂರಿನಲ್ಲಿ ಅನಧಿಕೃತ ದೇವಸ್ಥಾನಗಳ ತೆರವು ಕಾರ್ಯಾಚರಣೆ ಇದೀಗ ರಾಜ್ಯಾದ್ಯಂತ ಸದ್ದು ಮಾಡಿದ್ದು, ಧಾರವಾಡ ಜಿಲ್ಲೆಯಲ್ಲಿ ಕೂಡ ಅನಧಿಕೃತ ಮಂದಿರ ಮತ್ತು ಮಸೀದಿಗಳ ತೆರವು ವಿಚಾರ ಆಗಾಗ ಸದ್ದು ಮಾಡುತ್ತಲೇ ಬಂದಿದೆ. ಕರ್ನಾಟಕದ ಏಕೀಕರಣ ನಂತರ ಬೆಂಗಳೂರನ್ನು ಹೊರತು ಪಡಿಸಿದರೆ ಅತೀ ದೊಡ್ಡದಾಗಿ ಬೆಳೆದ ನಗರ ಹುಬ್ಬಳ್ಳಿ-ಧಾರವಾಡ ಅವಳಿನಗರ. ಶಿಕ್ಷಣ-ವ್ಯಾಪಾರ ಕೇಂದ್ರವಾಗಿ ರೂಪುಗೊಂಡ ಅವಳಿ ನಗರ ಯೋಜನಾಬದ್ಧವಾಗಿ ಬೆಳೆದಿದ್ದು ಕಡಿಮೆಯೇ.
ನಗರದ ಹಳೆ ಪ್ರದೇಶಗಳಲ್ಲಿ ಈಗಲೂ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿಯೇ ಇದ್ದು, ಇಂತಹ ಸೌಕರ್ಯಗಳ ವೃದ್ಧಿಗೆ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿದ ಪ್ರಾರ್ಥನಾ ಸ್ಥಳ ಮತ್ತು ಗುಡಿಗಳು ಅಡ್ಡಿಯಾಗಿ ನಿಂತಿವೆ. ಅವಳಿ ನಗರದ ಮಹತ್ವಾಕಾಂಕ್ಷಿ ಬಿಆರ್‌ಟಿಎಸ್ ಯೋಜನೆ ರೂಪುಗೊಳ್ಳುವಾಗ ಇಲ್ಲಿ 19 ದೇವಸ್ಥಾನಗಳು, 4 ದರ್ಗಾಗಳ ತೆರವು ಅನಿವಾರ್ಯವಾಗಿತ್ತು. ಜಿಲ್ಲಾಡಳಿತ ಬಳಿ ಇರುವ ಮಾಹಿತಿಯನ್ವಯ ಇಲ್ಲಿ ಕೂಡ 12 ದೇವಸ್ಥಾನಗಳನ್ನು ತೆರವುಗೊಳಿಸಲಾಗಿದೆ. ಆದರೆ ಇನ್ನೂ ಎರಡು ಪ್ರಾರ್ಥನಾ ಸ್ಥಳಗಳನ್ನು ತೆರವು ಮಾಡಿಲ್ಲ ಎನ್ನುವ ಆರೋಪ ಒಂದು ಕೋಮಿನವರಿಂದ ಕೇಳಿ ಬರುತ್ತಿದೆ.