ಆನೇಕಲ್: ಬಡವರ ಪರವಾಗಿ ನಿಲ್ಲುವುದೇ ಸರ್ಕಾರದ ಧ್ಯೇಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಹೇಳಿದರು. ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಡಿಕೆ ಶಿವಕುಮಾರ್ ಸರ್ಜಾಪುರದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ತಮಿಳುನಾಡಿಗೆ ಬಿಜೆಪಿಯವರು ಸಾಗಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ, ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಶುಕ್ರವಾರವೇ ಯಾವುದೇ ಅಕ್ರಮ ನಡೆದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಡೀ ರಾಜ್ಯದಲ್ಲಿ ಇಲಾಖೆ ಎಷ್ಟು ಗಂಭೀರವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಈ ಒಂದು ತಿಂಗಳಲ್ಲಿ 141 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಿರುವುದು ಇತಿಹಾಸದಲ್ಲೇ ಮೊದಲು ಎಂದು ಹೇಳಿದರು.
ಸರ್ಜಾಪುರದ ರೇಷ್ಮೆ ಬೆಳಗಾರರ ಹಾಗೂ ರೈತರ ಸೇವಾ ಸಹಕಾರಿ ಸಂಘಕ್ಕೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 16000 ಕ್ವಿಂಟಲ್ ಅಕ್ಕಿ ಬಂದಿದ್ದು, ಅವರಿಗೆ ಅದನ್ನು ದಾಸ್ತಾನು ಮಾಡಲು ಜಾಗ ಸಾಕಾಗದ ಹಿನ್ನೆಲೆಯಲ್ಲಿ ಖಾಸಗಿಯವರ ಜಾಗದಲ್ಲಿ ಇಟ್ಟಿದ್ದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ಪರವಾನಗಿ ಪಡೆದಿದ್ದರು. ಡಿಕೆ ಶಿವಕುಮಾರ್ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವೆಂದರು. ಎಸ್‌ಟಿಆರ್‌ಆರ್ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ, ಬಿಜೆಪಿ ಅವರು ಪಡಿತರ ಅಕ್ಕಿಯನ್ನು ಮಾರಾಟ ಮಾಡಿ ಜೀವನ ಮಾಡುತ್ತಿದ್ದಾರೆಂದು ಕಾಂಗ್ರೆಸ್ ನವರು ಆರೋಪಿಸಿದ್ದಾರೆ. ಅಂತಹ ಸಂಸ್ಕೃತಿ ಕಾಂಗ್ರೆಸ್‌ನವರಿಗಿದೆ. ಅವರೇ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಿ. ನಾವು ಎಲ್ಲದಕ್ಕೂ ಸಿದ್ಧ, ದೇಶದಲ್ಲಿ ಬಿಜೆಪಿಯ ಎಲ್ಲಾ ನಾಯಕರು ತಮ್ಮ ಸ್ವಂತ ಹಣದಿಂದ ನಿರಾಶ್ರಿತರಿಗೆ ಅನ್ನ ದಾಸೋಹ ದಿನಸಿ ಪದಾರ್ಥಗಳ ವಿತರಣೆ ಮಾಡುತ್ತಿದ್ದಾರೆಂದು ಹೇಳಿದರು.
ಜಿಲ್ಲಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಮಹದೇವಯ್ಯ, ಬೆಂಗಳೂರು ನಗರ ಜಿಪಂ ಅಧ್ಯಕ್ಷ ಮರಿಸ್ವಾಮಿ, ರೇಷ್ಮೆ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಸ್.ಟಿ.ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಮುರಳಿಕೃಷ್ಣ, ಮಂಡಲ ಅಧ್ಯಕ್ಷರಾದ ಎನ್.ಶಂಕರ್, ಜೈಪ್ರಕಾಶ್, ಅಶೋಕ್‌ರೆಡ್ಡಿ, ಮುಖಂಡರಾದ ಹುಲ್ಲಳ್ಳಿಶ್ರೀನಿವಾಸ್, ಟಿ.ಬಾಬು, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ರಾಘವೇಂದ್ರ ಮತ್ತಿತರರಿದ್ದರು.