ಹಾವೇರಿ: ಜಿಲ್ಲೆಯ ಕೆಲವು ರಾಜ ಕಾರಣಿಗಳು ತಮ್ಮ ಆಡಳಿತಾವಧಿಯಲ್ಲಿ ಬಡವರ ಹಣ ಲೂಟಿ ಮಾಡಿ ಅಕ್ರಮ ಆಸ್ತಿ ಸಂಪಾದನೆ ಮಾಡಿಕೊಂಡಿದ್ದು, ಚುನಾವಣೆ ಮುಗಿದ ಬಳಿಕ ಅವುಗಳನ್ನು ಬಯಲಿಗೆಳೆಯುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಕಬ್ಟಾರ ಹೇಳಿದರು.
ಸಿ.ಎಂ. ಉದಾಸಿ ಮತ್ತು ಶಿವಕುಮಾರ ಉದಾಸಿ ಮೂಲತಃ ಹಾವೇರಿ ಜಿಲ್ಲೆಯವರಲ್ಲ. ಇವರು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹರವಿ ಗ್ರಾಮದವರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಗದುಗಿನವರು. ಮನೆ ಮಗನಾದ ತಮ್ಮನ್ನು ಬೆಂಬಲಿಸಿ ಎಂದು ಹನುಮಂತಪ್ಪ ಕಬ್ಟಾರ ಮನವಿ ಮಾಡಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದು ಈ ಬಾರಿ ಎರಡನೇ ಬಾರಿ ಸ್ಪರ್ಧೆಗಿಳಿದಿದ್ದೇನೆ. ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರದಲ್ಲಿ ಮತದಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನೇ ಪ್ರಣಾಳಿಕೆ ಮಾಡಿಕೊಂಡು ಮತ ಕೇಳುತ್ತಿದ್ದೇನೆ ಎಂದರು.
ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದು. ರೈತರಿಗೆ ಅನುಕೂಲವಾಗುವಂತೆ ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿ ಮಾಡುವುದು. ಬ್ಯಾಡಗಿ, ಹಾವೇರಿ, ರಾಣಿಬೆನ್ನೂರ ರೈಲು ನಿಲ್ದಾಣ ಮೇಲ್ದರ್ಜೆಗೆ ಏರಿಸುವುದು. ಪ್ರತಿ ವರ್ಷ ಉದ್ಯೋಗ ಮೇಳ ಮಾಡುವುದು. ಪ್ರತಿ ಗ್ರಾಮಗಳಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡುವುದು. ಸಂಸತ್ ವೇತನದಲ್ಲಿ ಬಡ ರೈತ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡುವುದು ಪ್ರಣಾಳಿಕೆಯಲ್ಲಿದೆ ಎಂದು ತಿಳಿಸಿದರು.
Advertisement
ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಆಸ್ತಿ ಮಾಡಿಕೊಂಡವರ ಮಾಹಿತಿ ನನ್ನ ಬಳಿ ಇದೆ. ನಾನು ಸಂಸದನಾದರೆ ಜಿಲ್ಲೆಯಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ವ್ಯಕ್ತಿಗಳನ್ನು ಮೊದಲು ಜೈಲಿಗಟ್ಟುವ ಕೆಲಸ ಮಾಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲಿ, ಬಿಡಲಿ ಅಕ್ರಮ ಆಸ್ತಿ ಮಾಡಿದವರನ್ನು ಬಯಲಿಗೆಳೆಯದೇ ಬಿಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ರೈತ ಮುಖಂಡ ಸೋಮನಗೌಡ, ಬಸನಗೌಡ ದೊಡ್ಡನಗೌಡ ಇತರರು ಸುದ್ದಿಗೋಷ್ಠಿಯಲ್ಲಿದ್ದರು.