ಹರಪನಹಳ್ಳಿ: ತಾಲೂಕಿನ ಪ್ರಮುಖ ಹೋಬಳಿ ಕೇಂದ್ರಸ್ಥಾನ ಅರಸೀಕೆರೆ ಗ್ರಾಮದ ಬಸ್‌ನಿಲ್ದಾಣ, ಚಿಕ್ಕಕೆರೆ ಹಾಗೂ ಅದರ ಅಕ್ಕಪಕ್ಕದಲ್ಲಿ ತಲೆ ಎತ್ತಿನಿಂತಿದ್ದ ಅನ ಕೃತ ಗೂಡಂಗಡಿಗಳ
ತೆರವು ಕಾರ್ಯಾಚರಣೆ ಸೋಮವಾರ ಬೆಳಿಗ್ಗೆ ನಡೆಯಿತು. ತಾಲೂಕಿನ ಪ್ರಮುಖ ಹಾಗೂ ಅತಿದೊಡ್ಡ ಗ್ರಾಮವಾದ ಅರಸೀಕೆರೆ ಗ್ರಾಮ ಬೆಳವಣಿಗೆಯಾದಂತೆಲ್ಲಾ, ವಾಹನ ಸಂಚಾರ ದಟ್ಟಣೆಯೂ ಅಧಿ ಕವಾಗಿದೆ. ಹೀಗಾಗಿ, ಗೂಡಂಗಡಿಗಳು ಬಸ್‌ನಿಲ್ದಾಣಕ್ಕೆ ಹೊಂದಿಕೊಂಡಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಾಕಷ್ಟು
ತೊಂದರೆ ಆಗುತ್ತಿತ್ತು.
ಜತೆಗೆ ನಾಲ್ಕಾರು ತಾಲೂಕುಗಳ ಸಂಪರ್ಕ ಬೆಸೆಯುವ ಕೇಂದ್ರಸ್ಥಾನದ ಹಿನ್ನೆಲೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಅವರ ಮುತುವರ್ಜಿಯಿಂದಾಗಿ, ಈಗಾಗಲೇ ಗ್ರಾಮದ ನೂತನ ಬಸ್‌ನಿಲ್ದಾಣ ನಿರ್ಮಾಣ, ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ ಅನುದಾನವೂ ಸಹ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಬಸ್‌ನಿಲ್ದಾಣ ಹಾಗೂ ಅದಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆ ಅಕ್ಕಪಕ್ಕದಲ್ಲಿನ ಗೂಡಂಗಡಿಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.
ಜಗಳೂರು ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ಅರಸೀಕೆರೆ ಗ್ರಾಮದಲ್ಲಿ ಪೌರಾಣಿಕ ಹಾಗೂ ಶೋಷಿತ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ದಂಡಿನ ದುರುಗಮ್ಮದೇವಿ ಜಾತ್ರೆ ಹಾಗೂ ಗ್ರಾಮದ ಸಮೀಪದಲ್ಲಿರುವ ಉಚ್ಚಂಗಿದುರ್ಗ ಗ್ರಾಮದ ಐತಿಹಾಸಿಕ ಉತ್ಸವಾಂಬಾ ಜಾತ್ರೆಗಳು ಈ ಭಾಗದ ಬಹುದೊಡ್ಡ ಧಾರ್ಮಿಕ ಉತ್ಸವಗಳಾಗಿರುವುದರಿಂದ ಸಹಜವಾಗಿಯೇ ದೊಡ್ಡ ಜಂಗುಳಿಯೇ ನೆರೆಯುತ್ತದೆ.
ಗ್ರಾಮವು ನಾಲ್ಕಾರು ತಾಲ್ಲೂಕುಗಳ ಸಂಪರ್ಕ ಬೆಸೆಯುವ ಕೊಂಡಿಯಾಗಿದ್ದು, ಮೊದಲ ಹಂತದಲ್ಲಿ ಸುಸಜ್ಜಿತವಾದ ನೂತನ ಬಸ್‌ನಿಲ್ದಾಣ ನಿರ್ಮಿಸಲು ಈಗಾಗಲೇ ಅನುದಾನ ಬಿಡಗಡೆಯಾಗಿದೆ, ಜತೆಗೆ ರಸ್ತೆ ಅಭಿವೃದ್ಧಿ ಹಾಗೂ ಬಸ್ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಇಲ್ಲಿನ ನಮ್ಮ ಜನರು ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದ ಗೂಡಂಗಡಿಗಳನ್ನು ಅನಿವಾರ್ಯವಾಗಿ ತೆರವುಗೊಳಿಸಬೇಕಾಗಿದೆ. ಗ್ರಾಮದ ಅಭಿವೃದ್ಧಿ ಹಿತಾಸಕ್ತಿಯಿಂದ ಅಂಗಡಿಗಳ ಮಾಲೀಕರು ಸಹ ತೆರವುಗೊಳಿಸಲು ಸಹಕಾರ ನೀಡಿದ್ದಾರೆ. ಶೀಘ್ರದಲ್ಲಿಯೇ ನಿಗದಿತ ಅವಧಿಯಲ್ಲಿ ಬಸ್‌ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ, ಅದಕ್ಕೆ ಹೊಂದಿಕೊಂಡಂತೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಈಗಾಗಲೇ ನೀಲನಕ್ಷೆ ರೂಪಿಸಲಾಗಿದ್ದು, ವಾಣಿಜ್ಯ ಮಳಿಗೆಗಳು ಪೂರ್ಣಗೊಂಡ ಬಳಿಕ ವ್ಯಾಪಾರಸ್ಥರ ವ್ಯಾಪಾರ ವಹಿವಾಟಿಗೆ ಪುನಃ ಅವಕಾಶ ಕಲ್ಪಿಸಲಾಗುವುದು ಎಂದು ಶಾಸಕ ಎಸ್.ವಿ. ರಾಮಚಂದ್ರ ಅವರು ತಿಳಿಸಿದರು.
ಗ್ರಾಪಂ ಕೈಗೆತ್ತಿಕೊಂಡಿದ್ದ ತೆರವು ಕಾರ್ಯಾಚರಣೆಗೆ ಸ್ಥಳೀಯ ಪೊಲೀಸ್ ಇಲಾಖೆಯ ಪಿಎಸ್‌ಐ ನಾಗರತ್ನಾ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪಂಚಾಯ್ತಿ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ಅಂಜಿನಪ್ಪ, ಪಿಎಸ್‌ಐ ನಾಗರತ್ನಾ ಸೇರಿದಂತೆ ಪ್ರಮುಖರು ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಹಾಜರಿದ್ದರು.