ಬಾಗೇಪಲ್ಲಿ: ತಾಲೂಕಿನ ಗೂಳೂರು ಹೋಬಳಿ ಐವಾರ‌್ಲಪಲ್ಲಿ ಗ್ರಾಮದ ಬಳಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಶನಿವಾರ ಪೊಲೀಸ್ ಇಲಾಖೆಯ ಪಿಎಎಸ್‌ಐ ಪಿ.ಎಂ.ನವೀನ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಆಶಾ ಅವರ ಜಂಟಿ ನೇತೃತ್ವದಲ್ಲಿ ದಾಳಿ ನಡೆಸಿ ಕ್ರೇನ್, ಟ್ರ್ಯಾಕ್ಟರ್, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಗೂಳೂರು ಗ್ರಾಮಕ್ಕೆ 5ಕಿ.ಮೀ ವ್ಯಾಪ್ತಿಯಲ್ಲಿ ದೇವನಹಳ್ಳಿಯ ಉದ್ಯಮಿಯೊಬ್ಬರು ಕಳೆದ 2 ವರ್ಷಗಳಿಂದ ಸರ್ಕಾರದಿಂದ ಪರವಾನಿಗೆ ಪಡೆಯದೆ ರಾಜಾರೋಷವಾಗಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಇದರ ಮಾಹಿತಿ ಅಧಿಕಾರಿಗಳಿಗೆ ಗೊತ್ತಿದ್ದರೂ ಸ್ಥಳಕ್ಕೆ ಬಂದು ಕ್ರಮ ಜರುಗಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿತ್ತು.
ಬೆಳಗ್ಗೆ 11 ಗಂಟೆ ಸಮಯದಲ್ಲಿ ಖಾಸಗಿ ವಾಹನದಲ್ಲಿ ಗಣಿಗಾರಿಕೆ ನಡಸುತ್ತಿದ್ದ ಸ್ಥಳಕ್ಕೆ ತೆರಳಿ ದಾಳಿ ಮಾಡಿದಾಗ ಸ್ಥಳದಲ್ಲಿಯೇ ಇದ್ದ ಕೂಲಿಯಾಳುಗಳು ಪರಾರಿಯಾಗಿದ್ದಾರೆ. ಆ ಸ್ಥಳದಲ್ಲಿ ಮಾಲೀಕ ನಾಪತ್ತೆಯಾಗಿದ್ದ, ನಂತರ ಅಧಿಕಾರಿಗಳು ಗಣಿಗಾರಿಕೆಗೆ ಬಳಸುತ್ತಿದ್ದ ಟ್ರ್ಯಾಕ್ಟರ್, ಕ್ರೇನ್, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.
ಅಕ್ರಮವಾಗಿ ನಡೆಸುತ್ತಿರುವ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಲ್ಲ. ಈಗ ಸದ್ಯಕ್ಕೆ ಗೂಳೂರು ಬಳಿ ನಡೆಸುತ್ತಿರುವ ಅಕ್ರಮ ಕ್ವಾರಿಯನ್ನು ಬಂದ್ ಮಾಡಿಸಲಾಗಿದೆ. ಪ್ರಕರಣ ದಾಖಲು ಮಾಡಲಾಗಿದ್ದು, ಇನ್ಮುಂದೆ ಗಣಿ ಮಾಫಿಯದವರ ಮೇಲೆ ಹದ್ದಿನ ಕಣ್ಣು ಇಡಲಾಗುವುದು ಎಂದು ಅಧಿಕಾರಿಗಳು ಹೇಳಿದರು.
ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಆಶಾ ಪ್ರತಿಕ್ರಿಯಿಸಿ, ಐವಾರ‌್ಲಪಲ್ಲಿ ಗ್ರಾಮದ ಬಳಿ ಅಕ್ರಮವಾಗಿ ಕ್ವಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದ ತಕ್ಷಣ ದಾಳಿ ಮಾಡಿ ಕೆಲ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. ದಾಳಿಯಲ್ಲಿ ಮುಖ್ಯ ಪೇದೆ ಶಂಕರರೆಡ್ಡಿ, ನರಸಿಂಹಪ್ಪ, ಶ್ರೀಪತಿ ಭಾಗವಹಿಸಿದ್ದರು.