Advertisement

ಅಕ್ರಮ ಗಣಿಗಾರಿಕೆ: ಮಾಲೀಕರಿಗೆ 32 ಕೋಟಿ ದಂಡ

10:14 AM Jun 29, 2019 | Suhan S |

ಕೊಪ್ಪಳ: ಪಟ್ಟಾ ಕಲ್ಲು ಗಣಿಗಾರಿಕೆ, ಗಾಯರಾಣ ಹಾಗೂ ಪರಂಪೋಕ್‌ನಲ್ಲ್ಲಿ ಅನಧಿಧೀಕೃತ ಗಣಿಗಾರಿಕೆ ನಡೆಸಿದ ಸಂಬಂಧ ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿಯಲ್ಲಿ ವಿವಿಧ ಗಣಿ ಮಾಲೀಕರಿಗೆ 32 ಕೋಟಿ ದಂಡ ವಿಧಿಸುವ ಮೂಲಕ ಜಿಲ್ಲಾಧಿಕಾರಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

Advertisement

ಈ ಹಿಂದೆ ಜಿಲ್ಲೆಯಲ್ಲಿ ವಿವಿಧ ಭೂ ಮಾಲೀಕರು ತಮ್ಮ ಪಟ್ಟಾ ಜಮೀನಿನಲ್ಲಿ ಅಲಂಕಾರಿಕ ಶಿಲೆ ಪಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗಣಿಗಾರಿಕೆಗೆ ಪರವಾನಗಿ ಪಡೆದು ಗಣಿಗಾರಿಕೆ ನಡೆಸಿದ್ದರು. ಆದರೆ ಲೈಸೆನ್ಸ್‌ ಮರು ನವೀಕರಣಕ್ಕೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದ ವೇಳೆ ಇಲಾಖೆ ಅವರ ಗಣಿಗಾರಿಕೆ ನಡೆಸಿದ ವ್ಯಾಪ್ತಿಯ ವಿಸ್ತಾರ ಅಳತೆ ಮಾಡಿದ್ದು, ನಿಯಮ ಮೀರಿ ಮಿತಿಯಾಚೆ ಅಕ್ರಮ ಗಣಿಗಾರಿಕೆ ನಡೆಸಿದ್ದರಿಂದ ಜಿಲ್ಲಾ ಟಾಸ್ಕ್ಫೋರ್ಸ್‌ ಸಮಿತಿಯಲ್ಲಿ ಕಾಯ್ದೆ ಅನುಸಾರ ದಂಡ ವಿಧಿಸಲಾಗಿದೆ.

ಪರವಾನಗಿ ಮರು ನವೀಕರಣಕ್ಕೆ 10 ಜನ ಭೂ ಮಾಲೀಕರು ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಸ್ಥಳ ತಪಾಸಣಾ ಮಾಡಿ ಜಿಲ್ಲಾಧಿಕಾರಿಗೆ ವರದಿ ಕೊಟ್ಟಿದ್ದು, 10 ಜನರಿಗೆ 4,45,37,176 ದಂಡ ವಿಧಿಸಲಾಗಿದೆ. ಇನ್ನೂ ಸರ್ಕಾರದ ಗಾಯರಾಣ ಜಮೀನಿನಲ್ಲಿ 6 ಜನರು ಅನುಮತಿ ಪಡೆದು ಕಲ್ಲು ಗಣಿಗಾರಿಕೆ ನಡೆಸಿದ್ದರು. ಈ ಪೈಕಿ ಅವರು ಇಲಾಖೆ ನಿಗದಿಪಡಿಸಿದ ವಾರ್ಷಿಕ ಮಿತಿ ಮೀರಿ ಅನಧೀಕೃತ ಗಣಿಗಾರಿಕೆ ನಡೆಸಿದ್ದರಿಂದ ಅವರಿಗೆ ನಿಯಮಾನುಸಾರ 22,32,41,700 ಕೋಟಿ ರೂ. ದಂಡ ವಿಧಿಸಲಾಗಿದೆ. ಜೊತೆಗೆ ಪರಂಪೋಕ್‌ನಲ್ಲಿ ಇಬ್ಬರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಕಲ್ಲುಗಣಿಗಾರಿಕೆ ನಡೆಸಿದ್ದರು. ಅವರೂ ಸಹಿತ ಇಲಾಖೆ ನಿಗದಿಪಡಿಸಿದ ಮಿತಿಯನ್ನೂ ಮೀರಿ ಹೆಚ್ಚುವರಿ ಅನಧಿಧೀಕೃತ ಗಣಿಗಾರಿಕೆ ನಡೆಸಿದ್ದರಿಂದ ಅವರಿಗೂ 5,77,49,700 ದಂಡ ವಿಧಿಸಲಾಗಿದೆ.

ಗಣಿಗಾರಿಕೆ ನಡೆಸಿ ಮುಚ್ಚಿದ್ದಾರೆ: ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಐವರು, ಗಂಗಾವತಿಯಲ್ಲಿ ಓರ್ವ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಇಬ್ಬರು ಕಲ್ಲು ಗಣಿಗಾರಿಕೆ ನಡೆಸಿದ್ದಲ್ಲದೇ, ತಾವು ಮಾಡಿದ ಗಣಿಗಾರಿಕೆಯನ್ನು ಇಲಾಖೆಗೆ ತಿಳಿಯದಂತೆ ಮಾಡಿ ಆ ಗಣಿಗಾರಿಕೆ ಸ್ಥಳದಲ್ಲಿ ತ್ಯಾಜ್ಯ ಹಾಗೂ ಅನುಪಯುಕ್ತ ವಸ್ತು ಸೇರಿದಂತೆ ಮಣ್ಣು ಹಾಕಿ ಮುಚ್ಚಿದ್ದಾರೆ. ಗಣಿಗಾರಿಕೆ ನಡೆಸಿ ಮಣ್ಣಿನಿಂದ ಮುಚ್ಚಿದ ಸ್ಥಳವನ್ನು 15 ದಿನಗಳೊಳಗೆ ತೆರವುಗೊಳಿಸಬೇಕು. ಗಣಿಗಾರಿಕೆ ನಡೆದ ಪ್ರಮಾಣಕ್ಕೆ ದಂಡ ಪಾವತಿಸಬೇಕೆನ್ನುವ ಎಚ್ಚರಿಕೆಯನ್ನೂ ನೀಡಲಾಗಿದೆ.

ದಂಡದ ರಾಜಸ್ವ ಪಾವತಿಸಿ: ಅನಧೀಕೃತ ಗಣಿಗಾರಿಕೆ ನಡೆಸಿದ ಪ್ರಮಾಣಕ್ಕೆ ತಕ್ಕಂತೆ ದಂಡ ಪಾವತಿಸಬೇಕು. ಇಲ್ಲದಿದ್ದರೆ ಮುಂದೆ ಪರವಾನಗಿ ನೀಡದೇ ಇರುವ ಕುರಿತು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಬಾರಿ ಹೊಸದಾಗಿ 5 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ನಾಲ್ಕು ಅರ್ಜಿಗಳಿಗೆ ಅನುಮತಿ ನೀಡಿ ಶಿಫಾರಸು ಮಾಡಲಾಗಿದೆ. ಇನ್ನುಳಿದಂತೆ ಒಂದು ಅರ್ಜಿಯನ್ನು ಮರು ಪರಿಶೀಲನೆ ಮಾಡುವ ಕುರಿತು ಟಾಸ್ಕ್ ಫೋರ್ಸ್‌ ಸಮಿತಿಯಲ್ಲಿ ಚರ್ಚೆಯಾಗಿದೆ.

Advertisement

ಒಟ್ಟಿನಲ್ಲಿ ಜಿಲ್ಲಾದ್ಯಂತ ಅಕ್ರಮ ಗಣಿಗಾರಿಕೆ ನಡೆದ ಬಗ್ಗೆ ಇಲಾಖೆ ಅಧಿಕಾರಿಗಳೇ ಸ್ಥಳ ತಪಾಸಣೆ ಮಾಡಿ ಟಾಸ್ಕ್ ಫೋರ್ಸ್‌ ಸಮಿತಿಗೆ ವರದಿ ನೀಡಿದ್ದು, ವರದಿ ಅನುಸಾರ ಅನಧೀಕೃತ ಕಲ್ಲುಗಣಿಗಾರಿಕೆ ನಡೆಸಿದ್ದಕ್ಕೆ ದಂಡ ಪಾವತಿ ಮಾಡಿದ ಬಳಿಕ ಪರವಾನಗಿ ನವೀಕರಣ ಸಮಿತಿಯಲ್ಲಿ ನಿರ್ಣಯಕ್ಕೆ ಬಂದಿದ್ದು ಈ ವಿಷಯದಲ್ಲಿ ಜಿಲ್ಲಾಧಿಕಾರಿ ದಿಟ್ಟ ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ.

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next