ದೇವನಹಳ್ಳಿ: ತಾಲೂಕಿನ ಬೆಟ್ಟೇನಹಳ್ಳಿಯಲ್ಲಿ ನಡೆಸುತ್ತಿದ್ದ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ವಿಶ್ವನಾಥಪುರ ಪೊಲೀಸರು ದಾಳಿ ನಡೆಸಿ 7 ಜನರನ್ನು ಬಂಧಿಸಿದ್ದಾರೆ.
ಬೆಟ್ಟೇನಹಳ್ಳಿ ಗ್ರಾಮದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ ತಕ್ಷಣ ವಿಶ್ವನಾಥಪುರ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡ ದಾಳಿ ನಡೆಸಿದೆ.
ರಾಜರೋಷವಾಗಿ ಕಲ್ಲುಗಣಿಗಾರಿಕೆ ನಡಿತ್ತಿತ್ತು: ಕಲ್ಲು ಗಣಿಗಾರಿಕೆ ನಡೆಯುವ ವೇಳೆ ಒಂದು ಲಾರಿ, ಎರಡು ಜೆಸಿಬಿ ಹಾಗೂ ಮೂರು ಕಂಪ್ರೇಜರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಮಿಳುನಾಡು ಮೂಲದ 7 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಕಲ್ಲುಗಣಿಗಾರಿಕೆ ಮಾಡಲು ಯಾವುದೇ ಅನುಮತಿ ಇಲ್ಲದೇ, ರಾತ್ರಿ ವೇಳೆ ಕಲ್ಲುಗಣಿಗಾರಿಕೆ ನಡೆಸುತ್ತಿದ್ದರು. ಹಲವಾರು ದಿನಗಳಿಂದ ನಡೆಯುತ್ತಿದ್ದ ಕಲ್ಲುಗಣಿಗಾರಿಕೆ ಮೇಲೆ ದಾಳಿ ನಡೆಸಿರುವುದರಿಂದ ಅಕ್ರಮಕಲ್ಲು ಗಣಿಗಾರಿಕೆ ಮಾಡುವವರಿಗೆ ಎಚ್ಚರಿಕೆ ಘಂಟೆಯಾಗಿ ಪರಿಣಮಿಸಿದೆ. ಕಳೆದ ಹಲವು ದಿನಗಳಿಂದ ಸರ್ಕಾರಿ ಜಮೀನಿನಲ್ಲಿ ರಾಜರೋಷವಾಗಿ ಕಲ್ಲುಗಣಿಗಾರಿಕೆ ಮಾಡುತ್ತಾ ಸರ್ಕಾರಕ್ಕೆ ವಂಚಿಸುತ್ತಿದ್ದ ಖದೀಮರ ಮೇಲೆ ಪೊಲೀಸರು ದಾಳಿ ನಡೆಸುವುದರ ಮೂಲಕ ಶಾಕ್ ನೀಡಿದ್ದಾರೆ.
ಅಕ್ರಮಗಳ ಕಡಿವಾಣಕ್ಕೆ ಒತ್ತು: ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಯಥೇತ್ಛವಾಗಿ ನಡೆಯುತ್ತಿತ್ತು. ಇದಕ್ಕೆ ಕಡಿವಾಣ ಹಾಕುವುದಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೊಸದಾಗಿ ಸಬ್‌ಇನ್ಸ್‌ಪೆಕ್ಟರ್ ಆಗಿ ಬಂದಿರುವ ಶ್ರೀನಿವಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಅಕ್ರಮಗಳ ಕಡಿವಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹಾಗೇಯೇ ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ 7 ಜನರನ್ನು ಬಂಧಿಸಿರುವವರಲ್ಲಿ 5 ಜನರ ಮೇಲೆ ಒಂದು ಪ್ರಕರಣ ದಾಖಲಿಸಿ, ಮತ್ತಿಬ್ಬರ ಮೇಲೆ ಮತ್ತೂಂದು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.