ಪಾಂಡವಪುರ: ನಿಷೇಧಾಜ್ಞೆ ನಡುವೆಯೂ ತಾಲೂಕಿನ ಬೇಬಿಬೆಟ್ಟದ ಕಾವಲಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮ ದಾಸ್ತಾನು ಹಾಗೂ ಟಿಪ್ಪರ್ ವೊಂದನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಬೇಬಿಬೆಟ್ಟದ ಕಾವಲಿನಲ್ಲಿ ಗಣಿಗಾರಿಕೆ ನಡೆಸುವುದರ ಮೇಲೆ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ರಾತ್ರೋರಾತ್ರಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಾ ಮೆಗ್ಗರ್ ಹಾಗೂ ಬೋರ್ ಬ್ಲಾಸ್ಟಿಂಗ್ ನಡೆಸುತ್ತಿರುವ ಬಗ್ಗೆ ಬೇಬಿ ಗ್ರಾಮಸ್ಥರು ದೂರು ಸಲ್ಲಿಸಿದ್ದರು.
ದೂರಿನ ಆಧಾರದ ಮೇರೆಗೆ ಮಂಡ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಮುತ್ತಪ್ಪ, ಸಿಬ್ಬಂದಿಯಾದ ಉದಯರವಿ, ಪ್ರವೀಣ್ ಹಾಗೂ ತಹಶೀಲ್ದಾರ್ ಪ್ರಮೋದ್ ಎಲ್ .ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ ಬೇಬಿಬೆಟ್ಟದ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಾಮಗ್ರಿಗಳ ವಶ: ಬೇಬಿಬೆಟ್ಟದ ಕಾವಲಿನಲ್ಲಿರುವ ನಿತಿನ್ ಸ್ಟೋನ್ ಕ್ರಷರ್, ಕರ್ನಾಟಕ ಕ್ರಷರ್, ಬಾಲಾಜಿ ಕ್ರಷರ್, ಕೃಷ್ಣ ಸ್ಟೋನ್, ಸಿದ್ದರಾಮೇಶ್ವರ ಕ್ರಷರ್ ಸೇರಿದಂತೆ ಅನೇಕ ಕ್ರಷರ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು. ಈ ವೇಳೆ ನಿತಿನ್ ಕ್ರಷರ್‌ಗೆ ಸೇರಿದ ಒಂದು ಟಿಪ್ಪರ್ ಹಾಗೂ ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಾನೂನು ಕ್ರಮ: ಕೃಷ್ಣರಾಜಸಾಗರ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟು ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ಚಟುವಟಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಆದರೂ ರಾತ್ರಿ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ರಾತ್ರಿ ವೇಳೆ ಅಕ್ರಮವಾಗಿ ಗಣಿಗಾರಿಕೆ ನಡೆಸಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಗಣಿ ಮತ್ತು ಭೂ ವಿಜಾನ ಇಲಾಖೆಯ ಅಧಿಕಾರಿ ಮುತ್ತಪ್ಪ ಎಚ್ಚರಿಕೆ ನೀಡಿದ್ದಾರೆ.
ರಾತ್ರಿ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದರಿಂದ ಕ್ರಷರ್‌ಗಳ ಮೇಲೆ ದಾಳಿ ನಡೆಸಿ ಕ್ರಮ ಜರುಗಿಸಲಾಗಿದೆ. ಯಾರಾದರೂ ಅಕ್ರಮ ಗಣಿಗಾರಿಕೆ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಎಚ್ಚರಿಸಿದ್ದಾರೆ.