ಬೆಂಗಳೂರು: ನೆರೆ ರಾಜ್ಯ ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರದ ಇನೇಶ್ವರ್ (25) ಹಾಗೂ ಕೊಡಿಗೇಹಳ್ಳಿಯ ನದೀಮ್ (25) ಬಂಧಿತರು. ಆರೋಪಿಗಳಿಂದ 81. 450 ಕೆ.ಜಿ. ಗಾಂಜಾ ಹಾಗೂ ಟಾಟಾ ಏಸ್ ವಾಹನ ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಆಂಧ್ರಪ್ರದೇಶದ ಕಾಡಿನ ಪ್ರದೇಶದಲ್ಲಿ ಬೆಳೆಯುತ್ತಿದ್ದ ಗಾಂಜಾ ಖರೀದಿಸಿ ನಗರದಲ್ಲಿ ಟಾಟಾಏಸ್ ವಾಹನದಲ್ಲಿ ಇಟ್ಟುಕೊಂಡು ನಗರಕ್ಕೆ ಬರುತ್ತಿದ್ದರು. ಈ ಬಗ್ಗೆ ಮಾಹಿತಿ ದೊರೆತ ಚಂದ್ರಲೇಔಟ್ ಠಾಣೆ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದಿಂದ ತರುತ್ತಿದ್ದ ಗಾಂಜಾವನ್ನು ರಾಮನಗರ, ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಸುತ್ತ-ಮುತ್ತಲ ಜಿಲ್ಲೆಗಳಿಗೆ ಸರಬರಾಜು ಮಾಡುತ್ತಿದ್ದರು. ಈಗಾಗಲೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬ ಅನುಮಾನವಿದೆ.
ಅಲ್ಲದೆ, ಆರೋಪಿಗಳಿಂದ ಯಾರು ಗಾಂಜಾ ಖರೀದಿಸುತ್ತಿದ್ದರು ಮತ್ತು ಆರೋಪಿಗಳಿಗೆ ಯಾರು ಗಾಂಜಾ ಸರಬರಾಜು ಮಾಡುತ್ತಿದ್ದರು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.