Advertisement

ಕುಗ್ರಾಮಗಳಲ್ಲಿ ಅಕ್ರಮ ಮದ್ಯದ ಹೊಳೆ

07:30 AM Jun 07, 2019 | Suhan S |

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಾರಿಯಲ್ಲಿದ್ದ ಮಾದರಿ ನೀತಿ ಸಂಹಿತೆಯಿಂದ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಜಿಲ್ಲಾದ್ಯಂತ ಬ್ರೇಕ್‌ ಹಾಕಿ ಸಾರ್ವಜನಿಕರ ಗಮನ ಸೆಳೆದಿದ್ದ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು, ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಅಕ್ರಮ ಮದ್ಯ ಮಾರಾಟಕ್ಕೆ ರಹದಾರಿ ಮಾಡಿಕೊಟ್ಟಿರುವ ಅನುಮಾನ ಕಾಡುತ್ತಿದೆ.

Advertisement

ಇದಕ್ಕೆ ಕಳೆದ 20 ದಿನಗಳಿಂದ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಅಬಕಾರಿ ಅಕ್ರಮ ಪ್ರಕರಣಗಳು ಸಾಕ್ಷಿಯಾಗಿವೆ.

ಪ್ರಕರಣ ದಾಖಲು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ 400 ಕ್ಕೂ ಹೆಚ್ಚು ಅಬಕಾರಿ ಅಕ್ರಮಗಳನ್ನು ಜಿಲ್ಲಾದ್ಯಂತ ಪತ್ತೆ ಮಾಡಿ 40 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮದ್ಯ ಜಪ್ತಿ ಮಾಡಿ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದ್ದ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು, ಇದೀಗ ಲೋಕ ಸಮರ ಮುಗಿದ ಬೆನ್ನಲ್ಲೇ ನಿದ್ದೆಗೆ ಜಾರಿದ್ದಾರೆ.

ಅಕ್ರಮ ಮದ್ಯ ಮಾರಾಟದ ಕಾರುಬಾರು ಹೆಚ್ಚಾಗಿದ್ದು, ಇದಕ್ಕೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರತಿ ದಿನ ದಾಖಲಾಗುತ್ತಿರುವ ಅಕ್ರಮ ಮದ್ಯ ಮಾರಾಟದ ಪ್ರಕರಣಗಳು ನಿರ್ದೇಶನವಾಗಿ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯನ್ನು ಅನುಮಾನದಿಂದ ನೋಡುವಂತಾಗಿದೆ.

ಕುಗ್ರಾಮಗಳಲ್ಲಿ ಮದ್ಯದ ಹೊಳೆ: ಜಿಲ್ಲೆಯಲ್ಲಿ ಈಗಾಗಲೇ ಬರದ ಕರಿನೆರಳು ಆವರಿಸಿ ರೈತಾಪಿ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಸುಮಾರು 337 ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ಕೊಳವೆ ಬಾವಿಗಳು ಕೊರೆದರೂ ನೀರು ಹೊರ ಬರುವುದು ಅಪರೂಪವಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ಸ್ಥಿಗತಗೊಂಡು ದುಡಿಯುವ ಜನರ ಕೈಗೆ ಕೆಲಸ ಇಲ್ಲದೇ ಪರದಾಡುತ್ತಿದ್ದಾರೆ.

Advertisement

ಆದರೆ ಜಿಲ್ಲೆಯಲ್ಲಿ ಮಾತ್ರ ನೀರಿಗೂ ಬರ ಇದ್ದರೂ ಮದ್ಯಕ್ಕೆ ಬರ ಇಲ್ಲ ಎನ್ನುವಂತೆ ಜಿಲ್ಲೆಯ ಗ್ರಾಮೀಣ ಭಾಗದ ಕುಗ್ರಾಮಗಳಲ್ಲಿ ಗಲ್ಲಿ ಗಲ್ಲಿಗೂ ಮದ್ಯದ ಹೊಳೆ ಹರಿಯುತ್ತಿದ್ದು, ಇದರಿಂದ ಮೊದಲೇ ಬರದಿಂದ ಸಂಕಷ್ಟದಲ್ಲಿರುವ ಬಡ ಕುಟುಂಬಗಳು ಮತ್ತೂಷ್ಟು ಬೀದಿಗೆ ಬರುವಂತಾಗಿದೆಯೆಂಬ ಆರೋಪ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ನಿತ್ಯ ಆರೇಳು ಕೇಸ್‌ ಪಕ್ಕಾ: ಜಿಲ್ಲೆಯಲ್ಲಿ ಎಷ್ಟರ ಮಟ್ಟಿಗೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆಯೆಂದರೆ ಚಿಕ್ಕಬಳ್ಳಾಪುರ ಹಾಗು ಚಿಂತಾಮಣಿ ಉಪ ವಿಭಾಗಳಲ್ಲಿ ಆರು ತಾಲೂಕುಗಳ ಪೈಕಿ ಒಂದಲ್ಲ ಒಂದು ತಾಲೂಕಿನಲ್ಲಿ 6 ರಿಂದ 10 ಪ್ರಕರಣಗಳು ಅಕ್ರಮ ಮದ್ಯ ಮಾರಾಟ ಬಗ್ಗೆ ದಾಖಲುಗೊಳ್ಳುತ್ತಿದ್ದು, ಕದ್ದುಮುಚ್ಚಿ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡುವ ಪ್ರಕರಣಗಳಿಗೆ ಲೆಕ್ಕವಿಲ್ಲದಂತಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ಅಂಗಡಿಗಳೇ ಅಕ್ರಮ ಮದ್ಯ ಮಾರಾಟದ ಕೇಂದ್ರಗಳಾಗಿದ್ದು, ಜನ ನಿದ್ದೆಯಿಂದ ಹೇಳುವುದಕ್ಕೂ ಮೊದಲೇ ಮದ್ಯ ಮಾರಾಟ ಮಾಡುತ್ತಿರುವುದು ಗ್ರಾಮಗಳಲ್ಲಿ ಕಂಡು ಬರುತ್ತಿದೆ.

ಗ್ರಾಮೀಣ ಪ್ರದೇಶಕ್ಕೆ ನಗರ ಪ್ರದೇಶದ ಬಾರ್‌ ಅಂಡ್‌ ರೆಸ್ಟೋರೆಂಟ್ ಮಾಲೀಕರು ಕೆಲ ಮಧ್ಯವರ್ತಿಗಳನ್ನು ಇಟ್ಟುಕೊಂಡು ರಾಜಾರೋಷವಾಗಿ ಮದ್ಯ ಸಾಗಾಟ ಮಾಡಿ ಚಿಲ್ಲರೆ ಅಂಗಡಿಗಳಿಗೆ ತಲುಪಿಸುತ್ತಿದ್ದು, ಗ್ರಾಮಗಳಲ್ಲಿ ಬೆಳಗ್ಗೆ ಸಂಜೆ ಮದ್ಯದ ಆರಾದನೆ ಎಗ್ಗಿಲ್ಲದೇ ನಡೆದು ಬಡ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಅಬಕಾರಿ ಅಕ್ರಮಗಳು ಚುನಾವಣೆ ಬಳಿಕ ನಡೆಯುತ್ತಿದ್ದರೂ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಎಚ್ಚೆತ್ತಿಕೊಂಡಿಲ್ಲ. ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ಮಾಡುವ ಕೆಲಸವನ್ನು ಈಗ ಜಿಲ್ಲೆಯ ಪೊಲೀಸ್‌ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.

ಒಬ್ಬ ವ್ಯಕ್ತಿ ಬಳಿ 2.3 ಲೀಟರ್‌ಗಿಂತ ಅಧಿಕ ಮದ್ಯ ಇರಬಾರದು. ಆದರೆ ಚಿಲ್ಲರೆ ಅಂಗಡಿಗಳಲ್ಲಿ ಮಾತ್ರ ಬಾರ್‌ ಹಾಗೂ ರೆಸ್ಟೋರೆಂಟ್ ಮಾಲೀಕರು ಕಳುಹಿಸುವ ತರಹೇವಾರಿ ಮದ್ಯದ ಬಾಟಲುಗಳು ಕಂಡು ಬರುತ್ತಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಕುರುಡುತನ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next