Advertisement

ಅನರ್ಹತೆಯ ಭೀತಿಗೆ ಅಕ್ರಮ-ಸಕ್ರಮದ ಮದ್ದು

02:51 AM May 28, 2019 | sudhir |

ಬೆಂಗಳೂರು: 1998ರಲ್ಲಿ ಕೆಪಿಎಸ್‌ಸಿ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಗೊಂಡು ಅನರ್ಹತೆ ಭೀತಿ ಎದುರಿಸುತ್ತಿದ್ದ 25 ಅಧಿಕಾರಿಗಳಿಗೆ ಸೇವಾ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Advertisement

ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸುದೀರ್ಘ‌ ಚರ್ಚೆ ನಡೆಸಲಾಯಿತು. ಸುಪ್ರೀಂ ಕೋರ್ಟ್‌ ಆದೇಶದಂತೆ ಅನರ್ಹತೆಯ ಭೀತಿ ಎದುರಿಸುತ್ತಿದ್ದ ಏಳು ಐಎಎಸ್‌ ಅಧಿಕಾರಿಗಳು ಸೇರಿ 25 ಹಿರಿಯ ಕೆಎಎಸ್‌ ಅಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲು ನಿರ್ಧರಿಸಲಾಗಿದೆ. ಹೊಸದಾಗಿ ನೇಮಕಗೊಳ್ಳಬೇಕಿರುವ 28 ಅಭ್ಯರ್ಥಿಗಳಿಗಾಗಿ ಸೂಪರ್‌ ನ್ಯೂಮರರಿ ಹುದ್ದೆಗಳನ್ನು ಸೃಷ್ಟಿಸಿ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ನಿರ್ಣಯ ತೆಗೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1998ರಲ್ಲಿ 383 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನಡೆಸಿದ ಪರೀಕ್ಷೆ ಹಾಗೂ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಅನರ್ಹರನ್ನು ತೆಗೆದುಹಾಕಿ ಅರ್ಹರಿಗೆ ಹುದ್ದೆ ನೀಡುವಂತೆ ಆದೇಶಿಸಿತ್ತು. ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದ್ದರಿಂದ 25 ಜನ ಹಿರಿಯ ಕೆಎಎಸ್‌ ಅಧಿಕಾರಿಗಳು ಹುದ್ದೆ ಕಳೆದುಕೊಳ್ಳಬೇಕಾಗಿತ್ತು. ಈಗಾಗಲೇ 20 ವರ್ಷ ಸೇವೆ ಸಲ್ಲಿಸಿರುವ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕುವುದು ಸಮಂಜಸವಲ್ಲ ಎಂಬ ಕಾರಣದಿಂದ ಅವರ ರಕ್ಷಣೆಗೆ ಕರ್ನಾಟಕ ನಾಗರೀಕ ಸೇವಾ ವಿಧೇಯಕಕ್ಕೆ ತಿದ್ದುಪಡಿ ತಂದು ಸುಗ್ರಿಧೀವಾಜ್ಞೆ ಹೊರಡಿಸಲಾಗುವುದು ಎಂದು ಹೇಳಿದರು.

ಏಳು ಜನ ಐಎಎಸ್‌ ಅಧಿಕಾರಿಗಳೂ ಸೇರಿದಂತೆ ಹುದ್ದೆ ಕಳೆದುಕೊಳ್ಳುವ 25 ಅಧಿಕಾರಿಗಳು ಹಾಗೂ ಹಿಂಬಡ್ತಿಯಾಗುವ ಅಧಿಕಾರಿಗಳು ಅದೇ ಹುದ್ದೆಯಲ್ಲಿ ಮುಂದುವರೆಯಲು ಈ ಕಾಯ್ದೆ ಅನುಕೂಲ ಕಲ್ಪಿಸಿಕೊಡಲಿದೆ. 140 ಅಧಿಕಾರಿಗಳ ಹುದ್ದೆಗಳು ಬದಲಾಗುತ್ತವೆ. 8 ಅಧಿಕಾರಿಗಳ ಗ್ರೇಡ್‌ ಬದಲಾಗುತ್ತದೆ. ಎಲ್ಲ ಗೊಂದಲಗಳ ನಿವಾರಣೆಗೆ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗುತ್ತಿದೆ.

ಪ್ರಕರಣದ ಹಿನ್ನೆಲೆ: ರಾಜ್ಯ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 1998 ರಲ್ಲಿ 383 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ತೀರ್ಮಾನಿಸಿತ್ತು. 1999ರಲ್ಲಿ ಮುಖ್ಯ ಪರೀಕ್ಷೆ ನಡೆದು 2000ರ ಜನವರಿಯಲ್ಲಿ ಸಂದರ್ಶನ ನಡೆಸಿ, 2001ರಲ್ಲಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು.

Advertisement

ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಎಂದು ಕೆಲವು ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. 2002ರಲ್ಲಿ ಕೆಎಟಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಆದೇಶ ನೀಡಿತ್ತು. ಆದರೆ, ಹೈಕೋರ್ಟ್‌ ಮರು ಮೌಲ್ಯಮಾಪನ ಬೇಡ ಎಂದು ಉತ್ತರ ಪತ್ರಿಕೆಗಳ ಮಾಡರೇಷನ್‌ಗೆ ಆದೇಶಿಸಿತ್ತು. ಹೈಕೋರ್ಟ್‌ ಆದೇಶವನ್ನು 2005ರಲ್ಲಿ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು.

28 ಜನರ ನೇಮಕಕ್ಕೆ ಸೂಪರ್‌ ನ್ಯೂಮರರಿ ಪೋಸ್ಟ್‌ ಸೃಷ್ಟಿ

ನೇಮಕಾತಿ ಪ್ರಾಧಿಕಾರದ ತಪ್ಪಿನಿಂದ ಅನ್ಯಾಯಕ್ಕೊಳಗಾಗಿದ್ದ 28 ಜನರನ್ನು ಸೂಪರ್‌ ನ್ಯೂಮರರಿ ಪೋಸ್ಟ್‌ ಸೃಷ್ಟಿಸಿ ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಅವರು 1998 ರ ನೇಮಕಾತಿ ಪ್ರಕಾರ ಈಗ ಯಾವ ಹುದ್ದೆಗೆ ಬಡ್ತಿ ಹೊಂದುತ್ತಿದ್ದರೋ ಅದೇ ಗ್ರೇಡ್‌ನ‌ ಹುದ್ದೆಗೆ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು. ಈ ನೇಮಕಾತಿ ಇದೊಂದು ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು. ಈ ಪಟ್ಟಿಯಲ್ಲಿ ನೇಮಕಗೊಳ್ಳಬೇಕಿರುವ ಅಭ್ಯರ್ಥಿಗಳಲ್ಲಿ ಒಬ್ಬರು ನಿಧನ ಹೊಂದಿದ್ದು, ಒಬ್ಬರು ನಿವೃತ್ತಿ ವಯಸ್ಸು ಮೀರಿರುವುದರಿಂದ ಅವರಿಗೆ ಯಾವುದೇ ರೀತಿಯ ರಕ್ಷಣೆ ನೀಡಲು ಆಗುವುದಿಲ್ಲ ಎಂದು ಸಚಿವರು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next