Advertisement

“ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ: ಧ್ವನಿ ಎತ್ತದ ಸಂಸದರು’

03:20 PM Nov 23, 2017 | Team Udayavani |

ದೊಡ್ಡಬಳ್ಳಾಪುರ: ಮಹದಾಯಿ, ಕಾವೇರಿ ನೀರಿನ ವಿಚಾರಗಳು ಸೇರಿದಂತೆ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಸಂಸದರು ದನಿ ಎತ್ತುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಪ್ರಮುಖವಾಗಿದ್ದು, ಈ ಅಸ್ತ್ರವನ್ನು ಕನ್ನಡಿಗರು ಬಳಸಿಕೊಂಡು ನಾಡಿನ ಹಿತ ಕಾಯುವವರನ್ನು ಸಂಸತ್‌ಗೆ ಆರಿಸಿ ಕಳುಹಿಸಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್‌.ಶಿವರಾಮೇಗೌಡ ಹೇಳಿದ್ದಾರೆ.

Advertisement

ನಗರದ ಮಾರುತಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಕನ್ನಡವೆಂದರೆ ಬರೀ ಭಾಷೆಯ ಕೆಲಸವಲ್ಲ: ಕನ್ನಡಿಗರು ಪ್ರತಿಯೊಂದು ಸೌಲಭ್ಯ ಪಡೆಯಲು ಹೋರಾಟ ಮಾಡುವ ವಾತಾವರಣ ಸೃಷ್ಟಿಯಾಗಿರುವುದು ವಿಷಾದಕರ. ಕನ್ನಡ ಭಾಷೆ ವಿಚಾರದಲ್ಲಿಯೂ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿರುವ ಪರಿಣಾಮ ಈಗ ರಾಜ್ಯದಲ್ಲಿ 10 ಸಾವಿರ ಕನ್ನಡ ಶಾಲೆಗಳು ಮುಚ್ಚಿವೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಹಾಗೂ ಅನ್ಯ ರಾಜ್ಯದವರು ಇಲ್ಲಿನ ಜಮೀನುಗಳನ್ನು ಖರೀದಿಸಿ, ರೈತರನ್ನು ಕೂಲಿ ಕಾರ್ಮಿಕರನ್ನಾಗಿಸುತ್ತಿದ್ದಾರೆ. ಕನ್ನಡದ ಕೆಲಸ ಎಂದರೆ ಬರೀ ಭಾಷೆಯ ಕೆಲಸವಲ್ಲ. ಇಲ್ಲಿನ ಜನರ ಜೀವನ ಹಸನಾಗಬೇಕು. ಬಹು ರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಬಳಸುವ ಬದಲು ಇಲ್ಲಿನ ರೈತರ ಉತ್ಪನ್ನಗಳನ್ನು ಬಳಸಿ ಅವರಿಗೆ ನೆರವಾಗಬೇಕು ಎಂದು ಹೇಳಿದರು.

ಮಕ್ಕಳಿಗೆ ಕನ್ನಡ ಸತ್ವ ಪರಿಚಯಿಸಿ: ಪ್ರಸ್ತುತ ಸಿನಿಮಾ ಸಾಹಿತ್ಯ ಅಸಂಬದ್ಧವಾಗಿದೆ. ಜಗತ್ತಿನ ಅಳಿವಿನ ಅಂಚಿನ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ ಎನ್ನುವುದು ಆತಂಕಕಾರಿಯಾಗಿದ್ದು, ಕನ್ನಡವನ್ನು ಕೊಂದರೆ ನಮ್ಮ ತಾಯಿಯನ್ನು ನಾವು ಹತ್ಯೆ ಮಾಡಿದಂತೆ. ಈ ದಿಸೆಯಲ್ಲಿ ಇಂದಿನ ಮಕ್ಕಳಿಗೆ ಕನ್ನಡ ಭಾಷೆಯ ಸತ್ವವನ್ನು ಪರಿಚರಿಸ ಬೇಕು. ಭಾಷೆಯೊಂದಿಗೆ ನಮ್ಮ ಸಂಸ್ಕೃತಿ ಹಾಸು ಹೊಕ್ಕಾಗಬೇಕು ಎಂದು ಹೇಳಿದರು.

ಕನ್ನಡ ಪರ ಸಂಘಟನೆಗಳ ಕಾರ್ಯ ಶ್ಲಾಘನೀಯ: ನಗರಸಭಾ ಸದಸ್ಯ ಟಿ.ಎನ್‌.ಪ್ರಭುದೇವ್‌ ಮಾತನಾಡಿ, ಕನ್ನಡ ಭಾಷೆಗೆ ಧಕ್ಕೆ ಬಂದಾಗಲೆಲ್ಲಾ ಕನ್ನಡಪರ ಸಂಘಟನೆಗಳು ದನಿ ಎತ್ತಿವೆ. ಆದರೆ ಕನ್ನಡದ ಅನುಷ್ಠಾನ ಇನ್ನೂ ಸಮರ್ಪಕವಾಗಿ ಆಗುತ್ತಿಲ್ಲ. ನಾಮಫ‌ಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕುವ ಮೂಲಕ ಎಲ್ಲೆಡೆ ಕನ್ನಡ ಭಾಷೆಯ ಸೊಗಡು ಕಾಣುವಂತಾಗಬೇಕು ಎಂದು ಆಶಿಸಿದರು.

Advertisement

ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ ನಾಯಕ್‌ ಮಾತನಾಡಿ, ರಾಜ್ಯದ ಹಿತದೃಷ್ಟಿಯಿಂದ ಇಲ್ಲಿ ಪ್ರಾದೇಶಿಕ ಪಕ್ಷದ ಆಡಳಿತ ಬರುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿನ ಶಶಿ ಮೆಲೋಡಿಸ್‌ ತಂಡದಿಂದ ವಾದ್ಯಗೋಷ್ಠಿ ನಡೆಯಿತು. ಸಮಾರಂಭದಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಿದ್ದರಾಜು, ಎಸ್‌ಐ ಪಿ.ವಿ.ರೆಡ್ಡಿ, ಕಸಾಪ ತಾಲೂಕು ಅಧ್ಯಕ್ಷೆ ಪ್ರಮೀಳಾ, ನಗರಸಭಾ ಸದಸ್ಯ ಕೆಂಪರಾಜ್‌, ನಾಮಿನಿ ಸದಸ್ಯೆ ರೇವತಿ, ಡಾ.ರಾಜ್‌ ಕುಮಾರ್‌ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಸು.ನರಸಿಂಹಮೂರ್ತಿ, ನಗರಸಭಾ ಸದಸ್ಯೆ ಅನುಸೂಯಮ್ಮ ಸುಬ್ರಮಣಿ, ಲಯನ್ಸ್‌
ಕ್ಲಬ್‌ ಅಧ್ಯಕ್ಷ ಸೋಮಶೇಖರ್‌, ನಂಜಪ್ಪ, ಪು. ವೆಂಕಟೇಶ್‌ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ತಾಲೂಕು ಅಧ್ಯಕ್ಷ ಮರುಳಾರಾಧ್ಯ ಹಾಗೂ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next