Advertisement

ಸಾರಿಗೆ ನಿಗಮಗಳಲ್ಲಿ ಅಕ್ರಮ ; ತನಿಖೆ 

01:25 AM Feb 24, 2019 | Team Udayavani |

 ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ನಡೆದಿರುವ ಅವ್ಯವಹಾರ-ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಎಂಟಿಸಿ ಸೇರಿ ನಾಲ್ಕೂ ನಿಗಮಗಳಲ್ಲಿ ಬಿಡಿ ಭಾಗಗಳು, ರಕ್ಸೀನ್‌, ಕಂಪ್ಯೂಟರ್‌ ಹಾಗೂ ಸರ್ವರ್‌ಗಳ ಖರೀದಿಯಲ್ಲಿ ಅವ್ಯವಹಾರ, ಅಗತ್ಯಕ್ಕಿಂತ ಹೆಚ್ಚು ಖರೀದಿ, ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ನೀಡಿರುವುದು ಪತ್ತೆಯಾಗಿದೆ. ಹೀಗಾಗಿ, ಎಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಕಳೆದ 3 ವರ್ಷದಲ್ಲಿ ಸಾರಿಗೆ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ.ಹಿಂದೆ ಲಾಭದಲ್ಲಿದ್ದ ನಿಗಮಗಳು ಈಗ ನಷ್ಟದಲ್ಲಿವೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಮೂರು ವರ್ಷ ಅವಕಾಶ ಸಿಕ್ಕರೆ ಮತ್ತೆ ನಿಗಮಗಳನ್ನು ಲಾಭದ ಹಾದಿಗೆ ತರುತ್ತೇನೆಂದು ಹೇಳಿದರು.

4 ಕೋಟಿ ರೂ. ಮೊತ್ತದ ಕಳಪೆ ರಕ್ಸಿನ್‌ ಖರೀದಿ ಪ್ರಕರಣದಲ್ಲಿ ನಾಲ್ವರನ್ನು ಅಮಾನತು ಮಾಡಲಾಗಿದೆ. ಅದೇ ರೀತಿ 17 ಕೋಟಿ ರೂ.ವೆಚ್ಚದ ಕಂಪ್ಯೂಟರ್‌ ಹಾಗೂ ಸರ್ವರ್‌ ಖರೀದಿ ಪ್ರಕರಣದಲ್ಲೂ ನಾಲ್ವರನ್ನು ಆಮಾನತು ಮಾಡಲಾಗಿದೆ. ಅಗತ್ಯ ಇಲ್ಲದಿದ್ದರೂ ಸರ್ವರ್‌ ಖರೀದಿಸಲಾಗಿದೆ. ಈಶಾನ್ಯ ನಿಗಮದಲ್ಲಿ ಎಂಡಿ ಸಹಿ ದುರ್ಬಳಕೆ ಮಾಡಿ 140 ಮಂದಿ ನೇಮಕ ಸಂಬಂಧ 15 ಮಂದಿಯನ್ನು ಅಮಾನತು ಮಾಡಲಾಗಿದೆ. ಬಾಡಿ ಕೋಚ್‌ಗಾಗಿ 117 ಕೋಟಿ ರೂ. ವೆಚ್ಚ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇನ್ಮುಂದೆ, ಬಿಡಿ ಭಾಗಗಳ ಉತ್ಪಾದಕ ಘಟಕಗಳಿಂದಲೇ ನೇರ ಖರೀದಿ ಹಾಗೂ ಅವರ ಮಳಿಗೆ ನಮ್ಮ ವರ್ಕ್‌ಶಾಪ್‌ನ ಆವರಣದಲ್ಲಿ ಇರಬೇಕೆಂದು ಸೂಚಿಸಲಾಗಿದೆ. ಟೈರ್‌ ಖರೀದಿಗೂ ಇದೇ ರೀತಿ ನಿರ್ದೇಶನ ನೀಡಲಾಗಿದೆ. ಅಗತ್ಯವಿದ್ದಷ್ಟು ಮಾತ್ರ ಖರೀದಿ, ತಿಂಗಳಿಗೊಮ್ಮೆ ಬಿಲ್‌ ಪಾವತಿ, ದರ ಬಗ್ಗೆ ಮೊದಲೇ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.

ಕೇಸ್‌ ವಾಪಸ್‌: ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಹಾಕಿದ್ದ ಕೇಸುಗಳನ್ನು ವಾಪಸ್‌ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

Advertisement

ಕ್ಯಾಬಿನೆಟ್‌ ಉಪ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಾವೇರಿ ಹೋರಾಟದ ಸಮಯದಲ್ಲಿ ರೈತರ ಮೇಲೆ ದಾಖಲಾಗಿದ್ದ ಶೇ.95ರಷ್ಟು ಕೇಸುಗಳನ್ನು ಕೈಬಿಡಲು ಸರ್ಕಾರ ತೀರ್ಮಾನಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next