ಮೈಸೂರು: ಕೋವಿಡ್ 19 ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಖರೀದಿಸಿರುವ ಉಪಕರಣಗಳಲ್ಲಿ ಅವ್ಯವಹಾರ ನಡೆದಿದ್ದು, ತನಿಖೆಗೆ ಸೂಚಿಸುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ವಿಜಯ್‌ಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ವಿಜಯ್‌ಕುಮಾರ್, ಕೋವಿಡ್ 19 ನಿಯಂತ್ರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜವಾಬ್ದಾರಿಯಾಗಿದೆ.
ಔಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿಗೆ 3,322 ಕೋಟಿ ರೂ. ಖರ್ಚಾಗಿರುವ ಮಾಹಿತಿ ನೀಡಿದ್ದಾರೆ. ಬಿಡುಗಡೆಯಾಗಿದ್ದ ಪ್ಯಾಕೇಜ್‌ಗಿಂತ ಹೆಚ್ಚಿನ ಮೊತ್ತ ವೆಚ್ಚವಾಗಿದೆ ಎಂಬ ಮಾಹಿತಿ ದಾಖಲೆಗಳಿಂದ ತಿಳಿದು ಬಂದಿದೆ ಎಂದು ಹೇಳಿದರು. ಲಾಕ್‌ಡೌನ್ ಜಾರಿಯಾದ ಬಳಿಕ ವಲಸೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ 48.09 ಕೋಟಿ ಖರ್ಚು ಮಾಡಿದೆ. ಅಲ್ಲದೆ ಬಿಬಿಎಂಪಿ 81 ಲಕ್ಷ ಊಟದ ಪ್ಯಾಕೆಟ್ ವಿತರಿಸಿದ್ದೇವೆ ಎಂದು ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಊಟದ ಪ್ಯಾಕೆಟ್ ವಿತರಣೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಅದರ ಮಾಹಿತಿ ಸಾರ್ವಜನಿಕರಿಗೆ ನೀಡಬೇಕು ಎಂದು ಆಗ್ರಹಿಸಿದರು. ಆಟೋ ಚಾಲಕರಿಗೆ ನೀಡಲು ಉದ್ದೇಶಿಸಿರುವ 387.5ಕೋಟಿ, 1000 ವೆಂಟಿಲೇಟರ್, 4,89,000 ಪಿಪಿಇ ಕಿಟ್ಸ್, 10 ಲಕ್ಷ ಮಾಸ್ಕ್, 10 ಲಕ್ಷ ಸರ್ಜಿಕಲ್ ಗ್ಲೌಸ್, 20 ಲಕ್ಷ ಪರೀಕ್ಷಾ ಗ್ಲೌಸ್‌ಗಳು, 5000 ಆಕ್ಸಿಜನ್ ಸಿಲಿಂಡರ್, 6.2 ಲಕ್ಷ ಕೋವಿಡ್-19 ಟೆಸ್ಟ್, ಹ್ಯಾಂಡ್ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್‌ಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ.
ಈ ಎಲ್ಲಾ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದರೂ ಮೊಂಡು ಹಠದ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರ ಹಿತದೃಷ್ಟಿಯಿಂದ ಉನ್ನತ ಮಟ್ಟದ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಮೂರ್ತಿ, ಹೆಡತಲೆ ಮಂಜುನಾಥ್, ಬಸವರಾಜ್ ನಾಯಕ್, ಶಿವಪ್ರಸಾದ್, ಪ್ರಕಾಶ್ ಕುಮಾರ್, ಶಿವಣ್ಣ, ಈಶ್ವರ್ ಚಕಡಿ, ಸೀತಾರಾಮ್, ವಕೀಲರಾದ ಸಿ.ಎಂ.ಜಗದೀಶ್, ಗೋಪಾಲ್, ಸುರೇಶ್ ಪಾಳ್ಯ, ವೈದ್ಯನಾಥ್ ಮೊದಲಾದವರಿದ್ದರು.