ಬಾಗಲಕೋಟೆ: ಕಳೆದ ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಬಂದ ಪ್ರವಾಹ ವೇಳೆ ಜನ-ಜಾನುವಾರುಗಳಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಶೆಡ್ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.
105 ವರ್ಷಗಳ ಇತಿಹಾಸದಲ್ಲೇ ಭೀಕರ ಪ್ರವಾಹ ಈ ಬಾರಿ ಬಂದಿದ್ದ ಹಿನ್ನೆಲೆಯಲ್ಲಿ 195 ಗ್ರಾಮಗಳು ಜಲಾವೃತಗೊಂಡು, 43,136 ಕುಟುಂಬಗಳು ಬೀದಿಗೆ ಬಂದಿದ್ದವು. ಈ ಕುಟುಂಬಗಳ ಒಟ್ಟು 1,49,408 ಜನರನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲು ಪ್ರಯತ್ನಿಸಿತ್ತು. 1.49 ಲಕ್ಷ ಜನರಲ್ಲಿ 1,31,928 ಜನರು ತಮ್ಮ ಸಂಬಂಧಿಕರು, ಬೇರೆ ಬೇರೆ ಊರುಗಳಿಗೆ ಹೋಗಿ ಆಶ್ರಯ ಪಡೆದಿದ್ದರು. ಜಿಲ್ಲಾಡಳಿತದಿಂದ ಕೇವಲ 17,480 ಜನರಿಗೆ ಮಾತ್ರ ಆಶ್ರಯ ಕಲ್ಪಿಸಿತ್ತು. ಮುಖ್ಯವಾಗಿ 69,977 ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿತ್ತು.
ಎಲ್ಲಿ-ಎಷ್ಟು ಶೆಡ್ ನಿರ್ಮಾಣ: ಪ್ರವಾಹ ವೇಳೆ ಜಿಲ್ಲಾಡಳಿತ ನಿರ್ಮಿತಿ ಕೇಂದ್ರ ಹಾಗೂ ಲೋಕೋಪಯೋಗಿ ಇಲಾಖೆಗಳಿಂದ ತಗಡಿನ ಶೆಡ್ ನಿರ್ಮಿಸಿ ಜನ ಜಾನುವಾರುಗಳಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಿತ್ತು. ಬಾಗಲಕೋಟೆ, ಬಾದಾಮಿ, ಹುನಗುಂದ ಹಾಗೂ ಮುಧೋಳ ತಾಲೂಕಿನಲ್ಲಿ ಒಟ್ಟು 279 ಶೆಡ್ ನಿರ್ಮಿಸಲಾಗಿದ್ದು, ಇದಕ್ಕಾಗಿ 544.55 ಲಕ್ಷ (5.44 ಕೋಟಿ) ಜಿಲ್ಲಾಡಳಿತ ಭರಿಸಿದೆ.
ಸಾಮೂಹಿಕ ಶೆಡ್ ಬಳಸಲಿಲ್ಲ: ಪ್ರವಾಹ ವೇಳೆ ಹಲವೆಡೆ ಹೆಸರಿಗೆ ಎಂಬಂತೆ ಶೆಡ್ ಹಾಕಲಾಗಿದೆ. ಎರಡು ಇಲಾಖೆಯಿಂದ ನಿರ್ಮಿಸಿದ ಒಟ್ಟು 279 ಶೆಡ್‌ಗಳಲ್ಲಿ 790 ಕುಟುಂಬಗಳಿಗೆ ಆಶ್ರಯ ಕಲ್ಪಿಸಲಾಗಿತ್ತೆಂದು ಜಿಲ್ಲಾಡಳಿತ ಹೇಳಿದೆ. ಆದರೆ ವಾಸ್ತವದಲ್ಲಿ 100/24 ಅಳತೆಯ ಸಾಮೂಹಿಕ ಶೆಡ್ (ಸಮುದಾಯ ಭವನ ಮಾದರಿ) ಹಾಕಲಾಗಿತ್ತು. ಹೀಗಾಗಿ ಇಡೀ ಊರಿನ ಜನ, ಒಂದೇ ಶೆಡ್‌ನಲ್ಲಿ ವಾಸಿಸಲು ಆಗಲೇ ಇಲ್ಲ. ಒಂದು ಕುಟುಂಬಕ್ಕೆ ಒಂದು ಶೆಡ್ ಪ್ರತ್ಯೇಕವಾಗಿ ಹಾಕಿಕೊಡಿ ಎಂಬ ಒತ್ತಾಯ ಕೇಳಿ ಬಂದಿದ್ದರೂ, ನಾಮಕಾವಸ್ತೆ ಎಂಬಂತೆ ಶೆಡ್ ಅಳವಡಿಸಲಾಗಿತ್ತು. ಈ ರೀತಿ ಸಾಮೂಹಿಕ ಶೆಡ್ ಹಾಕಿದ ಲೆಕ್ಕದಲ್ಲಿ ಪಿಡಬ್ಲ್ಯೂಡಿಯೇ ಹೆಚ್ಚು ಎನ್ನಲಾಗಿದೆ. ನಿರ್ಮಿತಿ ಕೇಂದ್ರದಿಂದ ಪುನರ್ ಬಳಕೆ: ಪ್ರವಾಹ ವೇಳೆ ಜನ- ಜಾನುವಾರುಗಳಿಗೆ ಹಾಕಿದ್ದ ಶೆಡ್‌ಗಳನ್ನೇ ನಿರ್ಮಿತಿ ಕೇಂದ್ರ ಪುನರ್ ಬಳಕೆ ಮಾಡಿದೆ.
ನಿರ್ಮಿತಿ ಕೇಂದ್ರದಿಂದ ಒಟ್ಟು 184 ಶೆಡ್ ಹಾಕಿದ್ದು, ಅದರಲ್ಲಿ 110 ಶೆಡ್‌ಗಳನ್ನು ರಿಮೂವ್ ಮಾಡಿ, ಪ್ರವಾಹ ವೇಳೆ ಬಿರುಕು ಬಿಟ್ಟ-ಇನ್ನೂ ಕೆಲವೆಡೆ ಕುಸಿದ ಶಾಲೆ-ಅಂಗನವಾಡಿ ಕೇಂದ್ರಗಳಿಗಾಗಿ ಪುನರ್ ಬಳಸಿದೆ. 184 ಶೆಡ್ ನಿರ್ಮಿಸಲು ನಿರ್ಮಿತಿ ಕೇಂದ್ರದಿಂದ ಒಟ್ಟು 92 ಲಕ್ಷ ಖರ್ಚಾಗಿದೆ. ಅದರಲ್ಲಿ 110 ಶೆಡ್ ರಿಮೂವ್ ಮಾಡಿ, ಪುನರ್ ಬಳಕೆಗೆ ಒಂದಕ್ಕೆ ತಲಾ 20 ಸಾವಿರದಂತೆ ಒಟ್ಟು 2.20ಲಕ್ಷ ಖರ್ಚಾಗಿದೆ. ಅದೇ ಪಿಡಬ್ಲ್ಯೂಡಿಯಿಂದ 87 ಶೆಡ್‌ಗಳ ನಿರ್ಮಾಣಕ್ಕೆ 3.70 ಕೋಟಿ ಖರ್ಚಾಗಿದ್ದು, ಭ್ರಷ್ಟಾಚಾರ ಆರೋಪಕ್ಕೆ ಪುಷ್ಟಿ ನೀಡಿದೆ ಎಂಬ ಮಾತು ಕೇಳಿ ಬರುತ್ತಿದೆ. ಲೋಕೋಪಯೋಗಿ ಇಲಾಖೆ ನಿರ್ಮಿಸಿದ ಶೆಡ್‌ಗಳಲ್ಲಿ ಕೇವಲ 3 ಶೆಡ್ ಗಳನ್ನು ರಿಮೂವ್ ಮಾಡಿ, ಪುನರ್ ಬಳಕೆ ಮಾಡಲಾಗಿದೆ. ಉಳಿದ ಶೆಡ್‌ಗಳು ಖಾಲಿ ಬಿದ್ದಿವೆ. ಹೀಗಾಗಿ ಆ ಶೆಡ್‌ಗಳ ಪತ್ರಾಸ್, ಕಬ್ಬಿಣದ ಸಾಮಗ್ರಿ ಕಂಡವರ ಪಾಲಾಗುತ್ತಿವೆ. ಆ ಮೂಲಕ ಸರ್ಕಾರದ ಹಣ ಪೋಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಪ್ರವಾಹ ವೇಳೆ ಜನರಿಗೆ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶನ ಮೇರೆಗೆ ಜಿಲ್ಲೆಯಲ್ಲಿ ಒಟ್ಟು 184 ಶೆಡ್ ನಿರ್ಮಿಸಲಾಗಿತ್ತು. ಇದಕ್ಕಾಗಿ ಒಟ್ಟು 92 ಲಕ್ಷ ಖರ್ಚಾಗಿದೆ. ಪ್ರವಾಹ ಇಳಿದ ಬಳಿಕ ಬಿದ್ದ ಶಾಲೆ-ಅಂಗನವಾಡಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುನ್ನಡೆಸಲು ಇದ್ದ ಶೆಡ್‌ಗಳನ್ನೇ ತೆಗೆದು ಪುನರ್ ಸ್ಥಾಪಿಸಲಾಗಿದೆ. ಹೀಗೆ ಒಟ್ಟು 110 ಶೆಡ್ ಪುನರ್ ಸ್ಥಾಪಿಸಿದ್ದು, ಶಾಲೆ-ಅಂಗನವಾಡಿ ಕೇಂದ್ರ ನಡೆಯುತ್ತಿವೆ. ನಮ್ಮ ಸಂಸ್ಥೆಯಿಂದ ಶೆಡ್ ನಿರ್ಮಾಣದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ.
– ಶಂಕರಲಿಂಗ ಗೋಗಿ, ಯೋಜನೆ ನಿರ್ದೇಶಕ, ನಿರ್ಮಿತಿ ಕೇಂದ್ರ
-ಶ್ರೀಶೈಲ ಕೆ. ಬಿರಾದಾರ