Advertisement
ಅಕ್ರಮ ಕುರಿತು ಶಿಗ್ಗಾವಿ, ಸವಣೂರು ಹಾಗೂ ಹಾನಗಲ್ಲಗಳಲ್ಲಿ ಆಯಾ ತಾಲೂಕುಗಳ ಪೊಲೀಸ್ ಠಾಣೆಗಳಲ್ಲಿ ಉಪವಿಭಾಗಾಧಿಕಾರಿಗಳು ಪೊಲೀಸ್ ಪ್ರಕರಣ ದಾಖಲಿಸಿ, ತನಿಖೆಗೆ ಕೋರಿದ್ದಾರೆ. ಇನ್ನು ಹಾವೇರಿ ಉಪವಿಭಾಗದಲ್ಲಿ ಇಲಾಖಾ ಪರಿಶೋಧನೆ ನಡೆಸಿ, ಅಕ್ರಮ ಪ್ರಕರಣ ಪತ್ತೆ ಮಾಡಿ ನಾಲ್ಕೈದು ದಿನಗಳಲ್ಲಿ ಪೊಲೀಸ್ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.
Related Articles
Advertisement
ಯಾವ ರೀತಿ ಅಕ್ರಮ?: ಯಾರಧ್ದೋ ಪಹಣಿ ಸರ್ವೇ ನಂಬರ್‌ಗೆ ಇನ್ನಾರಧ್ದೋ ಆಧಾರ್ ಸಂಖ್ಯೆ ನಮೂದಿಸಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿರುವುದೇ ಇಲ್ಲಿ ನಡೆದಿರುವ ದೊಡ್ಡ ಅಕ್ರಮ. ಈ ಅಕ್ರಮದಲ್ಲಿ ಪರಿಹಾರ ಹಣವನ್ನು ಯಾರಧ್ದೋ ಕುಟುಂಬದವರಿಗೆ, ಇನ್ಯಾರೋ ಸ್ನೇಹಿತರಿಗೆ, ಸಂಬಂಧವಿಲ್ಲದ ಬೇರೆ ಬೇರೆ ಜಿಲ್ಲೆಯಲ್ಲಿರುವವರ ಖಾತೆಗೆ ಹಣ ಜಮೆ ಆಗಿದೆ.ನಗರದ ವೈದ್ಯರೋರ್ವರ ಹೆಸರಲ್ಲಿ ಬೇರೆಯವರಿಗೆ ಹಣ ಸಂದಾಯವಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯರೋರ್ವರ ಹೆಸರಲ್ಲಿದ್ದ ಜಮೀನಿನ ಬೆಳೆಹಾನಿ ಪರಿಹಾರವೂ ಅನ್ಯ ಅಪರಿಚಿತರ ಪಾಲಾಗಿರುವುದು ಇಲಾಖಾ ಪರಿಶೀಲನೆಯಲ್ಲಿ ಬಹಿರಂಗಗೊಂಡಿದ್ದು, ಇದರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬುದು ಮೇಲ್ನೊಟಕ್ಕೆ ಸಾಬೀತಾಗಿದೆ.
ನೆರೆ ಪರಿಹಾರ ಹಣ ವಿತರಿಸುವಾಗ ಕೆಲ ಪ್ರಕರಣದಲ್ಲಿ ಆಯಾ ರೈತರ ಕುಟುಂಬದವರು ಯಾರಾದರೂ ಮೃತಪಟ್ಟಿದ್ದರೆ, ಇನ್ನಾವುದೇ ನಿಖರ ಕಾರಣಗಳಿದ್ದರೆ ಬೇರೆ ವ್ಯಕ್ತಿಯ ಖಾತೆಗೆ ಜಮೆ ಮಾಡಲು ಅವಕಾಶವಿದೆ. ಆದರೆ, ಇಲ್ಲಿ ಅರ್ಹ ರೈತರಿಗೆ ಸಿಗಬೇಕಿದ್ದ ಪರಿಹಾರ ಯಾವುದೇ ಸಂಬಂಧ ಇಲ್ಲದ ಬೇರೆ ಯಾರಧ್ದೋ ಖಾತೆಗೆ ಜಮೆ ಆಗಿರುವುದೇ ದೊಡ್ಡ ಅಕ್ರಮವಾಗಿದೆ. ಉದಾಹರಣೆಗೆ ಹಾನಗಲ್ಲ ತಾಲೂಕಿನ ರೈತರೊಬ್ಬರಿಗೆ ಸೇರಬೇಕಿದ್ದ ಪರಿಹಾರದ ಹಣ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬರ ಖಾತೆಗೆ ಹೋಗಿದೆ. ಇಂತಹ ಸಾವಿರಾರು ಸಾಕಷ್ಟು ಪ್ರಕರಣಗಳು ಪತ್ತೆಯಾಗಿವೆ.
ಪಹಣಿಗೆ ತಾಳೆಯಾಗದ ಆಧಾರ್: ಪಹಣಿ ನಂಬರ್ ಯಾರಧ್ದೋ ಪರಿಹಾರ ಇನ್ನಾರಿಗೋ ಹಾಕಲಾಗಿದೆ. ಹೀಗೆ ಮಾಡುವಾಗ ಯಾರ್ಯಾರಧ್ದೋ ಆಧಾರ್ ಕಾರ್ಡ್ ನಂಬರ್ ಬಳಕೆ ಮಾಡಲಾಗಿದ್ದು, ಇದರಿಂದ ಪಹಣಿಗೂ ಆ ಆಧಾರ್ ಇರುವ ವ್ಯಕ್ತಿಗೂ ಸಂಬಂಧವೇ ಇಲ್ಲದ ಪ್ರಕರಣಗಳು ಹೆಚ್ಚಾಗಿ ಬಹಿರಂಗಗೊಂಡಿವೆ. ಪಹಣಿಯಲ್ಲಿರುವ ಹೆಸರಿಗೂ ಆಧಾರ್ ನಂಬರಿಗೂ ತಾಳೆ ಆಗದೇ ಇರುವುದರಿಂದ ಕೇವಲ ಹೆಸರು ಮಾತ್ರವಲ್ಲ. ಧರ್ಮ, ವಯಸ್ಸು, ಸ್ಥಳ ಎಲ್ಲವೂ ಒಂದಕ್ಕೊಂದು ಬದಲಾಗಿರುವುದು ಇಲಾಖಾ ಪರಿಶೀಲನೆ ವೇಳೆ ಗೊತ್ತಾಗಿದೆ.
ಈ ಅಕ್ರಮದಲ್ಲಿ ಒಬ್ಬರ ಪರಿಹಾರದ ಹಣ ಬೇರೆ ಯಾರಧ್ದೋ ಖಾತೆಗೆ ಏಕೆ? ಹೇಗೆ ಜಮೆ ಆಗಿದೆ? ಇದಕ್ಕೆ ಯಾರು ಒಪ್ಪಿಗೆ ಕೊಟ್ಟಿದ್ದಾರೆ. ಯಾರಧ್ದೋ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿರುವ ವ್ಯಕ್ತಿಗಳು ಯಾರು? ಇದರಲ್ಲಿ ಯಾವ ಅಧಿಕಾರಿಗಳಿದ್ದಾರೆ. ಇದರಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ? ಯಾವ ರೀತಿ ಲೋಪವಾಗಿದೆ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.
ಅಕ್ರಮವೋ, ತಂತ್ರಾಂಶ ಲೋಪವೋ : ನೆರೆ ಹಾನಿ ಪರಿಹಾರ ವಿತರಣೆಯಲ್ಲಿ ಡಾಟಾ ಎಂಟ್ರಿ ಮಾಡುವವರು, ಅನುಮೋದನೆ ನೀಡುವ ಅಧಿಕಾರಿಗಳು, ಮಧ್ಯವರ್ತಿಗಳು, ಪ್ರಭಾವಿಗಳು, ಇಲಾಖಾ ಸಿಬ್ಬಂದಿಗಳು ಹೀಗೆ ಅನೇಕರು ಗುಂಪಾಗಿ ಭ್ರಷ್ಟಾಚಾರಕ್ಕಿಳಿದ ಪರಿಣಾಮವಾಗಿ ನಡೆದ ಅಕ್ರಮ ಇದಾಗಿದೆಯೋ ಅಥವಾ ಪರಿಹಾರ ತಂತ್ರಾಂಶ ದೋಷದಿಂದ ಆಗಿದೆಯೋ? ಇಲ್ಲವೇ ಕಾಣದ ಕೈಗಳು ತಂತ್ರಾಂಶವನ್ನು ಹ್ಯಾಕ್ ಮಾಡಿ ಅಕ್ರಮ ಎಸಗಿವೆಯೋ ಎಂಬುದು ಪೊಲೀಸ್ ತನಿಖೆಯಿಂದಲೇ ಖಚಿತವಾಗಬೇಕಿದೆ.
ಸವಣೂರಲ್ಲಿ ಎಫ್‌ಆರ್‌ಐ : ತಾಲೂಕಿನಾದ್ಯಂತ 2019ರಲ್ಲಿ ನಡೆದ ಅತಿವೃಷ್ಟಿಯಿಂದಾದ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಅನರ್ಹರಿಗೆ ಪರಿಹಾರದ ಹಣ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಸವಣೂರು ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿಗಳು, ಡಾಟಾ ಎಂಟ್ರಿ ಆಪರೇಟರ್ ಹಾಗೂ ಇತರರ ವಿರುದ್ಧ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅನ್ಯಾಯವಾಗಿದ್ದರೆ ದೂರು ನೀಡಿ: ಭಾಜಪೇಯಿ ನೆರೆ ಪರಿಹಾರ ವಿತರಣೆಗೆ ಸಂಬಂಧಿ ಸಿ ಇಲಾಖಾ ಪರಿಶೀಲನೆ ವೇಳೆ ಮೇಲ್ನೊಟಕ್ಕೆ ಅಂದಾಜು 2000ಕ್ಕೂ ಹೆಚ್ಚು ಪ್ರಕರಣ ಕಂಡು ಬಂದಿವೆ. ಸವಣೂರು, ಶಿಗ್ಗಾವಿ, ಹಾನಗಲ್ಲ ಪೊಲೀಸ್ ಠಾಣೆಗಳಲ್ಲಿ ಉಪವಿಭಾಗಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಹಾವೇರಿ ವಿಭಾಗದಲ್ಲಿ ಅಕ್ರಮ ಪರಿಶೀಲನೆ ನಡೆದಿದೆ. ಅಕ್ರಮ ಪರಿಶೀಲಿಸಲು 70-80 ದಾಖಲೆ ಪರೀಕ್ಷಿಸಬೇಕಾಗಿದ್ದು, ನಾಲ್ಕೈದು ದಿನಗಳಲ್ಲಿ ಅಕ್ರಮ ಗುರುತಿಸಿ ಪೊಲೀಸ್ ಪ್ರಕರಣ ದಾಖಲಿಸಲಾಗುವುದು. ನೆರೆ ಪರಿಹಾರ ವಿಚಾರವಾಗಿ ತಮ್ಮ ಜಮೀನನಿನ ಹೆಸರಲ್ಲಿ ಬೇರೆಯವರ ಖಾತೆಗೆ ಹಣ ಹೋಗಿದ್ದರೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ದೂರು ನೀಡಬಹುದು. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹೇಳಿದ್ದಾರೆ.
ಎಚ್.ಕೆ. ನಟರಾಜ