ರಾಮನಗರ: ನಗರದ ಜೂನಿಯರ್ ಕಾಲೇಜು ಆವರಣದಲ್ಲಿಶನಿವಾರ ನಡೆದ ಜವಾಹರ ನವೋದಯ ಶಾಲೆ ದಾಖಲಾತಿಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪರೀಕ್ಷೆ ಎದುರಿಸಿದ ಮಕ್ಕಳ ಪೋಷಕರು ದೂರಿದ್ದಾರೆ. ಪರೀಕ್ಷೆಯನ್ನು ಪುನಃ ನಡೆಸುವಂತೆ ಆಗ್ರಹಿಸಿದ್ದಾರೆ.
ನವೋದಯ ಶಾಲೆ ದಾಖಲಾತಿಗೆ ನಡೆದ ಪರೀಕ್ಷೆಯ ವೇಳೆ ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಒಂದಿಬ್ಬರು ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಟ್ಟಿದ್ದಾರೆ. ಅಲ್ಲದೆ ಪರೀಕ್ಷೆಯ ಸ್ಥಳದಿಂದಲೇ ಯಾರಿಗೋ ಫೋನು ಮೂಲಕಮಾತನಾಡಿ ನಿಮ್ಮ ಮಕ್ಕಳಿಗೆ ಎಲ್ಲವನ್ನು ಹೇಳಿ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾಗಿ ಪೋಷಕರು ಆರೋಪಿಸಿದ್ದಾರೆ. ಶಿಕ್ಷಣ ಇಲಾಖೆಯ ಮಂಜುನಾಥ್ ಎಂಬ ಅಧಿಕಾರಿ ನೋಡಲ್ ಅಧಿಕಾರಿ ಎಂದು ಗೊತ್ತಾಗಿದೆ. ಸದರಿ ಅಧಿಕಾರಿಯ ವಿರುದ್ದ ಕ್ರಮ ಜರುಗಿಸುವಂತೆ ಪೋಷಕರು ಆಗ್ರಹಿಸಿದರು. ತಮ್ಮ ಆರೋಪಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಕೆಲಕಾಲ ಪ್ರೌಢಶಾಲಾ ವಿಭಾಗದ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.
ನವೋದಯ ಶಾಲೆಗೆ ದಾಖಲಿಸಬೇಕು ಎಂಬ ಹಂಬಲದಿಂದ ಅನೇಕ ಬಡ ಕುಟುಂಬಗಳ ಪೋಷಕರು ಸಹ ತಮ್ಮ ಮಕ್ಕಳಿಗೆ ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸಿ, ಸಿದ್ಧಗೊಳಿಸಿ ಕರೆತಂದಿದ್ದಾರೆ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ತಮಗೆ ಬೇಕಾದ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಟ್ಟರೆ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುತ್ತದೆ ಎಂದು ಪೋಷಕರಾದ ರೇವಣ್ಣ, ಶಶಿಕಲಾ, ಜಯಕುಮಾರಿ, ಪುಟ್ಟೇಗೌಡ ಮುಂತಾದವರು ಅಸಮಾಧಾನ ವ್ಯಕ್ತಪಡಿಸಿದರು. ಪರೀಕ್ಷಾ ಅಕ್ರಮಗಳಿಂದಾಗಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದರು.
ಈ ವೇಳೆ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಪ್ರೇಮಾ ಮಾತನಾಡಿ, ರಾಮನಗರ ಪರೀಕ್ಷಾ ಕೇಂದ್ರದಲ್ಲಿ 312 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಿತ್ತು. ಆದರೆ 227 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ. ಮಂಜುನಾಥ್ ಎಂಬುವರು ನೋಡಲ್ಸ್ ಅಧಿಕಾರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಅವರು ಕೆಲವಷ್ಟೇ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟಿದ್ದಾರೆ ಎಂಬ ವಿಚಾರ ತಮಗೆ ಗೊತ್ತಿಲ್ಲ ಎಂದರು.
ಅಬ್ಸರ್‌ವರ್ ಆಗಿ ಆಗಮಿಸಿದ್ದ ವಾಲ್ಟರ್ ಎಂಬುವರು ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಪರೀಕ್ಷೆ ಸುಸೂತ್ರವಾಗಿ ಆಯೋಜನೆ ಆಗಿರುವುದನ್ನು ಗಮನಿಸುವುದಷ್ಟೇ ತಮ್ಮ ಕೆಲಸ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ ವೇಳೆ ವಿದ್ಯಾರ್ಥಿಗಳಿಗೆ ಯಾರು ಉತ್ತರ ಹೇಳಿಕೊಡಲಿಲ್ಲ. ಪರೀಕ್ಷೆಯನ್ನು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಮೂಲಕ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಈ ಪರೀಕ್ಷೆಗೆ ಡಿಡಿಪಿಐ ಮುಖ್ಯಸ್ಥರು. ಅವರು ಆಯಾ ತಾಲೂಕಿನ ಬಿಇಒಗಳಿಗೆ ಹೊಣೆ ಹೊರೆಸಿದ್ದಾರೆ ಎಂದು ಸಮಜಾಯಿಷಿ ನೀಡಿದರು.