ಬೆಂಗಳೂರು: ಬಿಬಿಎಂಪಿಯ ಸಂಚಾರಿ ಇಂಜಿನಿಯರಿಂಗ್ ವಿಭಾಗದಲ್ಲಿ 119 ಕೋಟಿ ರೂ. ಹಗರಣ ನಡೆದಿದ್ದು, ಪ್ರಕರಣವನ್ನು ಸಿಐಡಿಗೆ ತನಿಖೆಗೆ ಒಪ್ಪಿಸಬೇಕೆಂದು ಬಿಜೆಪಿ ನಗರ ಜಿಲ್ಲಾ ವಕ್ತಾರ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಪಾಲಿಕೆಯ ರಸ್ತೆ ಮೂಲ ಸೌಕರ್ಯಗಳ ವಿಭಾಗದ ಉಪ ವಿಭಾಗವಾಗಿರುವ ಸಂಚಾರಿ ಇಂಜಿನಿಯರಿಂಗ್ ವಿಭಾಗದಲ್ಲಿ 2016-17 ಹಾಗೂ 2017-18ನೇ ಸಾಲಿನಲ್ಲಿ 119 ಕೋಟಿ ರೂ. ಮೊತ್ತದ ಕಾಮಗಾರಿಗಳಿವೆ ಎಂದು ಹೇಳಲಾಗಿದೆ. ಆದರೆ, ಯಾವುದೇ ಕಾಮಗಾರಿ ನಡೆಸದೆ ಹಣ ಬಿಡುಗಡೆ ಮಾಡಿ ಅವ್ಯವಹಾರ ನಡೆಸಲಾಗಿದೆ ಎಂದು ದೂರಿದರು.
ಕೋಟ್ಯಂತರ ರೂ. ಮೌಲ್ಯದ ಅವ್ಯವಹಾರದಲ್ಲಿ ಹಿಂದಿನ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಮುನಿರತ್ನ ಹಾಗೂ ಸಂಚಾರಿ ಇಂಜಿನಿಯರಿಂಗ್ ವಿಭಾಗದ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಭಾಗಿಯಾಗಿದ್ದಾರೆ. ರಸ್ತೆಗಳ ಸುರಕ್ಷತೆ, ಪಾದಚಾರಿ ಸುರಕ್ಷತಾ ಕ್ರಮಗಳ ನಿರ್ವಹಣೆಯಲ್ಲಿ ಕೋಟ್ಯಂತರ ರೂ. ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿದರು.
ನಗರದಲ್ಲಿ 19 ಸಾವಿರ ಕಿ.ಮೀ. ಉದ್ದದ ರಸ್ತೆಗಳಿದ್ದು, ಆ ಪೈಕಿ 1400 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳಿವೆ. ಆ ರಸ್ತೆಗಳಿಗೆ ಮಾರ್ಕಿಂಗ್, ವೈಜ್ಞಾನಿಕ ಹಂಪ್ಸ್, ಸೈಕಲ್ ಪಥ, ಬಸ್‌ಬೇ, ರಸ್ತೆಗಳ ವಿಸ್ತರಣೆ, ಯೂ ಟರ್ನ್, ಮುಕ್ತ ಎಡ ತಿರುವು, ಜಂಕ್ಷನ್‌ಗಳ ನಿರ್ಮಾಣದ ಹೆಸರಿನಲ್ಲಿ ಅಕ್ರಮ ನಡೆಸಲಾಗಿದೆ.
ಕಾಮಗಾರಿಯನ್ನು ಕೆಆರ್‌ಐಡಿಎಲ್ ನೀಡಲಾಗಿದ್ದು, ಕೆಆರ್‌ಐಡಿಎಲ್ ಸಂಸ್ಥೆ 7 ಮಂದಿಗೆ ಉಪಗುತ್ತಿಗೆ ನೀಡಿದೆ.
ಈ ಏಳು ಮಂದಿ ಗುತ್ತಿಗೆದಾರರಿಗೆ ಹಲವಾರು ಕಾಮಗಾರಿಗಳನ್ನು ಹಂಚಿಕೆ ಮಾಡುವ ಮೂಲಕ ಅಕ್ರಮ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಎಸಿಬಿ, ಬಿಎಂಟಿಎಫ್, ಲೋಕಾಯುಕ್ತ, ಬೆಂಗಳೂರು ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದೆ ಎಂದು ಹೇಳಿದರು.
ಪ್ರಕರಣದ ಪ್ರಮುಖ ರೂವಾರಿಯಾಗಿರುವ ಅಧಿಕಾರಿ ಪ್ರಹ್ಲಾದ್ ಸೇರಿ ಹಲವು ಅಧಿಕಾರಿಗಳ ವಿರುದ್ಧ ವಂಚನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಆರೋಪದಡಿಯಲ್ಲಿ ದೂರು ದಾಖಲಿಸಿದ್ದು, ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.