Advertisement

ಅಕ್ರಮ ವಲಸಿಗರ ಪತ್ತೆಗೆ ವ್ಯಾಪಕ ಕಾರ್ಯಾಚರಣೆ: 518 ವಲಸೆ ಕಾರ್ಮಿಕರು ವಶಕ್ಕೆ

11:57 PM Jul 04, 2022 | Team Udayavani |

ಮಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ವಿದೇಶಿ ಪ್ರಜೆಗಳು ಮತ್ತು ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಾಕೀತು ಮಾಡಿದ ಹಿನ್ನೆಲೆಯಲ್ಲಿ ನಗರದ ಪೊಲೀಸರು 518 ವಲಸೆ ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ.

Advertisement

ನಗರದ ರೊಸಾರಿಯೊ ಶಾಲೆಯಲ್ಲಿ ಪೊಲೀಸರು ಸೋಮವಾರ ವಲಸೆ ಕಾರ್ಮಿಕರ ದಾಖಲೆ ಪರಿಶೀಲನೆ ಕಾರ್ಯ ನಡೆಸಿದರು. ಬೃಹತ್‌ ಕೈಗಾರಿಕೆಗಳು, ಮೀನುಗಾರಿಕೆ, ಡೈರಿ ಮತ್ತಿತರ ಕಡೆ ಬೃಹತ್‌ ಪ್ರಮಾಣದ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬಾಂಗ್ಲಾ ಮತ್ತಿತರ ದೇಶಗಳ ಕಾರ್ಮಿಕರು ಅಕ್ರಮವಾಗಿ ನೆಲೆಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅಂಥವರ ಪತ್ತೆಗಾಗಿ ಈ ದಾಖಲೆ ಪರಿಶೀಲನೆ ಕಾರ್ಯ ನಡೆದಿದೆ.

ಬಾಂಗ್ಲಾ ಮೂಲದ ಕಾರ್ಮಿಕರು ಉತ್ತರ ಭಾರತದವರ ಸೋಗಿನಲ್ಲಿ ನಗರದಲ್ಲಿ ನಕಲಿ ಐಡಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಕಳೆದ ವಾರ ಮಂಗಳೂರಿಗೆ ಆಗಮಿಸಿದ್ದ ಗೃಹ ಸಚಿವರು ಈ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಆಯುಕ್ತರಿಗೆ ನಿರ್ದೇಶನವಿತ್ತಿದ್ದರು.

ಕಳೆದೊಂದು ವಾರದಿಂದ ನಗರದ ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯ 4 ಸಾವಿರದಷ್ಟು ಹೊರ ರಾಜ್ಯಗಳ ವಲಸೆ ಕಾರ್ಮಿಕರನ್ನು ಗುರುತಿಸಿ ದಾಖಲೆ ಪರಿಶೀಲನೆ ಮಾಡುವ ಕಾರ್ಯ ನಡೆಸಲಾಗಿದೆ. ಕಾರ್ಮಿಕರನ್ನು ಠಾಣೆಗೆ ಕರೆಸಿ, ಅವರು ಕೆಲಸ ಮಾಡುವ ಸ್ಥಳಕ್ಕೂ ಭೇಟಿ ನೀಡಿ, ಕಾರ್ಮಿಕರ ಗುತ್ತಿಗೆ ದಾರರನ್ನು ಸಂಪರ್ಕಿಸಿ ಸಮಗ್ರ ಮಾಹಿತಿ ಸಂಗ್ರಹಿಸಲಾಗಿತ್ತು. ಅವರಲ್ಲಿ ದಾಖಲೆ ಸರಿಯಾಗಿ ಕೊಡದ 518 ಮಂದಿಯನ್ನು ಗುರುತಿಸಲಾಗಿತ್ತು. ಅಸ್ಸಾಂ, ಪಶ್ಚಿಮ ಬಂಗಾಲ, ಬಿಹಾರ, ಒಡಿಶಾ, ಉತ್ತರ ಪ್ರದೇಶ, ತಮಿಳುನಾಡು ಮೂಲದ ಅವರನ್ನು ಸೋಮವಾರ ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದರು.

518 ಮಂದಿಯ ವೋಟರ್‌ ಐಡಿ, ಆಧಾರ್‌ ಕಾರ್ಡ್‌ ಪರಿಶೀಲನೆ ಮಾಡಲಾಗುತ್ತಿದೆ. ಈ ದಾಖಲೆಗಳನ್ನು ಅಕ್ರಮವಾಗಿ ಪಡೆದಿರುವ ಸಾಧ್ಯತೆ ಇರುವುದರಿಂದ 20ಕ್ಕೂ ಅಧಿಕ ವಿಷಯಗಳ ಮೇಲೆ ಸಮಗ್ರ ವಿಚಾರಣೆ ಮಾಡಲಾಗುತ್ತದೆ. ಇವರ ಮೊಬೈಲ್‌ ಸಂಖ್ಯೆಯಿಂದ ದೇಶದ ಯಾವ ಭಾಗಗಳಿಗೆ ನಿಯಮಿತವಾಗಿ ಕರೆ ಹೋಗಿದೆ, ಹೊರ ದೇಶಕ್ಕೆ ಕರೆ ಹೋಗಿದೆಯಾ ಎನ್ನುವುದನ್ನು ಪರಿ ಶೀಲಿಸಲಾಗುವುದು. ಮೊಬೈಲಿನ ಸಿಡಿಆರ್‌ ದಾಖಲೆ ಪಡೆಯಲಾಗುವುದು. ಬ್ಯಾಂಕ್‌ ಖಾತೆ ಯಿಂದ ಎಲ್ಲೆಲ್ಲಿಗೆ ಹಣ ರವಾನೆಯಾಗುತ್ತಿದೆ ಎನ್ನುವುದನ್ನೂ ಪರಿಶೀಲಿಸಲಾಗುತ್ತಿದೆ. ಮುಖ್ಯವಾಗಿ ಬಾಂಗ್ಲಾ ದೇಶದವರೊಂದಿಗೆ ಸಂಪರ್ಕ ಹೊಂದಿದ್ದಾರಾ ಎನ್ನುವ ಮಾಹಿತಿ ಸಂಗ್ರಹಿಸಲಾಗುವುದು. ಈ ಕುರಿತ ಸಮಗ್ರ ವರದಿಯನ್ನು ಸಲ್ಲಿಸಲಾಗುವುದು ಎಂದರು.

Advertisement

18 ತಂಡ ನಿಯೋಜನೆ
ವಲಸೆ ಕಾರ್ಮಿಕರ ದಾಖಲೆ ಪರಿಶೀಲನೆಗಾಗಿ ಠಾಣೆಗೆ ಒಂದು ಅಥವಾ ಎರಡರಂತೆ ಒಟ್ಟು 18 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿಯೊಬ್ಬರನ್ನೂ ವಿವರವಾಗಿ ವಿಚಾರಣೆ ನಡೆಸಲಾಗುವುದು. ಆದರೆ ಅನಗತ್ಯವಾಗಿ ತೊಂದರೆ ನೀಡುವುದಿಲ್ಲ ಎಂದ ಕಮಿಷನರ್‌, ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವುದು ಕಂಡುಬಂದರೆ ಪಾಸ್‌ಪೋರ್ಟ್‌ ಕಾಯ್ದೆ, ವಿದೇಶಿಗರ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next