ಬೆಂಗಳೂರು: ಕಂದಾಯ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಬೆನ್ನಲ್ಲೇ ಈಗ ಬಿಡಿಎ ವ್ಯಾಪ್ತಿಯಲ್ಲೂ ಅಂತಹದೇ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅಕ್ರಮವಾಗಿ ಕಟ್ಟಿಕೊಂಡಿರುವ ವಾಸದ ಮನೆಗಳ ಸಕ್ರಮ ಮೂಲಕ ಆದಾಯ ಸಂಗ್ರಹಕ್ಕೆ ತೀರ್ಮಾನಿಸಿರುವ ಸರ್ಕಾರ ಆ ಕಾರ್ಯ ಚುರುಕುಗೊಳಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯ ಕ್ಷತೆ ಯಲ್ಲಿ ಬುಧವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಕ್ರಮೀಕರಣ ಉಪಸಮಿತಿ ಸಭೆ ನಡೆದು ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿತು. ಮುಂದಿನ ಸಭೆಯೊಳಗೆ ವಲಯವಾರು ಸಕ್ರಮಗೊಳಿಸಬೇಕಿರುವ ಕಟ್ಟಡಗಳ ಪಟ್ಟಿ ಹಾಗೂ ವಿಧಿಸಬಹುದಾದ ದಂಡದ ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ ನೀಡಲಾಯಿತು. ಬಿಡಿಎ ವ್ಯಾಪ್ತಿಯಲ್ಲಿ ನ ಅಕ್ರಮ ಮನೆ ಸಕ್ರಮಕ್ಕೆ ಬಿಡಿಎ ನಿಯಮ 38 “ಸಿ’ ಗೆ ತಿದ್ದುಪಡಿತರುವ ಅಗತ್ಯವಿರುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದರು. ಆ ಕುರಿತು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಸಿಎಂ ತಿಳಿಸಿದರು.
ಬಿಡಿಎ ವ್ಯಾಪ್ತಿಯಲ್ಲಿ ಸುಮಾರು ಒಂದೂವರೆ ಲಕ್ಷ ಮನೆಗಳು ಸಕ್ರಮ ಮಾಡಬೇಕಿದ್ದು, ಆ ಮೂಲಕ 5-10ಸಾವಿರ ಕೋಟಿ ರೂ. ದಂಡದ ರೂಪದಲ್ಲಿ ಆದಾಯ ಸಂಗ್ರಹ ಮಾಡುವುದು
ಸರ್ಕಾರದ ಉದ್ದೇಶ. ಕಂದಾಯ ಸಚಿವ ಆರ್. ಅಶೋಕ್, ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಸಚಿವರು ಗರಂ: ಸಭೆಯಲ್ಲಿ ಬಿಡಿಎ ಅಧಿಕಾರಿಗಳ ವಿರುದ್ಧ ಸಚಿವರಾದ ಸೋಮಣ್ಣ, ಮಾಧುಸ್ವಾಮಿ ಗರಂ ಆದರು. ಇಷ್ಟು ಆದಾಯ ತರುವ ಅವಕಾಶ ವಿದ್ದರೂ ಇಷ್ಟು ದಿನ ಯಾಕೆ ಸುಮ್ಮನಿದ್ದಿರಿ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತೀರಿ ಎಂದು ಆಕೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.