Advertisement

ತಾಲೂಕು ಅರಣ್ಯ ಪ್ರದೇಶದಲ್ಲಿ ಅಕ್ರಮ ಬೇಟ

05:22 PM May 17, 2019 | pallavi |
ಚನ್ನಪಟ್ಟಣ: ತಾಲೂಕು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಅಕ್ರಮ ಬೇಟೆ ಎಗ್ಗಿಲ್ಲದೆ ನಡೆದಿದೆ. ದುಷ್ಕರ್ಮಿಗಳು ಮಾಂಸ ಮತ್ತು ಚರ್ಮಕ್ಕಾಗಿ ಕಾಡು ಪ್ರಾಣಿಗಳನ್ನು ನಿರಂತರವಾಗಿ ಅಕ್ರಮ ಬೇಟೆಯಾಡುತ್ತಿದ್ದರೂ, ಪ್ರಾಣಿಗಳ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ಅರಣ್ಯ ಪ್ರದೇಶದ ಪ್ರಾಣಿ ಮತ್ತು ಪಕ್ಷಿ ಸಂಪತ್ತಾಗಿರುವ ಜಿಂಕೆ, ಕಡವೆ, ಕಾಡುಹಂದಿ, ನವೀಲು, ಮೊಲ ಸೇರಿದಂತೆ ವನ್ಯಜೀವಿಗಳನ್ನು ಅಕ್ರಮವಾಗಿ ಬೇಟೆಯಾಡಲಾಗುತ್ತಿದೆ. ತಾಲೂಕು ವ್ಯಾಪ್ತಿಗೆ ಬರುವ ತೆಂಗಿನ ಕಲ್ಲು ಅರಣ್ಯ ಪ್ರದೇಶ, ಬಾಣಂತಮಾರಿ, ಕಬ್ಟಾಳು ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳ ಅಕ್ರಮ ಬೇಟೆ ಅವ್ಯಾಹತವಾಗಿದೆ. ಆದರೆ ಅಕ್ರಮ ಬೇಟೆಯನ್ನು ನಿಯಂತ್ರಿಸಬೇಕಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವಿಫ‌ಲಗೊಂಡಿದ್ದಾರೆ ಎಂದು
ಸುತ್ತಮುತ್ತಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಜಿಂಕೆ ದೇಹದ ಭಾಗಗಳು ಸಾಕ್ಷಿ: ಎರಡು ದಿನಗಳ ಹಿಂದೆ ಬಿ.ವಿ.ಹಳ್ಳಿ ಅರಣ್ಯ ಪ್ರದೇಶದ ಕೆರೆಯಲ್ಲಿ ಸಿಕ್ಕಿರುವ ಜಿಂಕೆಗಳ ದೇಹದ ಭಾಗಗಳು, ವ್ಯಾಪ್ತಿಯಲ್ಲಿ ಸಿಕ್ಕ ನವಿಲುಗಳ ಪುಕ್ಕ, ಗರಿಗಳು ಅಕ್ರಮ ಬೇಟೆ ಅವಾಹತವಾಗಿ ಸಾಗಿದೆ ಎಂಬುದಕ್ಕೆ ಸಾಕ್ಷಿಯಾಗಿವೆ. ಜಿಂಕೆಯನ್ನು ಬೇಟೆಯಾಡಿ ಮಾಂಸ, ಚರ್ಮ ಮತ್ತು ಮೂಳೆಗಳನ್ನು ತಗೆದುಕೊಂಡು ಅನಗತ್ಯ ಭಾಗಗಳನ್ನು ಮೂಟೆಯಲ್ಲಿ ಕಟ್ಟಿ ಕೆರೆಗೆ ಎಸೆದಿರುವುದು ಪತ್ತೆ ಯಾಗಿದೆ. ಈ ಕೃತ್ಯದಿಂದಾಗಿ ಕಾಡುಪ್ರಾಣಿಗಳು, ಪಕ್ಷಿಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಉರುಳು, ಬಲೆ ಹಾಕಿ ಹತ್ಯೆ: ಜಿಂಕೆ, ಕಾಡುಹಂದಿಗಳನ್ನು ಹತ್ಯೆ ಮಾಡಲು ಬೇಟೆಗಾರರು ಉರುಳು ಹಾಗೂ ಬಲೆ ಹಾಕುವ ವಿಧಾನ ಅನುಸರಿಸುತ್ತಿದ್ದಾರೆ. ಅರಣ್ಯದ ಅಂಚಿನಲ್ಲಿ ಬಂದೂಕು ಬಳಸಿದರೆ ಅದರ ಶಬ್ದದಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಗೊತ್ತಾಗುತ್ತದೆ ಎನ್ನುವ ಕಾರಣಕ್ಕೆ ಈ ವಿಧಾನ ಬಳಕೆಯಾಗುತ್ತಿದೆ. ಅರಣ್ಯದ ಒಳಭಾಗದಲ್ಲಿ ಬಂದೂಕು, ಸಿಡಿಮದ್ದನ್ನೂ ಸಹ ಬಳಕೆ ಮಾಡಲಾಗುತ್ತಿದೆ. ರಾತ್ರಿ ವೇಳೆ ಬೇಟೆಗೆ ಇಳಿಯುವ ದುಷ್ಕರ್ಮಿಗಳು, ಉರುಳಿಗೆ ಬೇಟೆ ಸಿಕ್ಕಿದ ನಂತರ ಅಲ್ಲೇ ಚರ್ಮ ಸುಲಿದು, ಮಾಂಸವನ್ನು ಬೇರ್ಪಡಿಸಿ ಅನುಪಯುಕ್ತ ಭಾಗಗಳನ್ನು ಬಿಸಾಡಿ ಪಲಾಯನ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಅರಣ್ಯದಲ್ಲಿರುವ ನೂರಾರು ನವಿಲುಗಳು, ಮೊಲ, ಕಾಡುಕೋಳಿಗಳ ಸ್ಥಿತಿಯೂ ಸಹ ಭಿನ್ನವಾಗಿಲ್ಲ. ಪಕ್ಷಿಗಳ ಮಾರಣ ಹೋಮ ಪ್ರತಿನಿತ್ಯ ನಡೆಯುತ್ತಲೇ ಇದೆ.
ಹೋಟೆಲ್‌ಗ‌ಳಿಗೆ ಮಾಂಸ ರವಾನೆ: ಇವುಗಳು ಬೇಟೆಗಾರರ ಮೂಲಕ ನೇರವಾಗಿ ಪಟ್ಟಣದ ಮಾಂಸಾಹಾರಿ ಹೋಟೆಲುಗಳಿಗೆ ರವಾನೆಯಾಗುತ್ತಿವೆ. ಇನ್ನು ಜಿಂಕೆ, ಕಡವೆ, ಕಾಡುಹಂದಿ ಮಾಂಸ ಪ್ರಭಾವಿಗಳ, ಪಾರ್ಟಿ ಮಾಡುವವರ ಮನೆಗಳಿಗೆ ತಲುಪಿಸುವ ಕೆಲಸ ನಿರಾತಂಕವಾಗಿ ಆಗುತ್ತಿದೆ.
ಆರೋಪ ಒಪ್ಪದ ಅರಣ್ಯ ಇಲಾಖೆ: ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಮಾತಿಗೆಳೆದರೆ ಅವರು ಇದನ್ನು ಒಪ್ಪುವುದೇ ಇಲ್ಲ. ಬದಲಾಗಿ ಕಾಡು ಪ್ರಾಣಿಗಳ ಬೇಟೆ ನಮ್ಮಲ್ಲಿ ನಡೆಯುತ್ತಿಲ್ಲ. ಹೊರಗಿ ನಿಂದ ಬೇಟೆಯಾಡಿ ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಬೇಟೆ ನಡೆಯದಂತೆ ಕಠಿಣ ಕ್ರಮ ವಹಿಸುತ್ತಿದ್ದೇವೆ ಎನ್ನುತ್ತಾರೆ. ಆದರೆ ಬಿ.ವಿ.ಹಳ್ಳಿ ಕೆರೆಯಲ್ಲಿ ದೊರೆತ ಜಿಂಕೆಯ ದೇಹದ ಅವಶೇಷಗಳ ಬಗ್ಗೆ ಕೇಳಿದರೆ ಮೊಗದಲ್ಲಿ ನಗು ಬಿಟ್ಟರೆ ಉತ್ತರ ಸಿಗುವುದಿಲ್ಲ.
ಒಟ್ಟಾರೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳ ಬೇಟೆಯಂತೂ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಗಳು ಸಾಕಷ್ಟಿವೆ. ಆದರೆ ಅದನ್ನು ನಿಯಂತ್ರಣ ಮಾಡುವ ಕೆಲಸ ಆಗಬೇಕಿದೆಯಷ್ಟೇ. ಅರಣ್ಯ ಅಧಿಕಾರಿಗಳು ನಾಡಿಗೆ ಬರುವ ಕಾಡುಪ್ರಾಣಿಗಳನ್ನು ಓಡಿಸುವುದಷ್ಟೇ ತಮ್ಮ ಕೆಲಸ ಎಂದು ಕುಳಿತಿರುವಂತಿದೆ. ಇನ್ನಾದರೂ ಈ ಬಗ್ಗೆ ಗಮನಹರಿಸಿ ಬೇಟೆಗಾರರ ಹೆಡೆಮುರಿಕಟ್ಟಿ ವನ್ಯಪ್ರಾಣಿಗಳನ್ನು ಉಳಿಸಬೇಕಿದೆ.
ಗ್ರಾಹಕರಿಗೆ ಮಾಂಸದ ಸಾಂಬಾರು ನೇರ ಪಾರ್ಸಲ್‌ ಕಾಡಿನಲ್ಲಿ ಬೇಟೆಯಾಡುವ ಪ್ರಾಣಿಯ ಮಾಂಸವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಪದ್ಧತಿ ಹಾಗೂ ತಾವೇ ಸಾಂಬಾರು ಸಿದ್ಧಪಡಿಸಿ ಕಳುಹಿಸಿಕೊಡುವ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆದಿದೆ. ಪ್ರಮುಖವಾಗಿ ಕಾಡುಹಂದಿ, ಜಿಂಕೆ ಮಾಂಸ ಪಡೆಯುವವರಿಗೆ ಈ ವ್ಯವಸ್ಥೆ ಇದೆ. ಸಾಂಬಾರು ಸಿದ್ಧªಪಡಿಸಿ ನೇರವಾಗಿ ಹೇಳಿದಲ್ಲಿಗೆ ತಲುಪಿಸಲಾಗುತ್ತಿದೆ. ಯಾವ ತಕರಾರೂ ಬೇಡವೆಂದು ಗ್ರಾಹಕರು ಹೆಚ್ಚು ಈ ವ್ಯವಸ್ಥೆಗೇ ಅಂಟಿಕೊಂಡಿದ್ದಾರೆ ಎನ್ನುವುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ. ಗ್ರಾಹಕರಿಂದ ಬೇಕಾದ ಮಾಂಸದ ಆರ್ಡರ್‌ ಪಡೆದುಕೊಳ್ಳುವ ಬೇಟೆಗಾರರು ಕಾರ್ಯಾಚರಣೆಗೆ ಇಳಿಯುತ್ತಾರೆ. ತಮ್ಮ ಉರುಳಿಗೆ ಬೇಟೆ ಸಿಕ್ಕಿದ ತಕ್ಷಣವೇ ಹಣ ಪಡೆದು ಮಾಂಸ ತಲುಪಿಸುತ್ತಾರೆ. ಅಗತ್ಯಕ್ಕೆ ತಕ್ಕಂತೆ ಪಕ್ಷಿಗಳನ್ನೂ ಸಹ ಹೋಟೆಲ್‌ ಮಾಲೀಕರು ಬೇಟೆಗಾರರಿಂದ ಖರೀದಿ ಮಾಡಿ, ಗ್ರಾಹಕರ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ಮಹತ್ಕಾರ್ಯಕ್ಕೆ ಕೆಲ ಅರಣ್ಯ ಸಿಬ್ಬಂದಿಯ ಸಹಕಾರವೂ ಸಹ ಇದೆ ಎನ್ನುತ್ತಾರೆ ಸ್ಥಳೀಯರು.
ಅರಣ್ಯ ಪ್ರದೇಶದಲ್ಲಿ ಜಿಂಕೆ, ಕಾಡುಹಂದಿಗಳ ಬೇಟೆ ನಿರಂತರವಾಗಿ ನಡೆಯುತ್ತಿದೆ. ಪ್ರಾಣಿಗಳನ್ನು ಕೊಂದು
ಮಾಂಸವನ್ನು ಹೊತ್ತೂಯ್ಯುವ ಬೇಟೆಗಾರರು, ಚರ್ಮ, ತಲೆಯ ಭಾಗ, ಕರುಳನ್ನು ಚೀಲಕ್ಕೆ ತುಂಬಿ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಕೆರೆಯಲ್ಲಿ ಚೀಲದಲ್ಲಿ ಸಿಕ್ಕ ದೇಹದ ಭಾಗಗಳೇ ಇದಕ್ಕೆ ಸಾಕ್ಷಿ. ಜತೆಗೆ ನೂರಾರು ನವಿಲುಗಳ
ಹತ್ಯೆಯೂ ಸಹ ಆಗುತ್ತಿದೆ. ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸುವುದು ಬಿಟ್ಟು ಕಠಿಣ ಕ್ರಮ ಕೈಗೊಳ್ಳಬೇಕು.
●ಬಿ.ಪಿ.ಮಹೇಶ್‌, ಬಿ.ವಿ.ಹಳ್ಳಿ, ಚನ್ನಪಟ್ಟಣ ತಾಲೂಕು
ಬಿ.ವಿ.ಹಳ್ಳಿಯಲ್ಲಿ ದೊರೆತ ಜಿಂಕೆ ದೇಹದ ಅವಶೇಷಗಳಿಂದ ಈ ವ್ಯಾಪ್ತಿಯಲ್ಲಿ ಬೇಟೆ ನಡೆಯುತ್ತಿದೆ ಎಂಬುದು ದೃಢವಾಗಿದೆ. ಈ ಹಿಂದೆ ಸಾತನೂರು ವನ್ಯಜೀವಿ ವ್ಯಾಪ್ತಿಯಲ್ಲಿ ಜಿಂಕೆ, ಕಾಡುಹಂದಿ ಮಾಂಸ ತಾಲೂಕಿಗೆ ರವಾನೆಯಾಗುತ್ತಿಯೆಂಬ ಮಾಹಿತಿ ಇತ್ತು. ಕಾಡುಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಬದ್ಧವಾಗಿದೆ. ವನ್ಯಜೀವಿ ಬೇಟೆಗೆ ಕಡಿವಾಣ ಹಾಕುವತ್ತ ಹೆಚ್ಚಿನ ಗಮನ ಹರಿಸಲಾಗುವುದು. ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಲು ಸಿಬ್ಬಂದಿ ನಿಯೋಜಿಸಲಾಗುವುದು.
●ಮೊಹಮ್ಮದ್‌ ಮನ್ಸೂರ್‌, ವಲಯ ಅರಣ್ಯಾಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next