ಬೆಂಗಳೂರು: ಮೊಬೈಲ್ ಆ್ಯಪ್ ಮೂಲಕ ಪರಿಚಯವಾದ ವಿಜಯಪುರ ಜಿಲ್ಲೆಯ ಪೊಲೀಸ್ ಪೇದೆ ವಿರುದ್ಧ ಅಕ್ರಮ ಗೃಹ ಬಂಧನ ಆರೋಪದಡಿ ಯುವತಿಯೊಬ್ಬರು ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಯುವತಿ ನೀಡಿದ ದೂರಿನ ಆಧಾರದ ಮೇಲೆ ವಿಜಯಪುರ ಜಿಲ್ಲೆಯ ಪೊಲೀಸ್ ಪೇದೆಯೊಬ್ಬನ ವಿರುದ್ಧ ಕಾಟನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಯುವತಿಯ ಆರೋಪವನ್ನು ತಳ್ಳಿ ಹಾಕಿರುವ ಆರೋಪಿತ, ಆಕೆಯ ಪ್ರಿಯಕರನ ಜತೆ ಸೇರಿ ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಪ್ರತಿ ದೂರು ದಾಖಲಿಸಿದ್ದಾನೆ.
ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಯುವತಿ, 2018ರ ಜುಲೈನಲ್ಲಿ “ಇಮೋ’ ಆ್ಯಪ್ ಮೂಲಕ ಆರೋಪಿಯನ್ನು ಪರಿಚಯಿಸಿಕೊಂಡಿದ್ದಾರೆ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. 2018 ನ.13ರಂದು ವಿಜಯಪುರದಿಂದ ಬಂದ ಆತ ಯುವತಿಯನ್ನು ಭೇಟಿಯಾಗಿದ್ದಾನೆ.
ಬಳಿಕ ಇಬ್ಬರೂ ಸಲುಗೆಯಿಂದ ಇದ್ದರು. ಇನ್ನೊಮ್ಮೆ ಆತನನ್ನು ಭೇಟಿಯಾದ ಯುವತಿ, ಆತನ ಸ್ನೇಹಿತನೊಬ್ಬನಿಗೆ ಸೇರಿದ ಪೊಲೀಸ್ ವಸತಿಗೃಹದ ಕೊಠಡಿಯಲ್ಲಿ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಆ ವೇಳೆ ಪೇದೆಯಿಂದ ಯುವತಿ ಚಿನ್ನಾಭರಣವನ್ನು ಪಡೆದುಕೊಂಡಿದ್ದಾಳೆ ಎನ್ನಲಾಗಿದೆ.
ಈ ಮಧ್ಯೆ ಮಾ.8ರಂದು ಯುವತಿಗೆ ಕರೆ ಮಾಡಿದ ಪೇದೆ ಜೆ.ಪಿ.ನಗರ ಬಸ್ ನಿಲ್ದಾಣಕ್ಕೆ ಬರುವಂತೆ ಹೇಳಿದ್ದು, ಇಬ್ಬರೂ ಪೊಲೀಸ್ ಕ್ವಾಟರ್ಸ್‌ಗೆ ಹೋಗಿದ್ದಾರೆ. ಈ ವೇಳೆ ಯುವತಿ, ಕಾನ್‌ಸ್ಟೆಬಲ್ ಬಳಿ ಒಂದು ಲಕ್ಷ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ.
ಇದರಿಂದ ಕೋಪಗೊಂಡ ಪೇದೆ ಆಕೆಯನ್ನು ಅಲ್ಲಿಂದ ಹೊರ ಹೋಗಲು ಬಿಡದೆ, ಅಕ್ರಮ ಬಂಧನಲ್ಲಿ ಇರಿಸಿದನೆಂಬುದು ಆರೋಪವಾಗಿದೆ. ಆಕೆ, ತನ್ನ ಪ್ರಿಯಕರನಿಗೆ ಕರೆ ಮಾಡಿ ಪೇದೆ ಅತ್ಯಾಚಾರ ಎಸಗಲು ಮುಂದಾಗಿರುವುದಾಗಿ ತಿಳಿಸಿದ್ದು, ಆಕೆಯ ಪ್ರಿಯಕರ ಕಾಟನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿ ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕರದೊಯ್ದು ರಕ್ಷಣೆ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.