Advertisement

ಅಕ್ರಮ ಗೋ ಸಾಗಾಟ, ಹಲ್ಲೆ: 6 ಮಂದಿ ಬಂಧನ

10:35 AM Jun 29, 2019 | Team Udayavani |

ಉಪ್ಪಿನಂಗಡಿ: ಅಕ್ರಮ ಗೋ ಸಾಗಾಟಕ್ಕೆ ಸಂಬಂಧಿಸಿ ಇಬ್ಬರನ್ನು ಹಾಗೂ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ನಾಲ್ವರನ್ನು ಉಪ್ಪಿನಂಗಡಿ ಪೊಲೀಸರು ಗುರುವಾರ ರಾತ್ರಿ ಮೊಗ್ರುನಲ್ಲಿ ಬಂಧಿಸಿದ್ದಾರೆ. ಹಲ್ಲೆ ಆರೋಪದಲ್ಲಿ ಬಂಧಿಸಿದ ನಾಲ್ವರನ್ನು ತಡರಾತ್ರಿಯೇ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು.

Advertisement

ಪಿಕಪ್‌ ವಾಹನ ಚಾಲಕ ಬೆಳಾಲು ನಿವಾಸಿ ಹೊನ್ನಪ್ಪ ಗೌಡ (55) ಮತ್ತು ಮೊಗ್ರು ಗ್ರಾಮದ ಮಾಪಲ ಮನೆಯ ಉಸ್ಮಾನ್‌ (60) ಗೋ ಸಾಗಾಟಕ್ಕೆ ಸಂಬಂಧಿಸಿ ಬಂಧಿತರಾದವರು.

ಹಲ್ಲೆ ನಡೆಸಿದ ಆರೋಪದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯ ಕರ್ತರೆನ್ನಲಾದ ಬಂದಾರು ಗ್ರಾಮದ ಮೈರೋಲ್ತಡ್ಕದ ಸಂತೋಷ್‌ ಪೂಜಾರಿ (30), ಕಣಿಯೂರು ಗ್ರಾಮದ ಧನರಾಜ್‌ (21), ಕಣಿಯೂರು ಗ್ರಾಮದ ಪದುಜ ನಿವಾಸಿ ಲತೀಶ (20) ಹಾಗೂ ಮೋರ್ಜಾಲಿನ ಶರತ್‌ (19) ಅವರನ್ನು ಬಂಧಿಸಲಾಗಿದೆ. 2 ಎತ್ತು ಹಾಗೂ 1 ದನ ಸಹಿತ ಪಿಕಪ್‌ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಘಟನೆ ವಿವರ
ಗುರುವಾರ ರಾತ್ರಿ ಹೊನ್ನಪ್ಪ ಗೌಡ ಪಿಕಪ್‌ನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದು, ಉಸ್ಮಾನ್‌ ದ್ವಿಚಕ್ರ ವಾಹನದಲ್ಲಿ ಅದರ ಜತೆಗೆ ಬರುತ್ತಿದ್ದರು. ಜಾನುವಾರುಗಳನ್ನು ಕದ್ದು ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಎರಡೂ ವಾಹನಗಳನ್ನು ಮೊಗ್ರು ಜಂಕ್ಷನ್‌ನಲ್ಲಿ ಅಡ್ಡಗಟ್ಟಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಉಪ್ಪಿನಂಗಡಿ ಪೊಲೀಸರು ಅಲ್ಲಿಗೆ ಧಾವಿಸಿ ಗೋ ಸಾಗಾಟಗಾರರನ್ನು ಹಾಗೂ ಹಲ್ಲೆ ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡರು. ಪೊಲೀಸರನ್ನು ಕಂಡು ಜನರ ಗುಂಪು ಚದುರಿದ್ದು, ಸ್ಥಳದಲ್ಲಿದ್ದ ಬೈಕುಗಳನ್ನು ಪೊಲೀಸರು ಠಾಣೆಗೆ ತಂದರು.

ಹಿಂದೂಪರ ಸಂಘಟನೆ ಕಾರ್ಯಕರ್ತರ ಜಮಾವಣೆ
ಅಕ್ರಮ ಗೋ ಸಾಗಾಟಗಾರರನ್ನು ತಡೆದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಸುಮಾರು 200ರಷ್ಟು ಕಾರ್ಯಕರ್ತರು ತಡರಾತ್ರಿ ಉಪ್ಪಿನಂಗಡಿ ಠಾಣೆ ಮುಂದೆ ಜಮಾಯಿಸಿದರು.  ಬಳಿಕ ಸ್ಥಳಕ್ಕೆ ಶಾಸಕ ಹರೀಶ್‌ ಪೂಂಜ, ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ ಸಹಿತ ಹಿಂದೂಪರ ಸಂಘಟನೆಗಳ ಪ್ರಮುಖರು ಆಗಮಿಸಿ ತಮ್ಮ ಕಾರ್ಯಕರ್ತರ ಮೇಲೆ ಪ್ರಕರಣ ಕೈ ಬಿಡುವಂತೆ ಪಟ್ಟು ಹಿಡಿದರು. ಆದರೆ ಒತ್ತಡಕ್ಕೆ ಮಣಿಯದ ಪೊಲೀಸರು ಗೋ ಸಾಗಾಟಗಾರರು ಹಾಗೂ ಹಲ್ಲೆ ಆರೋಪಿಗಳ ಮೇಲೂ ಪ್ರಕರಣ ದಾಖಲಿಸಿಕೊಂಡರು. ಕಾನೂನಾತ್ಮಕ ಪ್ರಕ್ರಿಯೆಗಳ ಬಳಿಕ ಆರೋಪಿಗಳನ್ನು ಬಿಡುವುದಾಗಿ ಮುಖಂಡರಿಗೆ ಭರವಸೆ ನೀಡಿದರು. ಬಳಿಕ ಹಿಂದೂಪರ ಕಾರ್ಯಕರ್ತರು ಠಾಣೆ ಬಳಿಯಿಂದ ತೆರಳಿ ಉಪ್ಪಿನಂಗಡಿ ದೇವಾಲಯದ ಬಳಿ ಸೇರಿದರು. ರಾತ್ರಿ 1 ಗಂಟೆಯಾದರೂ ಆರೋಪಿಗಳನ್ನು ಬಿಡದಿದ್ದಾಗ ಮತ್ತೆ ಠಾಣೆಯ ಮುಂದೆ ಜಮಾಯಿಸಿ, ಶಾಸಕ ಹರೀಶ್‌ ಪೂಂಜ ಅವರ ನೇತೃತ್ವದಲ್ಲಿ ಠಾಣೆ ಮೆಟ್ಟಿಲಿನಲ್ಲಿ ಧರಣಿ ಕೂತರು. ಕಾನೂನಾತ್ಮಕ ಪ್ರಕ್ರಿಯೆಗಳು ಮುಗಿದ ಬಳಿಕ ನಾಲ್ವರು ಹಲ್ಲೆ ಆರೋಪಿಗಳನ್ನು ಜಾಮೀನಿನ ಮೂಲಕ ಬಿಡುಗಡೆಗೊಳಿಸಲಾಯಿತು.

Advertisement

ಉದ್ವಿಗ್ನ ಸ್ಥಿತಿ
ಇತ್ತ ಪೇಟೆಯಲ್ಲಿ ಮುಸ್ಲಿಂ ಪರ ಸಂಘಟನೆಗಳ ಕಾರ್ಯಕರ್ತರೂ ಜಮಾಯಿಸತೊಡಗಿದರು. ಅಕ್ರಮ ಗೋ ಸಾಗಾಟಗಾರರ ಪರವಾಗಿಯೂ ನಿಯೋಗವೊಂದು ಠಾಣೆಗೆ ತೆರಳಿ ಮಾತುಕತೆ ನಡೆಸಿತು. ಪುತ್ತೂರು ಗ್ರಾಮಾಂತರ ಸಿಐ ನಾಗೇಶ್‌ ಕದ್ರಿ ಹಾಗೂ ಉಪ್ಪಿನಂಗಡಿ ಎಸ್‌ಐ ನಂದ ಕುಮಾರ್‌ ಅವರು ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next