ಬೆಂಗಳೂರು: ಕೊಲೆ ಯತ್ನ ಪ್ರಕರಣದಲ್ಲಿ ತಮ್ಮ ದೇಶದ ಕೋರ್ಟ್ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆ ಭಾರತಕ್ಕೆ ಅಕ್ರಮ ನುಸುಳಿ ಬಂದು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಕೊಲೆ, ದರೋಡೆ, ವಾಹನ ಕಳವು ಮಾಡುತ್ತಿದ್ದ ಇಬ್ಬರು ಅಂತಾರಾಷ್ಟ್ರೀಯ ಕಳ್ಳರು ಕೆಂಪೇಗೌಡನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಅತ್ತೆಬೆಲೆ ನಿವಾಸಿ ಒಬಿ ಮುಲ್ಲಾ ಅಲಿಯಾಸ್ ಬಪ್ಪಿ(32) ಮತ್ತು ಮೊಹಮ್ಮದ್ ನಾಸೀರ್ ಶೇಖ್ ಅಲಿಯಾಸ್ ಗುಪ್ರಾನ್ (35) ಬಂಧಿತರು. ಆರೋಪಿಗಳಿಂದ ಎಂಟು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಏಪ್ರಿಲ್ 25ರಂದು ಸಂಜೆ 6 ಗಂಟೆ ಸುಮಾರಿಗೆ ಭವಾನಿನಗರದ ವ್ಯಾಪ್ತಿಯಲ್ಲಿ ಕಳವು ಮಾಡಿದ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದರು. ಅನುಮಾನದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ವಾಹನ ಕಳ್ಳರು ಎಂಬುದು ಪತ್ತೆಯಾಗಿದೆ. ನಂತರ ಠಾಣೆಗೆ ಕರೆದೊಯ್ದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಬಾಂಗ್ಲಾದೇಶದ ಪ್ರಜೆಗಳು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಬಾಂಗ್ಲಾದೇಶದಲ್ಲೂ ಆರೋಪಿಗಳು!
ಇಬ್ಬರು ಆರೋಪಿಗಳ ವಿರುದ್ಧ ಬಾಂಗ್ಲಾದೇಶದಲ್ಲಿ ಕೊಲೆ, ಸುಲಿಗೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿದೆ. ಕೊಲೆ ಯತ್ನ ಪ್ರಕರಣವೊಂದರಲ್ಲಿ ಅಲ್ಲಿನ ಸ್ಥಳೀಯ ಕೋರ್ಟ್ 5 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಬಳಿಕ ಭಾರತಕ್ಕೆ ಅಕ್ರಮವಾಗಿ ಒಳ ನುಸುಳಿಕೊಂಡು ಬಂದಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ವಾಸವಾಗಿರುವಂತೆ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. 6 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ನೆಲಮಂಗಲದಲ್ಲಿ ವಾಸವಾಗಿದ್ದರು. 2018ರಲ್ಲಿ ಯುವತಿ ವಿಚಾರಕ್ಕೆ ಬಾಂಗ್ಲಾದೇಶದ ತಮ್ಮ ಸ್ನೇಹಿತ ಇಫ್ತಿಕರ್ ಎಂಬಾತನ ಕೊಲೆಗೈದು, ಎಂಟು ತಿಂಗಳು ಜೈಲು ಶಿಕ್ಷೆ ಕೂಡ ಅನುಭವಿಸಿದ್ದಾರೆ. ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿಗಳು, ಬೆಂಗಳೂರು ಗ್ರಾಮಾಂತರ ಅತ್ತಿಬೆಲೆಯಲ್ಲಿ ವಾಸವಾಗಿದ್ದು, ಪಾರ್ಕಿಂಗ್ ಸ್ಥಳ ಮತ್ತು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ನಂತರ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿ, ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಉಗ್ರರಿಂದ ಕಾಶ್ಮೀರಿ ಪಂಡಿತರ ಹತ್ಯೆ; ಹೆದ್ದಾರಿ ತಡೆದು ಪ್ರತಿಭಟನೆ; ಸರ್ಕಾರದ ವಿರುದ್ಧ ಘೋಷಣೆ
ಈ ವಿಶೇಷ ಕಾರ್ಯಾಚರಣೆಯಲ್ಲಿ ಕೆಂಪೇಗೌಡನಗರ ಠಾಣೆ ಇನ್‌ಸ್ಪೆಕ್ಟರ್ ರಕ್ಷಿತ್, ಪಿಎಸ್‌ಐಗಳಾದ ಇಮ್ರಾನ್, ಜೆ.ಎಂ.ಅಬ್ರಾಹಂ, ಸಿಬ್ಬಂದಿ ತುಳಸಿ ದಾಸ್, ಬಹ್ಮಾನಂದ, ಸಿದ್ದನಗೌಡ ಇತರರಿದ್ದರು.
ಗಡಿಪಾರಿಗೆ ಚಿಂತನೆ
ಆರೋಪಿಗಳು ಪಶ್ಚಿಮ ಬಂಗಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಒಳ ನುಸುಳಿದ್ದಾರೆ. ಹೀಗಾಗಿ ಆರೋಪಿಗಳನ್ನು ಗಡಿಪಾರು ಮಾಡಲು ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.