Advertisement

ಟ್ರಕ್‌ಗಳ ಅಕ್ರಮ ಪ್ರವೇಶಕ್ಕೆ ಗುಲಗಂಜಿ ದಂಡ

01:12 PM Feb 05, 2022 | Team Udayavani |

ಬೆಂಗಳೂರು: ದೊಡ್ಡಲಾಭ ಗಿಟ್ಟಿಸಿಕೊಳ್ಳುವ ಭಾರೀ ವಾಹನಗಳು ನಗರಕ್ಕೆ ಅಕ್ರಮ ಪ್ರವೇಶ ಮಾಡಲು “ಗುಲಗಂಜಿ’ ದಂಡದ ಮೂಲಕ ಪೊಲೀಸರೇ ಸಕ್ರಮ ಹಾದಿ ತೋರಿಸಿಕೊಡುತ್ತಿದ್ದಾರೆ ಎಂಬ ಆಪಾದನೆಗಳು ದಟ್ಟವಾಗಿ ಕೇಳಿಬರುತ್ತಿವೆ.

Advertisement

ಇತ್ತೀಚೆಗೆ ಪೀಕ್‌ ಅವರ್‌ನಲ್ಲಿಯೂ ನಗರ ಪ್ರವೇಶಿಸುವ ಟ್ರಕ್‌, ಸಗಟು,ಕಾಂಕ್ರಿಟ್‌ ಸೇರಿ ಮೂರು ಟನ್‌ಗೂ ಅಧಿಕ ಭಾರ ಹೊರುವ ವಾಹನಗಳ ವಿರುದ್ಧಸಂಚಾರ ಪೊಲೀಸರು “ಅಕ್ರಮ ಪ್ರವೇಶ’ ಉಲ್ಲಂಘನೆ ಅಡಿಯಲ್ಲಿ 500 ರೂ. ದಂಡ ವಿಧಿಸುತ್ತಾರೆ. ಆದರೆ, ಕನಿಷ್ಠ 10 ರಿಂದ 60 ಸಾವಿರ ರೂ. ವರೆಗೆ ಬಾಡಿಗೆ ಪಡೆಯುವ ವಾಹನ ಮಾಲೀಕರಿಗೆ 500 ರೂ. “ಗುಲಗಂಜಿ’ ಸಮವೂ ಅಲ್ಲ. ಹೀಗಾಗಿ ನಗರದಲ್ಲಿ ಭಾರೀ ವಾಹನಗಳ ಓಡಾಟ ಹೆಚ್ಚಾಗುತ್ತಲೇ ಇದೆ.

ನೆಪಮಾತ್ರಕ್ಕೆ ದಂಡ: ಸಂಚಾರ ಪೊಲೀಸರು ನೆಪಮಾತ್ರಕ್ಕೆ ನಗರದಲ್ಲಿ ಭಾರೀ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆಯೇ ಹೊರತು ಕಠಿಣ ಕ್ರಮಗಳು ಕೈಗೊಳ್ಳುತ್ತಿಲ್ಲ. ನಗರದಲ್ಲಿ ಒಂದು ತಿಂಗಳಲ್ಲಿ 19 ಮಂದಿಮೃತಪಟ್ಟ ಬಳಿಕ ಕಳೆದ 15 ದಿನಗಳಿಂದ ಕಾರ್ಯಾಚರಣೆ ಆರಂಭಿಸಿರುವ ಸಂಚಾರ ಪೊಲೀಸರು, ದಂಡ ವಿಧಿಸುತ್ತಿದ್ದಾರೆ. ಕೇವಲ 500 ರೂ. ದಂಡ ವಿಧಿಸಿಕೊಂಡು, ಆ ರಸೀದಿಯನ್ನು ಹಿಡಿದು ನಂತರ ನಗರದಲ್ಲಿ ಎಲ್ಲೆಡೆ ಭಾರೀ(ಟಿಪ್ಪರ್‌, ಕಾಂಕ್ರಿಟ್‌, ಸಗಟು ಲಾರಿಗಳು) ಸಂಚರಿಸುತ್ತಿವೆ.

ಈ ನಡುವೆ ದಂಡ ಅಥವಾ ವಾಹನ ಜಪ್ತಿಗೆ ಮುಂದಾದರೆ,ಸ್ಮಾರ್ಟ್‌ ಸಿಟಿ, ಟೆಂಡರ್‌ ಶ್ಯೂರ್‌ ಯೋಜನೆ ಹೆಸರಿನಲ್ಲಿ ಜೆಲ್ಲಿ ತುಂಬಿದ ಲಾರಿ, ಕ್ರಷರ್‌, ರೆಡಿಮಿಕ್ಸ್‌ ಕಾಂಕ್ರೀಟ್‌ ವಾಹನಗಳು ಸಂಚರಿಸುತ್ತಿವೆ. ಮತ್ತೂಂದೆಡೆ ನಗರದಲ್ಲಿ ವಾಹನ ಜಪ್ತಿ ಮಾಡಿದರೂ ಅವುಗಳ ಪಾರ್ಕಿಂಗ್‌ಗೆ ಅವಕಾಶ ಇಲ್ಲವಾದ್ದರಿಂದ ಸಂಚಾರ ಪೊಲೀಸರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ರಸ್ತೆಗಳು ಹಾಳು: ಭಾರೀ ವಾಹನಗಳು ನಗರದಲ್ಲಿ ಎಲ್ಲೆಂದರಲ್ಲಿ ಸಂಚರಿಸುವುದರಿಂದ ರಸ್ತೆಗಳು ಹದಗೆಡುತ್ತಿವೆ. ಜತೆಗೆ ಕೆಲ ಸಂದರ್ಭದಲ್ಲಿ ರಸ್ತೆ ಮಧ್ಯೆ ಜೆಲ್ಲಿ, ಕಾಂಕ್ರಿಟ್‌, ಮಣ್ಣು, ಸಿಮೆಂಟ್‌ ಕೊಂಡೊಯ್ಯುವ ಲಾರಿಗಳಿಂದ ಬಿದ್ದು ರಸ್ತೆ ಹಾಳಾಗಿರುವ ಉದಾಹರಣೆಗಳು ಇವೆ. ಮತ್ತೂಂದೆಡೆ ನಗರದ ಹೆಬ್ಟಾಗಿಲು ನೆಲಮಂಗಲ,ಪೀಣ್ಯ ಭಾಗದಲ್ಲಿ ರಸ್ತೆ ಬದಿ ನಿಲ್ಲುವ ಲಾರಿಗಳು ಸರಿಯಾಗಿ ಸಿಗ್ನಲ್‌ ದೀಪ ಹಾಕುವುದಿಲ್ಲ. ಅದರಿಂದ ರಾತ್ರಿ ವೇಳೆ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆದುಕೊಂಡು ರಸ್ತೆ ಅಪಘಾತಗಳು ಸಂಭವಿಸಿವೆ.

Advertisement

ಭಾರೀ ವಾಹನಗಳಲ್ಲಿ ಅಕ್ರಮ!: ಸಂಚಾರ ದಟ್ಟಣೆ, ರಸ್ತೆ ಅಪಘಾತ ಮಾತ್ರವಲ್ಲ, ಕೆಲ ಭಾರೀ ವಾಹನಗಳಲ್ಲಿ ಅಕ್ರಮ ವಸ್ತುಗಳು ಸಾಗಾಟ ಮಾಡಲಾಗುತ್ತಿದೆ. ರಕ್ತ ಚಂದನ, ಡ್ರಗ್ಸ್‌ ಹೀಗೆ ಕೆಲವೊಂದು ನಿಷೇಧಿತ ವಸ್ತು ಗಳ ಸಾಗಾಟದಲ್ಲೂ ಭಾರೀ ವಾಹನಗಳ ಪಾತ್ರ ಇರುತ್ತದೆ. ವಾಹನಗಳ ತಪಾಸಣೆ ಸಂದರ್ಭದಲ್ಲಿ ಮೊದಲಿಗೆ ಚಲನಾ ಪರವಾನಿಗೆ, ವಸ್ತುವಿನ ಬಗ್ಗೆಯಷ್ಟೇ ಪ್ರಶ್ನಿಸಲಾಗುತ್ತದೆ. ಅದನ್ನು ಹೊರತು ಪಡಿಸಿ ವಾಹನದಲ್ಲಿ ಯಾವ ವಸ್ತುಗಳು ಇವೆ. ಎಲ್ಲಿಗೆ ಸಾಗಾಟ ಮಾಡಲಾಗುತ್ತಿದೆ. ವಸ್ತುಗಳ ಮೇಲೆ ಟಾರ್ಪಲ್‌ ಹಾಕುವುದರಿಂದ ಪೊಲೀಸರು ಕೂಡ ಕಣ್ಣಿಗೆ ಕಾಣುವ ಉಲ್ಲಂಘ ನೆಗಳಿಗಷ್ಟೇ ದಂಡ ವಿಧಿಸಿ ಕಳುಹಿಸುತ್ತಿದ್ದಾರೆ.

ಇತ್ತೀಚೆಗೆ ಲಾರಿಯಲ್ಲಿ ಹೊಸಕೋಟೆಯಿಂದ ಉತ್ತರ ಕರ್ನಾಟಕಕ್ಕೆ ರಕ್ತಚಂದನ ಸಾಗಾಟ ಮಾಡಲಾಗಿತ್ತು. ಹೀಗೆ ಸಾಕಷ್ಟು ಉದಾಹರಣೆಗಳು ಇವೆ. ಈ ಮಧ್ಯೆ ಚಾಲನಾ ಪರವಾನಿಗೆ ಇಲ್ಲದೆಯೇ ವಾಹನ ಚಾಲನೆ ಪ್ರಕರಣಗಳು ಕಂಡು ಬರುತ್ತಿವೆ. ಕ್ಲೀನರ್‌ ಅಥವಾ ಬೇರೊಬ್ಬ ವ್ಯಕ್ತಿ ವಾಹನಗಳ ಚಾಲನೆ ಮಾಡುವುದರಿಂದ ರಸ್ತೆ ಅಪಘಾತ ಆಗುತ್ತಿದೆ.

ಭಾರೀ ದಂಡ ವಿಧಿಸಲು ಸಾಧ್ಯವಿಲ್ಲ : ಕೇಂದ್ರ ಸರ್ಕಾರದ ಮೋಟಾರ್‌ ವಾಹನ ಕಾಯ್ದೆ ಅಡಿಯಲ್ಲಿ ಅಕ್ರಮ ಪ್ರವೇಶ ನಿಯಮ ಉಲ್ಲಂಘನೆಗೆ ಕೇವಲ 500 ರೂ. ಮಾತ್ರ ದಂಡ ವಿಧಿಸಲಾಗುತ್ತದೆ. ಹೆಚ್ಚಿನ ದಂಡ ವಿಧಿಸಲು ಸಾಧ್ಯವಿಲ್ಲ. ಅಲ್ಲದೆ, ರಾಜ್ಯ ಸರ್ಕಾರ ಅದಕ್ಕಿಂತ ಕಡಿಮೆ ದಂಡ ವಿಧಿಸಬಹುದೇ ಹೊರತು ಹೆಚ್ಚಿನ ದಂಡ ವಿಧಿಸಲು ಸಾಧ್ಯವಿಲ್ಲ. ಜತೆಗೆ ಈ ಉಲ್ಲಂಘನೆಗೆ ಶಿಕ್ಷೆ ಇಲ್ಲದಿರುವುದರಿಂದಲೇ ಭಾರೀ ವಾಹನಗಳ ಮಾಲೀಕರು ರಾಜಾರೋಷವಾಗಿ ನಗರ ಪ್ರವೇಶಿಸುತ್ತಿದ್ದಾರೆ.

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next