ಬಾಗಲಕೋಟೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ 62 ಸ್ಥಾನಗಳಿಗೆ ಜೂ. 13ರಂದು ಚುನಾವಣೆ ನಡೆಯುತ್ತಿದ್ದು, ಸಂಘದ ಹಾಲಿ ಕಾರ್ಯಕಾರಿ ಸಮಿತಿ, ನಿಯಮ ಉಲ್ಲಂಘಿಸಿ, ಅಕ್ರಮ ಚುನಾವಣೆಗೆ ಮುಂದಾಗಿದೆ ಎಂದು ವಿವಿಧ ಇಲಾಖೆಗಳ ನೌಕರರು ಆರೋಪಿಸಿದರು.
ಸರ್ಕಾರಿ ಎಸ್.ಸಿ, ಎಸ್.ಟಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಯಂಕಂಚಿ, ಸಣ್ಣ ಉಳಿತಾಯ ಇಲಾಖೆಯ ಎಂ.ಸಿ. ಕೋಟಿ, ಪಶು ಸಂಗೋಪನೆ ಇಲಾಖೆಯ ಎಸ್.ಎಚ್. ಘಂಟಿ ಮುಂತಾದವರು ರವಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದರು.
ಸರ್ಕಾರಿ ನೌಕರರ ಸಂಘದ ಚುನಾವಣೆ ವ್ಯಾಪ್ತಿಗೆ ಕೇಂದ್ರ ಸಮಿತಿಯಡಿ 46 ಇಲಾಖೆ ಹಾಗೂ ಜಿಲ್ಲೆಯಲ್ಲಿ ಸ್ಥಳೀಯವಾಗಿ ಕಾರ್ಯ ನಿರ್ವಹಿಸುವ 3 ಇಲಾಖೆಗಳು ಸೇರಿ ಒಟ್ಟು 49 ಇಲಾಖೆ ಬರುತ್ತಿದ್ದು, ಒಂದೊಂದು ಇಲಾಖೆಗೂ ನಿರ್ದೇಶಕ ಸ್ಥಾನ ಹಂಚಿಕೆ ಮಾಡುವ ಅಧಿಕಾರವನ್ನು ನಿಯಮಕ್ಕೆ ಒಳಪಟ್ಟು ಜಿಲ್ಲಾಘಟಕಕ್ಕೆ ನೀಡಲಾಗುತ್ತದೆ. ಆದರೆ, ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ, ತನ್ನ ಮನಸ್ಸಿಗೆ ಬಂದಂತೆ, ತಮ್ಮ ಸಂಬಂಧಿಕರ ಹಾಗೂ ಅತಿಹೆಚ್ಚು ಕೆಲಸ ಮಾಡುವ ಇಲಾಖೆಗೆ ಅತಿ ಕಡಿಮೆ ನಿರ್ದೇಶಕ ಸ್ಥಾನಗಳನ್ನು ಹಂಚಿಕೆ ಮಾಡಿದೆ. ಇನ್ನು 7 ಇಲಾಖೆಗಳಲ್ಲಿ ನೌಕರರಿದ್ದರೂ, ಅಲ್ಲಿ ನೌಕರರಿಲ್ಲ ಎಂದು ಬೇರೆ ಇಲಾಖೆಯನ್ನು ಆ ಸ್ಥಾನಗಳೊಂದಿಗೆ ವಿಲೀನ ಮಾಡಿ, 7 ಇಲಾಖೆಗೆ ಅವಕಾಶ ಸಿಗದಂತೆ ಮಾಡಿದ್ದಾರೆ ಎಂದರು.
ಸರ್ಕಾರಿ ನೌಕರರ ವೇತನದಲ್ಲಿ 100 ರೂ. ಕಡಿತ ಮಾಡಿಕೊಂಡು ಸಂಘದ ಸದಸ್ಯತ್ವ ನವೀಕರಣಕ್ಕೆ ಬಳಕೆ ಮಾಡಲಾಗುತ್ತದೆ. ಇದು ನೇರವಾಗಿ ಟ್ರೇಝರಿಯ ನಮ್ಮ ವೇತನ ಖಾತೆಯಿಂದ ಸಂಘದ ಖಾತೆಗೆ ಹೋಗುತ್ತದೆ. ಹೀಗೆ ಹಲವು ನೌಕರರು ಸದಸ್ಯತ್ವ ಶುಲ್ಕ ನೀಡಿದ್ದರೂ ಅವರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಚುನಾವಣೆ ಇದೇ ಜೂನ್ 13ರಂದು ನಡೆಯುತ್ತಿದ್ದರೂ ಅಧಿಕೃತವಾಗಿ ಪ್ರಚಾರ ಮಾಡಬೇಕಿದ್ದ ಹಾಲಿ ಕಾರ್ಯಕಾರಿ ಸಮಿತಿ, ಗೌಪ್ಯ ಎಂಬಂತೆ ಚುನಾವಣೆ ನಡೆಸಲು ಮುಂದಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ನೌಕರರ ಸಂಘದ ಚುನಾವಣೆ, ಜಿಲ್ಲೆಯ ಎಲ್ಲ ಚುನಾವಣೆಗಳಿಗೆ ಮಾದರಿಯಾಗಿ, ಉತ್ತಮ ಹೆಸರು ಪಡೆಯಬೇಕು. ಆದರೆ, ಇಲ್ಲಿಯೇ ಅಕ್ರಮ ನಡೆಯುತ್ತಿದೆ. ಈ ಕುರಿತು ಜೂ. 3ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ಸರ್ಕಾರಿ ನೌಕರರ ಸಂಘದ ಚುನಾವಣಾಧಿಕಾರಿಗೂ ಮನವಿ ಕೊಡಲಿದ್ದು, ಪಾರದರ್ಶಕ ಚುನಾವಣೆ ನಡೆಸದಿದ್ದರೆ ಕಾನೂನು ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಕಾರ್ಮಿಕ ಇಲಾಖೆಯ ಅಶೋಕ ಒಡೆಯರ, ಆರೋಗ್ಯ ಇಲಾಖೆಯ ರಾಜು ಅಜ್ಜೋಡಿ, ಶಿಕ್ಷಣ ಇಲಾಖೆಯ ಎಚ್.ಟಿ. ಕೊಡ್ಡನ್ನವರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಶಫಿಅಹ್ಮದ ಅಚನೂರ ಉಪಸ್ಥಿತರಿದ್ದರು.