Advertisement

ಮಡಪ್ಪಾಡಿ: ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ದೂರು

02:15 AM Jul 15, 2017 | Team Udayavani |

ಉಪ್ಪಿನಂಗಡಿ: ತಣ್ಣೀರುಪಂಥ ಗ್ರಾಮದ ಮಡಪ್ಪಾಡಿ ಎಂಬಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಸ್ಫೋಟಕ ಸಿಡಿಸಿ, ಕಲ್ಲು ಕೋರೆಯ ಆಳದ ಮಧ್ಯದಲ್ಲಿ ಹಿಟಾಚಿ ಬಳಸುತ್ತಿರುವುದು ಸುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ. ಈ ಗಣಿಗಾರಿಕೆಯಿಂದ ಮಡೆಪ್ಪಾಡಿ, ಮಂದಿಲ, ಮಾನ್ಯ, ಪಾಲೇದು, ಬಾಳಿಂಜ, ಹೊಸಮನೆ, ಪೆಜಕೊಡಂಗೆ, ಆಚಾರಿಬೆಟ್ಟು ಮೊದಲಾದ ಪ್ರದೇಶದ ನಿವಾಸಿಗಳ ಮನೆಗಳು ಬಿರುಕು ಬಿಡಲಾರಂಭಿಸಿವೆ. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಗ್ರಾಮಸ್ಥರು ದ.ಕ. ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ತಣ್ಣೀರುಪಂಥ ಗ್ರಾಮದ ಮಡಪ್ಪಾಡಿ ಪ್ರದೇಶವು ಭಾಗಶಃ ಮೀಸಲು ಅರಣ್ಯ ಭೂಮಿಯಾಗಿದೆ. ಇಲ್ಲಿ ಗಣಿಗಾರಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಸ್ಫೋಟದ ಶಬ್ದಕ್ಕೆ ಸನಿಹದಲ್ಲೇ ಇರುವ ಕಾಡಿನಲ್ಲಿನ ಪ್ರಾಣಿಗಳು ಭಯಪಡುತ್ತಿವೆ ಎಂದೂ ಗ್ರಾಮಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

Advertisement

ಬಾಯ್ದೆರೆದ ಹೊಂಡ
ಗಣಿಗಾರಿಕೆಯಿಂದಾಗಿ ಸುಮಾರು 1 ಎಕ್ರೆ ಪ್ರದೇಶದಲ್ಲಿ ಸುಮಾರು 300 ಅಡಿ ಆಳಕ್ಕೆ ಬೃಹತ್‌ ಹೊಂಡವಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಇದರ ಸನಿಹದಲ್ಲೇ ಗ್ರಾಮಸ್ಥರು, ಶಾಲಾ ಮಕ್ಕಳು, ಜಾನುವಾರುಗಳು ಓಡಾಡುತ್ತಿದ್ದು, ಯಾವ ಕ್ಷಣದಲ್ಲಿ ದುರಂತ ಸಂಭವಿಸುತ್ತದೋ ಎಂಬ ಭಯ ಗ್ರಾಮಸ್ಥರದ್ದು. ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮದ ಪ್ರಕಾರ ಕಲ್ಲು ಗಣಿಗಾರಿಕೆ ನಡೆಯುವ ಸುತ್ತ  ಕಡ್ಡಾಯವಾಗಿ ಸುರಕ್ಷತಾ ಕ್ರಮವಾಗಿ 6 ಅಡಿ ತಡೆಗೋಡೆಯನ್ನು ನಿರ್ಮಿಸಬೇಕು. ಆದರೆ ಇಲ್ಲಿ ಅಂತಹ ಯಾವುದೇ ಅಡೆ ತಡೆಗಳಿಲ್ಲ. ಕಲ್ಲು ಗಣಿಗಾರಿಕೆ ನಡೆಯುವಲ್ಲಿ ಅತ್ಯಂತ ಅಪಾಯಕಾರಿಯಾಗಿ ಯಂತ್ರದ ಮೂಲಕ ಕಲ್ಲು ಸಿಡಿಸಲಾಗುತ್ತಿದೆ. ಇದರ ಕಾರ್ಮಿಕರು ನೆಲದಿಂದ ಸುಮಾರು 200 ಅಡಿ ಎತ್ತರದಲ್ಲಿ ಕಲ್ಲು ಬಂಡೆಯ ಮಧ್ಯೆ ಕುಳಿತು ಕಲ್ಲು ಸಿಡಿಸುವುದು ಕಂಡು ಬಂದಿದ್ದು, ಇವರಿಗೆ ಯಾವುದೇ ಸುರಕ್ಷಾ ವ್ಯವಸ್ಥೆ ಕಲ್ಪಿಸಿಲ್ಲ. ಇಲ್ಲಿ ಎಲ್ಲ ಸುರಕ್ಷಾ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಆಪಾದಿಸಲಾಗಿದೆ. ಕಲ್ಲು ಗಣಿಗಾರಿಕೆ ನಡೆಯುವ ಜಮೀನಿನಿಂದ 40 ಮೀ. ಅಂತರದಲ್ಲಿ ಕುದ್ರಡ್ಕ-ಪಾಲೇದು- ಲಿಂಗಸ್ಥಳ- ಕಕ್ಕೆಪದವು ರಸ್ತೆ  ಸಂಪರ್ಕ ಇದ್ದು, ಗಣಿಗಾರಿಕೆಯ ಸ್ಫೋಟಕ್ಕೆ ರಸ್ತೆ ಬಿರುಕು ಬಿಡುತ್ತಿದೆ. ಅಧಿಕ ಭಾರದ ಕಲ್ಲು ಹೇರಿಕೊಂಡು ಹೋಗುವ ಲಾರಿಗಳಿಂದಾಗಿ ರಸ್ತೆಯ ಉದ್ದಕ್ಕೂ ಹೊಂಡ ನಿರ್ಮಾಣವಾಗಿದೆ ಎಂದು ದೂರಲಾಗಿದೆ. 50ಕ್ಕೂ ಮಿಕ್ಕಿ ಗ್ರಾಮಸ್ಥರು ದೂರಿನಲ್ಲಿ ಸಹಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.

ಅರಣ್ಯದೊಳಗೆ ಅಕ್ರಮ ರಸ್ತೆ; ಇಲಾಖೆಯಿಂದ ಬಂದ್‌


ಆಪಾದಿತರು ಕಲ್ಲು ಕೋರೆಯಿಂದ ಕ್ರಶರ್‌ ಮಧ್ಯೆ ಅರಣ್ಯಪ್ರದೇಶದೊಳಗೆ ಅಕ್ರಮವಾಗಿ ರಸ್ತೆ ನಿರ್ಮಿಸಿಕೊಂಡಿದ್ದರು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅದರಂತೆ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಸಿಬಂದಿ ಆ ರಸ್ತೆಯನ್ನು ಮಂಗಳವಾರ ಹಿಟಾಚಿ ಮೂಲಕ ಹೊಂಡ ತೋಡಿ ಬಂದ್‌ ಮಾಡಿದ್ದಾರೆ.

ಪರವಾನಿಗೆ ಹೊಂದಿದ್ದೇವೆ
ಕಲ್ಲು ಗಣಿಗಾರಿಕೆಗೆ ಪರವಾನಗಿ ಹೊಂದಿದ್ದು, ಅರಣ್ಯ ಭೂಮಿ ಒತ್ತುವರಿ ಮಾಡಿಲ್ಲ ಎನ್ನುತ್ತಾರೆ ಕಲ್ಲು ಗಣಿಗಾರಿಕೆ ಮಾಲಕಿ ಸುನೀತಾ ಅವರ ಪರವಾಗಿ ಅವರ ಪತಿ ತಣ್ಣೀರುಪಂಥ ಗ್ರಾ.ಪಂ. ಸದಸ್ಯ ಸದಾನಂದ ಶೆಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next