ಬೆಂಗಳೂರು: ಅಕ್ರಮವಾಗಿ ಸಿಡಿಆರ್(ಕಾಲ್ ಡಿಟೈಲ್ಸ್ ರೆಕಾರ್ಡ್) ಪಡೆದುಕೊಂಡು ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಸಿಐಡಿ ಹೆಡ್ ಕಾನ್‌ಸ್ಟೇಬಲ್ ಮತ್ತು ಖಾಸಗಿ ಡಿಟೆಕ್ಟಿವ್ ಏಜೆನ್ಸಿಯ ಮಾಲೀಕನನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಸಿಐಡಿಯ ತಾಂತ್ರಿಕ ವಿಭಾಗದ ಹೆಡ್ ಕಾನ್‌ಸ್ಟೇಬಲ್ ಮುನಿರತ್ನ ಮತ್ತು ಪ್ರಕರಣದ ಕಿಂಗ್‌ಪಿನ್ ನಾಗೇಶ್ವರ ರೆಡ್ಡಿ ಬಂಧಿತರು. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಕಳೆದ ಮೇನಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದರಾಜನಗರ ಮತ್ತು ಬಸವೇಶ್ವರನಗರ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳನ್ನು ದಾಖಲಾಗಿತ್ತು. ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳ ಮಾಲೀಕರು ಹಾಗೂ ಮಧ್ಯವರ್ತಿಗಳಾದ ಪುರುಷೋತ್ತಮ, ಸತೀಶ್ ಕುಮಾರ್, ತಿಪ್ಪೇಸ್ವಾಮಿ, ಮಹಾಂತಗೌಡ, ರೇವಂತ, ಗುರುಪಾದಸ್ವಾಮಿ, ಶ್ರೀನಿವಾಸ ಮತ್ತು ಭರತ್ ಸೇರಿ 10 ಮಂದಿಯನ್ನು ಬಂಧಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದಾಗ ಸಿಐಡಿಯ ಹೆಡ್ ಕಾನ್‌ಸ್ಟೇಬಲ್ ಮುನಿರತ್ನ ಕೈವಾಡ ಪತ್ತೆಯಾಗಿತ್ತು. ಜತೆಗೆ ಈತ ಅಕ್ರಮವಾಗಿ ಸಿಡಿಆರ್ ಪಡೆದುಕೊಂಡು ಆಂಧ್ರಪ್ರದೇಶದಲ್ಲಿ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಲೀಕ ನಾಗೇಶ್ವರ ರೆಡ್ಡಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಸಿಐಡಿಯ ಹಿರಿಯ ಅಧಿಕಾರಿಗಳು ಆರೋಪಿಗಳ ಸಿಡಿಆರ್‌ಗಾಗಿ ಪತ್ರ ಬರೆದಾಗ ಹೆಡ್ ಕಾನ್‌ಸ್ಟೇಬಲ್ ಮುನಿರತ್ನ, ಹಿರಿಯ ಅಧಿಕಾರಿಗಳ ಪತ್ರದಲ್ಲಿ ತನಗೆ ಬೇಕಾದ ಫೋನ್ ನಂಬರ್ ಸೇರಿಸಿ ಸರ್ವಿಸ್ ಪೊ›ವೈಡರ್‌ಗಳಿಗೆ ಸಲ್ಲಿಸಿ ಸಿಡಿಆರ್ ಪಡೆಯುತ್ತಿದ್ದ. ಸಿಡಿಆರ್ ಕೈಸೇರಿದ ಬಳಿಕ ಅಧಿಕೃತ ಸಿಡಿಆರ್‌ಗಳನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡಿ, ಅನಧಿಕೃತ ಸಿಡಿಆರ್ ಗಳನ್ನು ನಾಗೇಶ್ವರ ರೆಡ್ಡಿಗೆ 30 ರಿಂದ 50 ಸಾವಿರ ರೂ.ಗೆ ಮಾರಿಕೊಳ್ಳುತ್ತಿದ್ದ. ಸಿಐಡಿ ಸಿಬ್ಬಂದಿಯಿಂದ ಪಡೆದ ಸಿಡಿಆರ್ ಅನ್ನು ನಾಗೇಶ್ವರ ರಾವ್, ಪ್ರಶಾಂತ್‌ನಗರದ ಮಹಾನಗರಿ ಡಿಟೆಕ್ಟಿವ್ ಆ್ಯಂಡ್ ಸೆಕ್ಯೂರಿಟಿ ಸರ್ವೀಸ್, ಗೋವಿಂದರಾಜನಗರದ 4ನೇ ಮುಖ್ಯರಸ್ತೆಯಲ್ಲಿ ರಾಜಧಾನಿ ಕಾರ್ಪೋರೆಷನ್ ಹೆಸರಿನ ಡಿಟೆಕ್ಟಿವ್ ಏಜೆನ್ಸಿ, ಬಸವೇಶ್ವರನಗರದಲ್ಲಿ ಸ್ನೇಕ್ ಡಿಟೆಕ್ಟಿವ್‌ಗೆ ನಾಗೇಶ್ವರರಾವ್ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ದಂಪತಿ, ಪ್ರೇಮಿಗಳ ಮಾತುಗಳ ಕದ್ದಾಲಿಕೆ!
ಪ್ರಕರಣದ ತನಿಖೆ ವೇಳೆ ಸ್ಫೋಟಕ ವಿಚಾರವೊಂದು ಬೆಳಕಿಗೆ ಬಂದಿದೆ. ಡಿಟೆಕ್ಟಿವ್ ಏಜೆನ್ಸಿಗಳು ಹೆಚ್ಚಾಗಿ ಪತಿ ಮತ್ತು ಪತ್ನಿ ಹಾಗೂ ಪ್ರೇಮಿಗಳ ನಡುವಿನ ಸಿಡಿಆರ್ ಸಂಗ್ರಹಿಸುತ್ತಿದ್ದವು ಎಂಬುದು ಗೊತ್ತಾಗಿದೆ. ದಂಪತಿ ಮತ್ತು ಪ್ರೇಮಿ ಗಳ ನಡುವೆ ಸಂಬಂಧದಲ್ಲಿ ಬಿರುಕು ಮೂಡಿ ತಮ್ಮ ಪ್ರೀತಿ ಪಾತ್ರರ ಯಾರ ಸಂಪರ್ಕದಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕರೆಗಳ ವಿವರವನ್ನು ಕೋರಿ ಡಿಟೆಕ್ಟಿವ್ ಏಜೆನ್ಸಿಗಳ ಮೊರೆ ಹೋಗುತ್ತಿದ್ದರು. ಅಲ್ಲದೆ ಉದ್ಯಮಿ, ರಾಜಕೀಯ ವ್ಯಕ್ತಿಗಳು ತಮ್ಮ ಎದುರಾಳಿಗಳ ಸಿಡಿಆರ್ ಪಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಗ್ರಾಹಕರ ಸೋಗಿನಲ್ಲಿ ಸಿಸಿಬಿ ಕಾರ್ಯಾಚರಣೆ
ಸಿಡಿಆರ್ ದಂಧೆ ಬಗ್ಗೆ ಮಾಹಿತಿ ಪಡೆದ ಸಿಸಿಬಿ, ಸಿಡಿಆರ್ ಬೇಕೆಂದು ಆರೋಪಿತ ಡಿಟೆಕ್ಟಿವ್ ಏಜೆನ್ಸಿಗಳನ್ನು ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿತ್ತು.
ಹಣದ ಡೀಲ್ ನಡೆದು ಸಿಡಿಆರ್ ನೀಡಲು ಡಿಟೆಕ್ಟಿವ್ ಏಜೆನ್ಸಿ ಒಪ್ಪಿತ್ತು. ಬಳಿಕ ನಿರ್ದಿಷ್ಟ ಸಮಯಕ್ಕೆ ಸಿಡಿಆರ್ ಅನ್ನು ಏಜೆ ನ್ಸಿಗಳು ನೀಡಿದ್ದವು. ಬಳಿಕ ವಿಶೇಷ ಕಾರ್ಯಾಚರಣೆ ನಡೆಸಿ, ಏಜೆನ್ಸಿಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಅಕ್ರಮ ಸಿಡಿಆರ್ ಸಂಗ್ರಹ ಪ್ರಕರಣದ ಹಿನ್ನೆಲೆಯಲ್ಲಿ ಸಿಐಡಿಯ ಟೆಕ್ನಿಕಲ್ ವಿಭಾಗದ ಹೆಡ್ ಕಾನ್‌ಸ್ಟೇಬಲ್ ಮುನಿರತ್ನ ಹಾಗೂ ಆಂಧ್ರಪ್ರದೇಶ ನಾಗೇಶ್ವರ ರೆಡ್ಡಿಯನ್ನು ಬಂಧಿಸಲಾಗಿದೆ. ●
ಡಾ. ಚಂದ್ರಗುಪ್ತ, ಜಂಟಿ ಪೊಲೀಸ್ ಆಯುಕ್ತ (ಅಪರಾಧ)