Advertisement

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ : ಬನ್ನಂಜೆ ರಾಜನ ಸಹಚರರಿಗೆ 5 ವರ್ಷ ಜೈಲು

12:36 AM Sep 24, 2019 | mahesh |

ಮಂಗಳೂರು: ಭೂಗತ ಪಾತಕಿ ಬನ್ನಂಜೆ ರಾಜನ ಮೂವರು ಸಹಚರರು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಮಂಗಳೂರಿನ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ತಪ್ಪಿತಸ್ಥರಿಗೆ 5 ವರ್ಷಗಳ ಸಜೆ ಮತ್ತು ತಲಾ 50,000 ರೂ. ದಂಡ ವಿಧಿಸಲಾಗಿದೆ.

Advertisement

ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಮನೀಶ್‌ ಕುಮಾರ್‌ ಯಾನೆ ನೀರಜ್‌ ಶ್ರೀವಾಸ್ತವ್‌ ಯಾನೆ ರಾಹುಲ್‌ (33), ಬನಾರಸ್‌ ಜಿಲ್ಲೆಯ ಅಲಿ ಹುಸೇನ್‌ ಯಾನೆ ಹುಸೈನ್‌ ಅಲಿ ಯಾನೆ ರವಿ (30) ಮತ್ತು ಕರ್ನಾಟಕದ ಮೈಸೂರಿನ ಗೋಕುಲಂ 14 ನೇ ಅಡ್ಡ ರಸ್ತೆಯ ಪುಟ್ಟ ಸ್ವಾಮಿ ಎಂ.ಬಿ. (52) ಶಿಕ್ಷೆಗೊಳಗಾದವರು.

ಪ್ರಕರಣದ ವಿವರ
ಕದ್ರಿ ಪಾರ್ಕ್‌ ಬಳಿ ರಿಯಲ್‌ ಎಸ್ಟೇಟ್‌ ಉದ್ಯಮಿ ಸುರೇಶ್‌ ಭಂಡಾರಿ ಅವರ ಕಾರಿಗೆ ಗುಂಡು ಹಾರಿಸಿದ ಹಾಗೂ ಉಡುಪಿಯ ಐರೋಡಿ ಜುವೆಲರ್ನಲ್ಲಿ ಶೂಟೌಟ್‌ ನಡೆಸಿದ ಬನ್ನಂಜೆ ರಾಜನ 7 ಮಂದಿ ಸಹಚರರು ಕೊಟ್ಟಾರ ಚೌಕಿಯ ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಂಡು ಬನ್ನಂಜೆ ರಾಜನಿಗೆ ಹಫ್ತಾ ನೀಡಲು ನಿರಾಕರಿಸಿದವರನ್ನು ಕೊಲೆ ಮಾಡಲು ಸ್ಕೆಚ್‌ ಹಾಕುತ್ತಿದ್ದಾರೆ ಎಂಬ ಮಾಹಿತಿ ಅನ್ವಯ 2011 ಆ. 25ರಂದು ಬಂದರ್‌ ಪೊಲೀಸ್‌ ಠಾಣೆಯ ಸಿಐ ಹಾಗೂ ರೌಡಿ ನಿಗ್ರಹ ದಳದ ಮುಖ್ಯಸ್ಥರಾದ ವಿನಯ್‌ ಎ. ಗಾಂವ್‌ಕರ್‌ (ಈಗ ಸಿಸಿಆರ್‌ಬಿ ಎಸಿಪಿ ಆಗಿದ್ದಾರೆ) ಮತ್ತು ಸಿಬಂದಿ ದಾಳಿ ನಡೆಸಿದ್ದರು. ಈ ಸಂದರ್ಭ ಅಪಾರ್ಟ್‌ಮೆಂಟ್‌ನಲ್ಲಿ ಮನೀಶ್‌ ಕುಮಾರ್‌, ಅಲಿ ಹುಸೇನ್‌, ಪುಟ್ಟಸ್ವಾಮಿ ಎಂ.ಬಿ., ಮಂಗಳೂರಿನ ದೇವದಾಸ್‌ ಶೆಟ್ಟಿ ಮತ್ತು ವಿನೋದ್‌ ಕುಲಾಲ್‌, ಉತ್ತರ ಪ್ರದೇಶದ ಅಮಿತ್‌ ಕುಮಾರ್‌ ಚೌರಾಸಿಯಾ, ಬಿಹಾರದ ಅಬ್ದುಲ್‌ ರಹೇಜ್‌ ಖಾನ್‌ ಅವರನ್ನು ಪೊಲೀಸರು ಬಂಧಿಸಿದ್ದರು.

ಮನೀಶ್‌ ಕುಮಾರ್‌ ಬಳಿ 1 ರಿವಾಲ್ವರ್‌ ಮತ್ತು 1 ಸಜೀವ ಮದ್ದುಗುಂಡು, ಅಲಿ ಹುಸೇನ್‌ ಬಳಿ 1 ಪಿಸ್ತೂಲು ಮತ್ತು 5 ಸಜೀವ ಮದ್ದುಗುಂಡುಗಳು, ಪುಟ್ಟಸ್ವಾಮಿ ಬಳಿ 1 ಪಿಸ್ತೂಲು ಮತ್ತು 5 ಸಜೀವ ಮದ್ದುಗುಂಡುಗಳು ಪತ್ತೆಯಾಗಿದ್ದವು.
ಈ ಪ್ರಕರಣದ ಬಗ್ಗೆ ಮುಂದಿನ ತನಿಖೆಯನ್ನು ಕಾವೂರು ಸಿಐ ಆಗಿದ್ದ ಎಚ್‌.ಆರ್‌. ಸಿದ್ದಪ್ಪ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ 8 ವರ್ಷ ಗಳಿಂದ ನಡೆಯುತ್ತಿದ್ದು, 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಯಿದುನ್ನೀಸಾ ಅವರು ಸೆ. 23ರಂದು ತೀರ್ಪು ಪ್ರಕಟಿಸಿದರು.

Advertisement

ಮನೀಶ್‌ ಕುಮಾರ್‌, ಅಲಿ ಹುಸೇನ್‌ ಮತ್ತು ಪುಟ್ಟಸ್ವಾಮಿ ಎಂ.ಬಿ. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಅವರಿಗೆ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 3ರನ್ವಯ 1 ವರ್ಷ ಸಜೆ ಮತ್ತು ತಲಾ 25 ಸಾ.ರೂ. ದಂಡ, ದಂಡ ತಪ್ಪಿದರೆ 6 ತಿಂಗಳ ಸಜೆ ಮತ್ತು ಸೆಕ್ಷನ್‌ 7ರನ್ವಯ 5 ವರ್ಷ ಸಜೆ ಮತ್ತು ತಲಾ 25 ಸಾ. ರೂ. ದಂಡ, ದಂಡ ತೆರಲು ತಪ್ಪಿದರೆ 1 ವರ್ಷ ಸಾದಾ ಸಜೆ ವಿಧಿಸಲಾಗಿದೆ. ನಾಲ್ವರನ್ನು ಖುಲಾಸೆಗೊಳಿಸಲಾಗಿದೆ. ಸರಕಾರದ ಪರವಾಗಿ ಪಿಪಿ ಜುಡಿತ್‌ ಒ.ಎಂ. ಕ್ರಾಸ್ತಾ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next