ಬೆಂಗಳೂರು: ಸರ್ಕಾರಿ ಪ್ರೌಢ ಶಾಲೆಗಳ ಗ್ರೇಡ್-2 ಸಹ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮ ನೇಮಕಾತಿಯಲ್ಲಿ ಬಂಧನವಾಗಿರುವ ಶಿಕ್ಷಣ ಇಲಾಖೆಯ ಇಬ್ಬರು ಹಾಲಿ ನಿರ್ದೇಶಕರು ಹಾಗೂ ಮೂವರು ಮಾಜಿ ಜಂಟಿ ನಿರ್ದೇಶಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿಂದಿನ ಜಂಟಿ ನಿರ್ದೇಶಕಿ ಹಾಗೂ ಸಮಗ್ರ ಶಿಕ್ಷಣ ಅಭಿಯಾನ-ಕರ್ನಾಟಕ ಹಾಲಿ ನಿರ್ದೇಶಕಿ ಗೀತಾ, ಕರ್ನಾಟಕ ಪಠ್ಯ ಪುಸ್ತಕ ಸಂಘದ ನಿರ್ದೇಶಕ ಮಾದೇಗೌಡ, ನಿವೃತ್ತ ಜಂಟಿ ನಿರ್ದೇಶಕ ಜಿ.ಆರ್.ಬಸವರಾಜು, ಕೆ. ರತ್ನಯ್ಯ, ಡಿ.ಕೆ.ಶಿವಕುಮಾರ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳು ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿಯಲ್ಲಿ ಅನರ್ಹ ಶಿಕ್ಷಕರಿಂದ ತಲಾ 10ರಿಂದ 20 ಲಕ್ಷ ರೂ. ಪಡೆದುಕೊಂಡು ನೇಮಕಾತಿ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಡಿಡಿಪಿಐಗಳು ಕೂಡ ಶಾಮೀಲಾಗಿದ್ದರು. ಈ ಸಂಬಂಧ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು 12 ಮಂದಿ ಶಿಕ್ಷಕರನ್ನು ಬಂಧಿಸಿದ್ದರು. ಅವರ ವಿಚಾರಣೆಯಲ್ಲಿ ಹಾಲಿ ಮತ್ತು ನಿವೃತ್ತ ಜಂಟಿ ನಿರ್ದೇಶಕ ಕೈವಾಡದ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಿನ್ನೆಲೆಯಲ್ಲಿ ಆರೋಪಿಗಳನ್ನು ಇತ್ತೀಚೆಗೆ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಶುಕ್ರವಾರ ಮತ್ತು ಶನಿವಾರ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು.
ಮತ್ತೊಂದೆಡೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ಕೋರ್ಟ್ ತಿರಸ್ಕರಿಸಿದ ಪರಿಣಾಮ ಐವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ ಎಂದು ಸಿಐಡಿ ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಡಿ.ಕೆ ಶಿವಕುಮಾರ್, 2012-13 ಸಾಲಿನಲ್ಲಿ ಮಹೇಶ್ ಹಾಗೂ ಅಶೋಕ್ ಚವ್ಹಾಣ್ ಎಂಬರಿಗೆ ನೇಮಕಾತಿ ಆದೇಶಕ್ಕೆ ತುಮಕೂರು ಮತ್ತು ದಾವಣಗೆಗೆ ಡಿಡಿಪಿಐಗಳಿಗೆ ಸೂಚಿಸಿದ್ದರು. ಅಂದರಂತೆ ಆರೋಪಿಗಳು ಜಿಲ್ಲೆ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.