ಜೇವರ್ಗಿ: ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿರುವ ಘಟನೆ ಯಡ್ರಾಮಿ ತಾಲೂಕಿನ ಬಿರಾಳ ಹಿಸ್ಸಾ ಹಾಗೂ ಸಿಂದಗಿ ತಾಲೂಕಿನ ಹೊನ್ನಳಿ ಕ್ರಾಸ್ ಮದ್ಯದ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಬುಲೇರೋ ವಾಹನದಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಅಬಕಾರಿ ಇಲಾಖೆ ಸಿಬ್ಬಂದಿ ಐದು ಪೆಟ್ಟಿಗೆ ಐಬಿ ವಿಸ್ಕಿ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದ ಮಡಿವಾಳಪ್ಪ ಭೀಮರಾಯ ಅಮರ ಗೋಳ ಹಾಗೂ ಭೀಮರಾಯ ಯಮ ನಪ್ಪ ಪರಾರಿಯಾಗಿದ್ದಾರೆ.
ಬಿರಾಳ ಹಿಸ್ಸಾ ಗ್ರಾಮದ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 11 ಪೆಟ್ಟಿಗೆ ಐಬಿ ವಿಸ್ಕಿ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆ ಜಂಟಿ ಆಯುಕ್ತ ಬಸವರಾಜ ಹಡಪದ ನಿರ್ದೇಶನದಲ್ಲಿ ಅಬಕಾರಿ ಉಪ ಆಯುಕ್ತರಾದ ಸೈಯಿದಾ ಅಜಮತ್ ಆಫ್ರೀನ್ ಆದೇಶದಂತೆ ಅಬಕಾರಿ ಅಧಿಧೀಕ್ಷಕ ಇಸ್ಮಾಯಿಲ್ ಇನಾಮದಾರ, ಉಪ ಅಧೀಕ್ಷಕ ದೊಡ್ಡಪ್ಪ ಹೆಬಳೆ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕಿ ವನೀತಾ ಸೀತಾಳೆ, ಯಾದಗಿರಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಮೋತಿಲಾಲ ಶಹಾಪುರ, ಉಪ ವಿಭಾಗದ ಉಪ ಅಧಿಧೀಕ್ಷಕ ಶ್ರೀರಾಮ ರಾಠೊಡ, ಅಬಕಾರಿ ನಿರೀಕ್ಷಕರಾದ ಧನರಾಜ, ವಿಜಯಕುಮಾರ ಹಿರೇಮಠ ಹಾಗೂ ಸಿಬ್ಬಂದಿ ದಾಳಿ ನಡೆಸಿ ಒಟ್ಟು 16 ಪೆಟ್ಟಿಗೆ ಐಬಿ ವಿಸ್ಕಿ ವಶಪಡಿಸಿಕೊಂಡಿದ್ದಾರೆ. ಜೇವರ್ಗಿ ಅಬಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.