Advertisement

ನಿಯಮಬಾಹಿರ ಜಾಹೀರಾತು ಪ್ರದರ್ಶನ 

12:58 PM Jan 26, 2018 | Team Udayavani |

ಮಹಾನಗರ: ಮಂಗಳೂರು- ಮಣಿಪಾಲ ಮಧ್ಯೆ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ಗಳಲ್ಲಿ ತನ್ನ ಪೂರ್ವಾನುಮತಿ ಪಡೆಯದೇ ಜಾಹೀರಾತು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಕೆಎಸ್‌ಆರ್‌ಟಿಸಿ ಸಂಸ್ಥೆ ವಿರುದ್ಧ ಕೇಸ್‌ ದಾಖಲಿಸಿದೆ.

Advertisement

ಕೆಲವು ದಿನಗಳಿಂದ ವೋಲ್ವೋ ಬಸ್‌ ಗಳು ಸಂಪೂರ್ಣ ಜಾಹೀರಾತುಮಯವಾಗಿದ್ದವು. ನಿಯಮಬಾಹಿರವಾಗಿ ಬಸ್‌ ಗಳ ಮೇಲೆ ಜಾಹೀರಾತು ಪ್ರದರ್ಶಿಸಿರುವುದನ್ನು ಗಮನಿಸಿ, ಬುಧವಾರ ಒಂದು ಬಸ್‌ನ ಸಂಚಾರಕ್ಕೆ ಸಾರಿಗೆ ಇಲಾಖೆ ತಡೆ ನೀಡಿದೆ. ಜತೆಗೆ ದಂಡ ಪಾವತಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸದ್ಯ ಬಸ್‌ ಅನ್ನು ಡಿಪೋದಲ್ಲಿ ನಿಲ್ಲಿಸಲಾಗಿದೆ.

ಅನುಮತಿ ನೀಡಿಲ್ಲ
‘ಬಸ್‌ನಲ್ಲಿ ಜಾಹೀರಾತು ಹಾಕುವ ಮುನ್ನ ಸಾರಿಗೆ ಇಲಾಖೆಗೆ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು. ಆದರೆ, ಇಲಾಖೆ ಅನುಮತಿ ನೀಡಲಿಲ್ಲ’ ಎಂದು ಕೆಎಸ್‌ಆರ್‌ಟಿಸಿ ವಾದಿಸಿದರೆ, ‘ಜಾಹೀರಾತು ಪ್ರದರ್ಶನ ಸಂಬಂಧ ಕೆಎಸ್‌ಆರ್‌ ಟಿಸಿ ವತಿಯಿಂದ ಯಾವುದೇ ಅನುಮತಿ ಕೋರಿ ಪತ್ರ ಬಂದಿಲ್ಲ ಹಾಗೂ ಅನುಮತಿಯನ್ನೂ ನಾವು ನೀಡಿಲ್ಲ’ ಎನ್ನುತ್ತದೆ ಸಾರಿಗೆ ಇಲಾಖೆ.

ಮತ್ತೊಮ್ಮೆ ಪತ್ರ
ಬಸ್‌ನಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕೋರಿ ಮತ್ತೂಮ್ಮೆ ಕೆಎಸ್‌ಆರ್‌ ಟಿಸಿಯು ಸಾರಿಗೆ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಿದೆ. ಆದರೆ, ಯಾವುದೇ ಕಾರಣಕ್ಕೂ ಭಾರೀ ಪ್ರಮಾಣದ ಜಾಹೀರಾತಿಗೆ ಅನುಮತಿ ನೀಡುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಅದರಲ್ಲೂ ಮಂಗಳೂರು ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ವಾಹನಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ ಎನ್ನುತ್ತದೆ ಸಾರಿಗೆ ಇಲಾಖೆಯ ಮೂಲಗಳು. ಹೀಗಾಗಿ ಅನುಮತಿ ಸಿಗದಿದ್ದರೆ, ಬಸ್ಸಿನಲ್ಲಿ ಅಳವಡಿಸಲಾಗಿದ್ದ ಜಾಹೀರಾತನ್ನು ತೆರವುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಜಾಹೀರಾತು ಪ್ರದರ್ಶನಕ್ಕೆ ನಿಯಂತ್ರಣ
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಗಳ ಹೊರಭಾಗದಲ್ಲೂ ಜಾಹೀರಾತು ಪ್ರದರ್ಶಿಸಲಾಗುತ್ತಿತ್ತು.ಇದರಿಂದ ಸಂಸ್ಥೆಗೆ ಹೆಚ್ಚಿನ ಆದಾಯ ಬರುತ್ತಿತ್ತು. ಆದರೆ, ಇಂಥ ಜಾಹೀರಾತು ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಪ್ರಯಾಣಿಕರೇ ದೂರ ತೊಡಗಿದಂತೆ, ಅಲ್ಲಿಯೂ ಜಾಹೀರಾತು ಪ್ರದರ್ಶನಕ್ಕೆ ಸ್ವಲ್ಪ ನಿಯಂತ್ರಣ ಹೇರಲಾಗಿದೆ. ಇದರಿಂದ ಸಂಸ್ಥೆಯ ಆದಾಯಕ್ಕೂ ಕತ್ತರಿ ಬಿದ್ದಿದೆ ಎಂದು ಇತ್ತೀಚೆಗೆ ಸಾರಿಗೆ ಸಚಿವರೇ ಬಹಿರಂಗಪಡಿಸಿದ್ದರು.

Advertisement

ಬಸ್‌ ಹೊಗರಡೆ ಪೂರ್ಣ ಜಾಹೀರಾತು
ಸಾರ್ವಜನಿಕ ವಾಹನಗಳಲ್ಲಿ ಯಾವುದೇ ಜಾಹೀರಾತು ಅಳವಡಿಸುವುದಿದ್ದರೂ, ಸಂಬಂಧಪಟ್ಟ ಆರ್‌ಟಿಒದಿಂದ ಅನುಮತಿ ಪಡೆಯಬೇಕು. ಆರ್‌ಟಿಒ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ. ಮಂಗಳೂರು ವ್ಯಾಪ್ತಿಯಲ್ಲಿ ಜಾಹೀರಾತು ಹಾವಳಿ ಕಡಿಮೆ ಇತ್ತು. ಆದರೆ, ಕೆಎಸ್‌ಆರ್‌ಟಿಸಿ ಮಂಗಳೂರು-ಮಣಿಪಾಲದ ಒಂದು ವೋಲ್ವೋದಲ್ಲಿ ಖಾಸಗಿ ಜಾಹೀರಾತು ಅಳವಡಿಸಿತ್ತು. ಬಸ್‌ನ ಮುಂಭಾಗ ಸ್ವಲ್ಪ ಭಾಗವನ್ನು ಹೊರತುಪಡಿಸಿ, ಉಳಿದೆಲ್ಲಡೆ ಜಾಹೀರಾತು ಆವರಿಸಿತ್ತು. ಈ ಬಸ್ಸಿನ ಚಿತ್ರ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿ ಸಂಪೂರ್ಣ ಜಾಹೀರಾತುಮಯ ಸರಿಯಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿತ್ತು. ಬಸ್ಸಿನ ಹಿಂಭಾಗದಲ್ಲಿ ಯಾವ ಪ್ರದೇಶಕ್ಕೆ ಹೋಗುವ ಬಸ್ಸೆಂಬ ಮಾಹಿತಿಯೂ ಇರಲಿಲ್ಲ. ಶಾಲಾ ವಾಹನದ ರೀತಿಯಲ್ಲಿರುವಂತೆ ವೋಲ್ವೋ ಬಸ್‌ ಕಾಣಿಸುತ್ತಿತ್ತು. 

ಅಧಿಕ ಸರಕು ಸಾಗಿಸಿದರೆ ಸಾರಿಗೆ ಇಲಾಖೆಯ ಹದ್ದಿನ ಕಣ್ಣು 
ಅಧಿಕ ಸರಕು ಸಾಗಣೆ ವಾಹನಗಳ ವಿರುದ್ಧ ಹಾಗೂ ಕಾನೂನು ಉಲ್ಲಂಘಿಸಿ ಸಂಚರಿಸುತ್ತಿರುವ ಬಸ್‌ ಸೇರಿದಂತೆ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ಸಾರಿಗೆ ಆಯುಕ್ತರ ವಿಶೇಷ ತನಿಖಾ ತಂಡ ಮಂಗಳೂರು ಪ್ರಾದೇಶಿಕ ಸಾರಿಗೆ ಆಯುಕ್ತ ಜಿ.ಎಸ್‌.ಹೆಗ್ಡೆ ನೇತೃತ್ವದಲ್ಲಿ ಮಂಗಳೂರಿನಲ್ಲಿ ತನಿಖೆ ಆರಂಭಿಸಿದೆ. ಸೋಮವಾರದಿಂದ ಆರಂಭವಾಗಿರುವ ಈ ತಂಡದ ತನಿಖೆ ಜ.31ರವರೆಗೆ ನಡೆಯಲಿದೆ. ಎನ್‌ಎಂಪಿಟಿ, ಎಂಆರ್‌ಪಿಎಲ್‌ ಸೇರಿದಂತೆ ಕೈಗಾರಿಕಾ ವ್ಯಾಪ್ತಿಯಲ್ಲಿ ಬಳಕೆಯಾಗುವ ಲಾರಿಗಳು ನಿಗದಿತ ಪ್ರಮಾಣಕ್ಕಿಂತ ಅಧಿಕ ಸಾರಕು ಸಾಗಿಸುವ ಹಲವು ಕೇಸ್‌ಗಳು ಪತ್ತೆಯಾಗಿವೆ. ಜತೆಗೆ ಖಾಸಗಿ ಬಸ್‌ನಲ್ಲಿ ಕನ್ನಡ ಬಳಕೆ ಇಲ್ಲದಿರುವುದರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. 

ಅನುಮತಿ ಇಲ್ಲದೆ ಪ್ರದರ್ಶನ
ಸಾರಿಗೆ ಇಲಾಖೆಯ ಅನುಮತಿ ಪಡೆಯದೆ, ಕೆಎಸ್‌ಆರ್‌ಟಿಸಿ ತನ್ನ ವೋಲ್ವೋ ಬಸ್‌ನಲ್ಲಿ ಖಾಸಗಿ ಕಂಪೆನಿಯ ಜಾಹೀರಾತು ಅಳವಡಿಸಿರುವುದು ತಪಾಸಣೆಯ ವೇಳೆ ಬೆಳಕಿಗೆ ಬಂದಿದೆ. ಇದು ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಧಕ್ಕೆ ಆಗುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ ಟಿಸಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಂತಹ ಜಾಹೀರಾತು ಪ್ರದರ್ಶನಕ್ಕೆ ಕೆಎಸ್‌ಆರ್‌ಟಿಸಿ ಸೇರಿದಂತೆ ಯಾವುದೇ ವಾಹನಗಳಿಗೂ ಅವಕಾಶ ಕೊಡುವುದಿಲ್ಲ.
ಜಿ.ಎಸ್‌.ಹೆಗ್ಡೆ, ಮಂಗಳೂರು
   ಪ್ರಾದೇಶಿಕ ಸಾರಿಗೆ ಆಯುಕ್ತರು

ಪರಿಶೀಲಿಸಿ ಮುಂದಿನ ನಿರ್ಧಾರ
ಮಂಗಳೂರು-ಮಣಿಪಾಲ ವೋಲ್ವೋದಲ್ಲಿ ಜಾಹೀರಾತು ಹಾಕಿರುವುದರ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಂಡ ಬಗ್ಗೆ ಗಮನಕ್ಕೆ ಬಂದಿಲ್ಲ. ಬಸ್‌ನಲ್ಲಿ ಅನುಮತಿ ಪಡೆಯದೆ ಜಾಹೀರಾತು ಪ್ರಕಟಿಸಲಾಗುತ್ತದೆ. ಈ ಕುರಿತಂತೆ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
–  ದೀಪಕ್‌ ಕುಮಾರ್‌,
   ಕೆಎಸ್‌ಆರ್‌ಟಿಸಿ ಮಂಗಳೂರು
   ವಿಭಾಗೀಯ ನಿಯಂತ್ರಣಾಧಿಕಾರಿ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next