Advertisement

ಕಾಂಗ್ರೆಸ್‌ ವಿರುದ್ಧ ಅವ್ಯವಹಾರ ಆರೋಪ

05:11 AM Feb 26, 2019 | Team Udayavani |

ವಾಡಿ: ಪಟ್ಟಣದ ಪುರಸಭೆ ಮೈನಾಬಾಯಿ ಗೋಪಾಲ ರಾಠೊಡ ಅವರ ಅಧ್ಯಕ್ಷತೆಯ ಕಾಂಗ್ರೆಸ್‌ ಆಡಳಿತ ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರ ಹಣ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅವ್ಯವಹಾರ ನಡೆಸಿದೆ ಎಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಆರೋಪಿಸಿ ವಾಗ್ವಾದ ಮಾಡಿದ ಪ್ರಸಂಗ ನಡೆಯಿತು.

Advertisement

ಪುರಸಭೆಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ನಾಲ್ಕು ತಿಂಗಳ ಆಯವ್ಯಯ ಲೆಕ್ಕಾಚಾರದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ಸಿಡಿದೆದ್ದ ವಿರೋಧ ಪಕ್ಷದ ನಾಯಕ ಪ್ರಕಾಶ ನಾಯಕ ಹಾಗೂ ಸದಸ್ಯರಾದ ಭೀಮಶಾ ಜಿರೊಳ್ಳಿ, ರಾಜೇಶ ಅಗರವಾಲ, ಪಕ್ಷೇತರ ಸದಸ್ಯ
ಮಹ್ಮದ್‌ ಗೌಸ್‌ ಅವರು ಆಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬೀದಿ ನಾಯಿ ಮತ್ತು ಹಂದಿಗಳ ಸಾಗಾಣಿಕೆ, ಒಡೆದ ಪೈಪ್‌ಗ್ಳ ದುರಸ್ತಿ ಹಾಗೂ ವಿವಿಧೆಡೆ ವಾಲ್ವ ರಿಪೇರಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಸುಳ್ಳು ಲೆಕ್ಕಪತ್ರ ಬರೆದಿಡಲಾಗಿದೆ.

ಕಿರಿಯ ಅಭಿಯಂತರ ಅಶೋಕ ಪುಟ್‌ಪಾಕ್‌ ಸಲ್ಲಿಸಿದ ಕಡತಗಳಿಗೆ ಅಧ್ಯಕ್ಷೆ ಮೈನಾಬಾಯಿ ರಾಠೊಡ ಹಾಗೂ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಕಣ್ಣುಮುಚ್ಚಿ ಸಹಿ ಹಾಕಿದ್ದಾರೆ. ಇದರ ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ವಾರ್ಡ್‌ 23ರ ಕಾಂಗ್ರೆಸ್‌ ಸದಸ್ಯ ತಿಮ್ಮಯ್ಯ ಪವಾರ, ಅಧಿಕಾರಿಗಳು ಹಾಗೂ ಅಧ್ಯಕ್ಷರು ಸೇರಿಕೊಂಡು ಬೋಗಸ್‌ ಬಿಲ್‌ ಸೃಷ್ಟಿಸಿದ್ದಾರೆ ಎಂದು ಇದಕ್ಕೆ ದನಿಗೂಡಿಸಿದರು. ವಾರ್ಡ್‌ 6ರಲ್ಲಿ ನಿರ್ಮಿಸಲಾಗಿರುವ ವೈಯಕ್ತಿಕ ಶೌಚಾಲಯಗಳು ಬಳಕೆಗೆ ಬಾರದಂತಾಗಿವೆ ಎಂದು ಆರೋಪಿಸಿದರು.

ತೈಬಜಾರ್‌ ಪದ್ಧತಿ ಜಾರಿಗೊಳಿಸಬೇಕು ಮತ್ತು ಪಟ್ಟಣದ ಗಾಂಧಿ ವೃತ್ತದಲ್ಲಿ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಕಾಂಗ್ರೆಸ್‌ ಸದಸ್ಯ ದೇವಿಂದ್ರ ಕರದಳ್ಳಿ ಮನವಿ ಮಾಡಿದರು. ವಾರ್ಡ್‌ 15ರಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯವಿಲ್ಲ. ಹೆಣ್ಮಕ್ಕಳು ಮರಿಯಾದೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೇಳಿ ಹೇಳಿ ಸಾಕಾಗಿದೆ. ಮಹಿಳೆಯರೆಲ್ಲ ಕೂಡಿ ಚೆಂಬು ತೊಗೊಂದು ಪುರಸಭೆಗೆ ಬರಿವಿ ನೋಡ್ರಿ ಎಂದು ಬಿಜೆಪಿ ಸದಸ್ಯೆ ಸುಶೀಲಾಬಾಯಿ ಮೌಸಲಗಿ ಸಿಡುಕಿದರು.

Advertisement

ರೈಲ್ವೆ ಕಾಲೋನಿ ಯುವಕರಿಗಾಗಿ ಕ್ರೀಡಾಂಗಣ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕಾಂಗ್ರೆಸ್‌ ಸದಸ್ಯ ಶರಣು ನಾಟೀಕಾರ ತಮ್ಮದೇ ಆಡಳಿತವನ್ನು ಕೋರಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಿಜೆಪಿಯ ಪ್ರಕಾಶ ನಾಯಕ, ರೈಲ್ವೆ ಕಾಲೋನಿ ಕ್ರೀಡಾಂಗಣವನ್ನು ರೈಲ್ವೆ ಇಲಾಖೆಯೇ ಮಾಡಲಿ ಎಂದರು.

ರಾಜೀನಾಮೆ ಕೊಡ್ತೀನಿ: ಕಾಂಗ್ರೆಸ್‌ ಆಡಳಿತ ಮಂಡಿಸಿರುವ ಆಯವ್ಯಯ ದಾಖಲೆ ಸುಳ್ಳಿನಿಂದ ಕೂಡಿದೆ. ಎಲ್ಲ ವಾರ್ಡಗಳಲ್ಲಿ ಪೈಪ್‌ ರಿಪೇರಿ ಹಾಗೂ ವಾಲ್ವ ದುರಸ್ತಿ ಹೆಸರಿನಲ್ಲಿ ಖೊಟ್ಟಿ ಖರ್ಚು ದಾಖಲಿಸಲಾಗಿದೆ. ಎಷ್ಟು ಪೈಪ್‌ಗ್ಳನ್ನು ದುರಸ್ತಿ ಮಾಡಿದ್ದೀರಿ. ಸ್ಥಳಕ್ಕೆ ಹೋಗೋಣ ಬನ್ನಿ. ಖರ್ಚು ಸರಿಯಿದ್ದರೆ ನಾನು ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ. ಬೋಗಸ್‌ ಬಿಲ್‌ ಸಾಬೀತಾದರೆ ನೀವು ನೌಕರಿ ಬಿಡಬೇಕು. ಎಷ್ಟಂತ ಜನರ ಹೊಟ್ಟೆ ಮೇಲೆ ಹೊಡಿತೀರಿ.

ಸ್ವಲ್ಪವಾದರೂ ನಿಮ್ಮಲ್ಲಿ ಮನುಷ್ಯತ್ವ ಇಲ್ವಾ? ಜನರ ತೆರಿಗೆ ಹಣ ನುಂಗಲು ನಿಮಗೆ ನಾಚಿಕೆ ಆಗಲ್ವಾ ಎಂದು ವಾಗ್ಧಾಳಿ ನಡೆಸುವ ಮೂಲಕ ಅಧಿಕಾರಿಗಳ ಬೆವರಿಳಿಸಿದ ಬಿಜೆಪಿ ಸದಸ್ಯ ಭೀಮಶಾ ಜಿರೊಳ್ಳಿ, ಚುನಾವಣೆ ಬರುತ್ತಿದೆ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೆಸರಿಗೆ ಕಳಂಕ ಬರದಂತಾದರೂ ನಡೆದುಕೊಳ್ಳಿ ಎಂದು ಚಾಟಿ ಬೀಸಿದರು.

ಲೆಕ್ಕಾಧಿಕಾರಿ ಕೆ. ವಿರೂಪಾಕ್ಷಿ ಆಯವ್ಯಯ ಮಂಡಿಸಿದರು. ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಸಮುದಾಯ ಸಂಘಟನಾಧಿಕಾರಿ ಕಾಶೀನಾಥ ಧನ್ನಿ, ವ್ಯವಸ್ಥಾಪಕ ಮಲ್ಲೇಶ ಸೇರಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿಯ 23 ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದು, ವಾರ್ಡ್‌ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next