Advertisement

ಜಮೀನಿಗೆ ಅಕ್ರಮ ಪ್ರವೇಶ: ರೈತರ ಪ್ರತಿಭಟನೆ

04:23 PM Dec 14, 2019 | Team Udayavani |

ಮದ್ದೂರು: ರೈತರ ಜಮೀನುಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿ ಕಾಮಗಾರಿ ಸಾಮಗ್ರಿ ಶೇಖರಣೆ ಮಾಡಿರುವ ಖಾಸಗಿ ಕಂಪನಿ ವಿರುದ್ಧ ಉಪ್ಪಿನಕೆರೆ ಗ್ರಾಮದ ರೈತರು, ದಲಿತ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಉಪ್ಪಿನಕೆರೆ ಗ್ರಾಮದ ಜಮೀನಿನ ಬಳಿ ಜಮಾವಣೆಗೊಂಡ ರೈತರು ದಿಲೀಪ್‌ ಬಿಲ್ಡ್‌ ಖಾನ್‌ ಕಂಪನಿ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ನಷ್ಟ ಹೊಂದಿರುವ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

Advertisement

ಮೈಸೂರು, ಬೆಂಗಳೂರು ರಸ್ತೆ ಅಗಲೀಕರಣ ಕಾಮಗಾರಿ ಸಂಬಂಧ ತಾಲೂಕಿನ ಉಪ್ಪಿನಕೆರೆ ಗೇಟ್‌ ಬಳಿ ಸುಮಾರು 30 ಎಕರೆ ಜಮೀನನ್ನು ದಿಲೀಪ್‌ ಬಿಲ್ಡ್‌ ಖಾನ್‌ ಕಂಪನಿ ಗುತ್ತಿಗೆ ಆಧಾರದ ಮೇಲೆ ಜಮೀನು ಪಡೆದುಕೊಂಡಿದ್ದು ಸುತ್ತಮುತ್ತಲಿನ ರೈತರ ಅನುಮತಿ ಪಡೆಯದೆ ಏಕಾಏಕಿ ಜಮೀನು ಪ್ರವೇಶ ಮಾಡಿ ಸಿಮೆಂಟ್‌, ಕಬ್ಬಿಣ ಹಾಗೂ ಕಾಮಗಾರಿ ಸಾಮಗ್ರಿ ಶೇಖರಣೆ ಮಾಡಿರುವ ಕ್ರಮವನ್ನು ಖಂಡಿಸಿದರು.

ಕಳೆದ 2 ವರ್ಷಗಳಿಂದಲೂ ಜಮೀನು ನೀಡಿರುವ ರೈತರಿಗೆ ಸಮರ್ಪಕವಾಗಿ ಹಣ ವಿತರಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುವ ಜತೆಗೆ ರೈತರೊಂದಿಗೆ ಅನುಚಿತವಾಗಿ ವರ್ತಿಸಿ ದೌರ್ಜನ್ಯ ನಡೆಸುತ್ತಿದ್ದಾರೆ. ವ್ಯವಸಾಯವನ್ನೇ ನಂಬಿ ಜೀವನ ಸಾಗಿಸುತ್ತಿರುವ ತಮಗೆ ಬೆಳೆ ಹಾಗೂ ಹಣವಿಲ್ಲದಂತಹ ಪರಿಸ್ಥಿತಿ ಬಂದೊದಗಿರುವುದಾಗಿ ಆರೋಪಿಸಿದರು. ಜಮೀನು ನೀಡಿರುವ ರೈತರಿಗೆ ಸಮರ್ಪಕವಾಗಿ ಹಣ ವಿತರಿಸುವಂತೆ ಒತ್ತಾಯಿಸಿದರಲ್ಲದೇ ಸ್ಥಳಕ್ಕೆ ತಹಶೀಲ್ದಾರ್‌ ಆಗಮಿಸುವಂತೆ ಪಟ್ಟು ಹಿಡಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಮದ್ದೂರು ವೃತ್ತ ನಿರೀಕ್ಷಕ ಮಹೇಶ್‌, ಈಗಾಗಲೇ ರೈತರಿಗೆ ಸಮರ್ಪಕವಾಗಿ ಹಣ ವಿತರಿಸುವಂತೆ ಖಾಸಗಿ ಕಂಪನಿಗೆ ಹಲವು ಬಾರಿ ಸೂಚನೆ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನು ಸರಿಸುತ್ತಿದ್ದು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸ್ಥಳದಲ್ಲಿದ್ದ ಕಂಪನಿ ವ್ಯವಸ್ಥಾಪಕ ಮೂರ್ತಿ ಅವರಿಗೆ ಸೂಚಿಸಿದರು. ಅನಧಿಕೃತವಾಗಿ ಜಮೀನು ಪ್ರವೇಶ ಮಾಡಿರುವ ಖಾಸಗಿ ಕಂಪನಿ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುವ ಎಚ್ಚರಿಕೆ ನೀಡಿದರಲ್ಲದೇ ಪರಿಹಾರ ನೀಡುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದರು. ಪ್ರತಿಭಟನೆ ವೇಳೆ ವೆಂಕಟಾಚಲಯ್ಯ ಮರಳಿಗ ಶಿವರಾಜು, ಆತ್ಮಾನಂದ, ಶಂಕರಯ್ಯ, ಕಬ್ಟಾಳಯ್ಯ, ಪುಟ್ಟಸ್ವಾಮಿ, ಜಯಬೋರಯ್ಯ, ಮರಿದೇವರು, ಶಿವಲಿಂಗಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next