Advertisement

ಮಾದರಿ ಕೆಲಸ ಮಾಡುತ್ತೇನೆ

10:42 PM May 30, 2019 | Lakshmi GovindaRaj |

ಸುದೀರ್ಘ‌ ರಾಜಕೀಯ ಅನುಭವದಿಂದ ಸತತ ನಾಲ್ಕು ಬಾ ರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಗೆದ್ದು ದಾಖಲೆ ಮಾಡಿರುವ ಬಿಜೆಪಿಯ ಸುರೇಶ ಅಂಗಡಿ ಅವರಿಗೆ ಈಗ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಒಲಿದು ಬಂದಿದೆ. ತಮಗೆ ಸಿಕ್ಕ ಈ ಅಪೂರ್ವ ಅವಕಾಶದ ಋಣವನ್ನು ಅವರು ಕ್ಷೇತ್ರದ ಮತದಾರರಿಗೆ ಸಮರ್ಪಿಸಿದ್ದಾರೆ.

Advertisement

ಪ್ರಮಾಣ ವಚನ ಸ್ವೀಕರಿಸುವ ಕೆಲವೇ ಗಂಟೆಗಳ ಮೊದಲು ದೂರವಾಣಿಯಲ್ಲಿ “ಉದಯವಾಣಿ’ ಜತೆ ತಮ್ಮ ಸಂತಸ ಹಂಚಿಕೊಂಡ ಸುರೇಶ ಅಂಗಡಿ ಬರುವ ದಿನಗಳಲ್ಲಿ ಮಾದರಿ ಕೆಲಸಗಳನ್ನು ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಅವರ ಚುಟುಕು ಸಂದರ್ಶನ ಇಲ್ಲಿದೆ.

* ಕೇಂದ್ರ ಸಚಿವರಾಗಿರುವುದಕ್ಕೆ ನಿಮ್ಮ ತಕ್ಷಣದ ಪ್ರತಿಕ್ರಿಯೆ ಏನು?
ಬಹಳ ಸಂತೋಷವಾಗಿದೆ. ಕ್ಷೇತ್ರದ ಮತದಾರರು ಹಾಗೂ ಹಿತೈಷಿಗಳ ಬಹಳ ದಿನಗಳ ನಿರೀಕ್ಷೆ ನಿಜವಾಗಿದೆ. ನಮ್ಮ ಕನಸು ಸಹ ನನಸಾಗಿದೆ. ನಿಷ್ಠೆಗೆ ಗೌರವ ಹಾಗೂ ಅವಕಾಶ ಇದೆ ಎಂಬುದು ಮತ್ತೆ ಬಿಜೆಪಿಯಲ್ಲಿ ನಿಜವಾಗಿದೆ. ಮೋದಿ ಅವರ ಜೊತೆ ಕೂಡಿ ಕೆಲಸ ಮಾಡುವ ಸುವರ್ಣಾವಕಾಶ ಸಿಕ್ಕಿದೆ.

* ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತೆ?
ನಿರೀಕ್ಷೆ ಎನ್ನುವುದಕ್ಕಿಂತ ವಿಶ್ವಾಸ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರದ ಮತದಾರರ ದೊಡ್ಡ ಆಶೀರ್ವಾದ ನನ್ನ ಮೇಲಿತ್ತು. ಹೀಗಾಗಿ ನನಗೆ ದೊರೆತ ಈ ಸಚಿವ ಸ್ಥಾನ ನನ್ನ ಕ್ಷೇತ್ರದ ಮತದಾರರಿಗೆ ಅರ್ಪಣೆ. ಆವರ ಆಶೀರ್ವಾದದಿಂದ ನನಗೆ ಈಗ ಕೇಂದ್ರ ಸಚಿವ ಸ್ಥಾನ ಒಲಿದಿದೆ. 2004ರಲ್ಲಿ ಮೊದಲ ಬಾರಿ ಸಂಸದನಾದಾಗ ಮುಂದೆ ಇಷ್ಟು ಬೆಳೆಯಬಹುದು. ಅವಕಾಶ ಸಿಗಬಹುದು ಎಂದು ಭಾವಿಸಿರಲಿಲ್ಲ. ಆದರೆ ಎಂದಿಗೂ ಪಕ್ಷ ನಿಷ್ಠೆ ಬಿಡಲಿಲ್ಲ. ಕ್ಷೇತ್ರದ ಜನರ ಸಂಪರ್ಕ ಕಳೆದುಕೊಳ್ಳಲಿಲ್ಲ. ಮೊದಲ ಬಾರಿಗೆ ಸಂಸದನಾದಾಗಿನಿಂದ ಇದುವರೆಗೆ ಮತದಾರರು ನಮ್ಮ ಕೈಬಿಡಲಿಲ್ಲ. ಈ ಎಲ್ಲ ಕಾರಣಗಳು ಇವತ್ತು ನನಗೆ ಕೇಂದ್ರ ಸಚಿವ ಸ್ಥಾನ ನೀಡಿದೆ. ಈ ಕ್ಷಣದ ಬಗ್ಗೆ ಹೆಚ್ಚು ಮಾತನಾಡಲು ಆಗುತ್ತಿಲ್ಲ. ಆದರೆ ಬಹಳ ಹೆಮ್ಮೆಯಾಗಿದೆ.

* ನೀವು ಬೆಳಗಾವಿ ಲೋಕಸಭಾ ಕ್ಷೇತ್ರದ ಮೂರನೇ ಸಚಿವರು. ಹೇಗನಿಸುತ್ತಿದೆ ?
ಬಹಳ ವರ್ಷಗಳ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಈ ಸೌಭಾಗ್ಯ ಸಿಕ್ಕಿದೆ. ಈ ಹಿಂದೆ ಕಾಂಗ್ರೆಸ್‌ನ ದಾತಾರ ನಂತರ ವಾಜಪೇಯಿ ಸರ್ಕಾರದಲ್ಲಿ ಬಾಬಾಗೌಡ ಪಾಟೀಲ ಸಚಿವರಾಗಿದ್ದರು. ಆದರೆ ಅವರ ಅವಧಿ ಬಹಳ ಕಡಿಮೆಯಾಗಿತ್ತು. ಈಗ ಮತ್ತೆ ಸಚಿವ ಪಟ್ಟ ಸಿಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ನರೇಂದ್ರ ಮೋದಿ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಹಾಗೂ ಅದೃಷ್ಟ. ಈ ಅವಕಾಶ ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ಇದೆ.

Advertisement

* ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾವ ಯೋಜನೆಗಳಿವೆ?
ಈ ಭಾಗದ ಸಮಸ್ಯೆ ಹಾಗೂ ಸವಾಲುಗಳು ನನಗೆ ಹೊಸದೇನಲ್ಲ. ಎಲ್ಲದರಲ್ಲೂ ಅನುಭವ ಕಂಡಿದ್ದೇನೆ. ಇದಕ್ಕೆ ಶಾಶ್ವತವಾಗಿ ಪರಿಹಾರ ನೀಡಬೇಕು ಎಂಬುದು ನನ್ನ ಉದ್ದೇಶ. ಬರುವ ದಿನಗಳಲ್ಲಿ ಈ ಸಂಬಂಧ ಆಲೋಚನೆ ಮಾಡುತ್ತೇನೆ.

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next