Advertisement
ಐ.ಪಿ.ಓ.ನ ವಿಸ್ತೃತ ರೂಪ “ಇನಿಷಿಯಲ್ ಪಬ್ಲಿಕ್ ಆಫರಿಂಗ್’, ಅಂದರೆ ಪ್ರಥಮ ಬಾರಿಗೆ ಸಾರ್ವಜನಿಕರಿಗೆ ಕಂಪನಿಯ ಷೇರು ಕೊಳ್ಳಲು ಅವಕಾಶ ನೀಡುವುದು. ಇದನ್ನು “ಪ್ರೈಮರಿ ಮಾರ್ಕೆಟ್’ ಅಂತಲೂ ಕರೆಯುತ್ತಾರೆ. ಇದರಲ್ಲಿ ಕಂಪನಿಯು ಹೂಡಿಕೆದಾರರಿಗೆ ನೇರವಾಗಿ ಷೇರುಗಳನ್ನು ವಿತರಿಸುತ್ತದೆ. ಒಮ್ಮೆ ಈ ರೀತಿ ಷೇರು ಹಂಚಿದ ನಂತರ ಕೊಡು-ಕೊಳ್ಳುವಿಕೆಗಳು ಸೆಕಂಡರಿ ಮಾರ್ಕೆಟ್‌ನಲ್ಲಿ ನಡೆಯುತ್ತವೆ. ನಂತರ ಷೇರುಗಳು ಸ್ಟಾಕ್ ಎಕ್ಸ್‌ಚೇಂಜ್ ಮೂಲಕ ಹೂಡಿಕೆದಾರರ ಕೈಯಲ್ಲಿ ಬದಲಾಗುತ್ತಾ ಹೋಗುತ್ತವೆ.
Related Articles
Advertisement
ಎರಡು ಐ.ಪಿ.ಓ ಕಥೆವರ್ಷ: 1993 ಕಂಪನಿ: ಇನ್ಫೋಸಿಸ್
1993ರಲ್ಲಿ ಇನ್ಫೋಸಿಸ್ ಐ.ಪಿ.ಓ. ಮೂಲಕ ಷೇರುಪೇಟೆ ಪ್ರವೇಶಿಸಿತು. ಆಗ ಒಂದು ಷೇರಿನ ಬೆಲೆ ಕನಿಷ್ಠ 95ರೂ. ಗಳಿತ್ತು. ಕೊಳ್ಳಬೇಕಾಗಿದ್ದುದು. 100 ಷೇರುಗಳನ್ನು. ಆದ್ದರಿಂದ ಕನಿಷ್ಠ ಹೂಡಿಕೆ 9500 ರೂ. ಬೋನಸ್ ಷೇರು, ಮುಖಬೆಲೆ ಕಡಿತ…ಹೀಗೆ 10 ರೂ. ಮುಖಬೆಲೆಯ (ಫೇಸ್‌ವ್ಯಾಲ್ಯು) 100 ಷೇರು ಹೊಂದಿದ್ದವರು ಮಾರದೆ ಹಾಗೇ ಇಟ್ಟುಕೊಂಡಿದ್ದರೆ ಈಗ ಅದು 5 ರೂ. ಮುಖಬೆಲೆಯ 51,200 ಷೇರುಗಳಾಗಿರುತ್ತವೆ. ಪ್ರಸ್ತುತ ಮಾರುಕಟ್ಟೆ ದರ 900 ರೂ. ಎಂದಿಟ್ಟುಕೊಂಡರೆ ಈಗಿನ ಮೌಲ್ಯ ಸುಮಾರು 4.6 ಕೋಟಿ! ಅಂದರೆ ಹಾಕಿದ ಬಂಡವಾಳಕ್ಕಿಂತ 4800 ಪಟ್ಟು ಹೆಚ್ಚು! ಜೊತೆಗೆ ಇನ್ಫೋಸಿಸ್ ಉತ್ತಮ ಡಿವಿಡೆಂಡ್ (ಲಾಭಾಂಶ) ವಿತರಿಸುವ ಕಂಪನಿಯೂ ಆಗಿದೆ. 2016ರಲ್ಲಿ 51,200 ಷೇರುಗಳಿಗೆ, ಪ್ರತಿ ಷೇರಿಗೆ 25.75 ರೂ.ನಂತೆ ಬರುವ ಮೊತ್ತವೇ 13,18,400! ಇದು ಐ.ಪಿ.ಓ.ನ ಸಕಾರಾತ್ಮಕ ಮುಖವನ್ನು ತೋರಿಸುತ್ತದೆ. ವರ್ಷ: 2008 ಕಂಪನಿ: ರಿಲಯನ್ಸ್ ಪವರ್
ರಿಲಯನ್ಸ್ ಪವರ್ 2007-08ರ ಬಹುನಿರೀಕ್ಷಿತ ಐ.ಪಿ.ಓ. ಆಗಿತ್ತು. ಅಂದು ಹೂಡಿಕೆದಾರರಿಂದ ಅಭೂತಪೂರ್ವ ಪ್ರತಿಕ್ರಿಯೆ ಕೂಡ ವ್ಯಕ್ತವಾಯಿತು. 450 ರೂ.ಗೆ ಹಂಚಿಕೆಯಾದ ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆ 40 ರೂ. ಅಂದರೆ ಹೂಡಿದ ಬಂಡವಾಳದ ಶೇ. 85ಕ್ಕೂ ಹೆಚ್ಚು ಭಾಗ ಕೊಚ್ಚಿಹೋಗಿದೆ. ಇವು ಕೇವಲ ಎರಡು ಉದಾಹರಣೆಗಳಷ್ಟೆ. ಇನ್ಫೋಸಿಸ್‌ಗಿಂತ ಅಧಿಕ ಲಾಭ ತಂದ ಹಲವು ಕಂಪನಿಗಳು ಪೇಟೆಯಲ್ಲಿವೆ. ಅಂತೆಯೇ ರಿಲಾಯನ್ಸ್ ಪವರ್‌ಗಿಂತಲೂ ಅಧಿಕ ನಷ್ಟ ಉಂಟು ಮಾಡಿದ ಕಂಪನಿಗಳೂ ಇದ್ದಾವೆ. ಐ.ಪಿ.ಓ. ಹೂಡಿಕೆ ಹೇಗೆ?
ಷೇರು ಮಾರುಕಟ್ಟೆಯ ಬಗ್ಗೆ ಅಗತ್ಯ ಜ್ಞಾನ ಇರದೇ ಇದ್ದರೆ ಐ.ಪಿ.ಓ ಹಿಂದೆ ಬೀಳದಿರುವುದೇ ಲೇಸು. ಮಾರುಕಟ್ಟೆಯಲ್ಲಿ ಅನೇಕ ಉತ್ತಮ ಷೇರುಗಳು ಈಗಾಗಲೇ ಇವೆ. ಅಲ್ಲದೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿದರೆ ದೈನಂದಿನ ಏರಿಳಿತಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಒಂದುವೇಳೆ ಷೇರು ಪೇಟೆಯ ಬಗ್ಗೆ ಅಗತ್ಯ ಜ್ಞಾನ, ಸಮಯವಿದ್ದರೆ “ಚೂಸಿ’ ಆಗಿರುವುದು ಒಳಿತು. ಕೆಲವೇ ದಿನಗಳಲ್ಲಿ ಅಧಿಕ ಲಾಭ ಪಡೆಯಬೇಕೆಂಬ ಮನಸ್ಥಿತಿ ಎಷ್ಟಾದರೂ ಒಳ್ಳೆಯದಲ್ಲ. ಅವೆನ್ಯೂ ಸೂಪರ್‌ಮಾರ್ಟ್ (ಡಿ ಮಾರ್ಟ್)ನಂಥ ಕೆಲ ಷೇರುಗಳು ಐ.ಪಿ.ಓ. ನಂತರದ 6 ತಿಂಗಳಲ್ಲಿ 4 ಪಟ್ಟು ವೃದ್ಧಿಸಿದೆ. ಆದರೆ ಎಲ್ಲಾ ಷೇರುಗಳೂ ಒಂದೇ ರೀತಿ ವರ್ತಿಸುವುದಿಲ್ಲ. ಹಾಗಾಗಿ ದೂರದೃಷ್ಟಿ ವಹಿಸಿ ಕಂಪನಿಯ ವ್ಯಾಲ್ಯುವೇಶನ್ ನೋಡಿಕೊಂಡು ಉತ್ತಮ ಕಂಪನಿಗಳ ಐ.ಪಿ.ಓ. ಕೊಳ್ಳಲು ಅಡ್ಡಿಯಿಲ್ಲ. ಅದೇ ರೀತಿ ಕಳಪೆ ಕಂಪನಿಗಳು, ಅತಿರೇಕದ ಬೆಲೆಯ ಐ.ಪಿ.ಓ.ಗಳಿಂದ ದೂರವಿದ್ದರೆ ನಿಮ್ಮ ಹಣಕಾಸಿನ ಆರೋಗ್ಯಕ್ಕೆ ಉತ್ತಮ. * ಕಾರ್ತಿಕ್. ಎನ್