Advertisement

ಸರ್ಕಾರಿ ಶಾಲೆಗಿಂತ ದನದ ಕೊಟ್ಟಿಗೆಯೇ ಮೇಲು

04:43 PM Nov 22, 2021 | Team Udayavani |

ಕನಕಪುರ: ನಗರ ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು, ಸರ್ಕಾರ ಹಾಗೂ ಖಾಸಗಿ ಶಾಲೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಸರ್ಕಾರದ ಶಾಲೆಗಳಿಗೆ ಸೇರಿ ಎಂದು ಹೇಳುವ ಸರ್ಕಾರ ಜಾಹೀರಾತು, ಶಿಕ್ಷಣ ಯೋಜನೆಗಾಗಿಯೇ ಕೋಟ್ಯಂತರ ರೂ.ಖರ್ಚು ಮಾಡುತ್ತದೆ.

Advertisement

ಆದರೇ ಈ ಗ್ರಾಮೀಣ ಭಾಗದಲ್ಲಿರುವ ಶಾಲೆಯ ದುಸ್ಥಿತಿ ನೋಡಿದ್ರೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಏಕೆ ಹೋಗಬೇಕು ಅನ್ನಿಸದೇ ಇರಲ್ಲ ನೋಡಿ. ಇದ್ದು ಇಲ್ಲದಂತಾಗಿರುವ ಕಟ್ಟಡಗಳು. ಮಳೆ ಬಿಸಿಲು ಎನ್ನದೆ ಶಾಲೆಯ ಕಿರಿದಾದ ಆವರಣದಲ್ಲಿ ಮರದ ಕೆಳಗೆ ಕುಳಿತು ಪಠ್ಯ ಆಲಿಸುತ್ತಿರುವ ಮಕ್ಕಳು.

ಕನಿಷ್ಠ ಬೋರ್ಡ್‌ ಸೌಲಭ್ಯವೂ ಇಲ್ಲದೆ ಪಾಠ ಮಾಡುವ ಶಿಕ್ಷಕಿ ಕೆಬ್ಬೆದೊಡ್ಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ದುಸ್ಥಿತಿ ಇದು. ಎರಡು ಕಟ್ಟಡಗಳು ಸಂಪೂರ್ಣವಾಗಿ ಹಾಳಾಗಿದ್ದು, ಬೀಳುವ ಹಂತ ತಲುಪಿದ್ದರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರ್ಯಾಯ ವ್ಯವಸ್ಥೆ ಕಲ್ಪಿ ಸುವ ಕನಿಷ್ಠ ಕಾಳಜಿ ತೋರದೇ ಇರುವುದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮತ್ತು ಮಕ್ಕಳ ಮೇಲೆ ಅವರಿಗಿರುವ ಜವಾಬ್ದಾರಿಗೆ ಹಿಡಿದ ಕೈಗನ್ನಡಿ.

ಸಮಸ್ಯೆ ಬಗೆಹರಿಸಲು ಇಚ್ಛಾ ಶಕ್ತಿ ಕೊರತೆ: ತಾಲೂಕಿನ ಹಾರೋಹಳ್ಳಿ ಹೋಬಳಿಯ ಕೆಬ್ಬೆದೊಡ್ಡಿ ಗ್ರಾಮದ ಶಾಲಾ ಮಕ್ಕಳು ಕನಿಷ್ಠ ಮೂಲಭೂತ ಸೌಲಭ್ಯವೂ ಇಲ್ಲ. ಈ ಪುಟ್ಟ ಮಕ್ಕಳ ಗೋಳು ಕೇಳಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಮಯವಿಲ್ಲ. 50 ವಸಂತ ಪೂರೈಸಿರುವ ಕೆಬ್ಬೆದೊಡ್ಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಈ ಹಿಂದೆ ಐವತ್ತಕ್ಕೂ ಹೆಚ್ಚು ಮಕ್ಕಳ ದಾಖಲಾತಿಯಿತ್ತು.

ಆದರೆ, ಶಾಲೆಯ ದುಸ್ಥಿತಿ ಕಂಡು ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆ ಬಿಡಿಸಿ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. 120ಕ್ಕೂ ಹೆಚ್ಚು ಕುಟುಂಬ ವಾಸವಿರುವ ಕೆಬ್ಬೆದೊಡ್ಡಿ ಗ್ರಾಮದಲ್ಲಿ ಐವತ್ತು ವರ್ಷಗಳ ಹಿಂದೆ ಹೆಂಚಿನ ಮನೆಯಲ್ಲಿ ಆರಂಭವಾದ ಈ ಶಾಲೆಯಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪಕ್ಕದಲ್ಲಿ ಮತ್ತೂಂದು ಕೊಠಡಿ ನಿರ್ಮಾಣವಾಗಿತ್ತು.

Advertisement

ಇದನ್ನೂ ಓದಿ;- ಬಿಜೆಪಿಗೆ ಸಹಕರಿಸಲು ಟಿಎಂಸಿ ಮತ್ತು ಆಪ್ ಗೋವಾಕ್ಕೆ ಬಂದಿವೆ : ಗುಂಡೂರಾವ್

ಕಾಲಕ್ರಮೇಣ ಶಾಲೆ ಕಟ್ಟಗಳು ದುರಸ್ತಿ ಕಾಣದೆ ಹಾಳಾಗಿವೆ. ಗುಣಮಟ್ಟವಿಲ್ಲದೆ ನಿರ್ಮಾಣವಾಗಿರುವ ಕೊಠಡಿ 25 ವರ್ಷ ಕಳೆಯುವ ಮುಂಚೆಯೇ ಬೀಳುವ ದುಸ್ಥಿತಿಗೆ ತಲುಪಿದೆ. ಕಲಿಕೆಗಿಲ್ಲ ಪೂರಕ ವಾತಾವರಣ: ಕೊರೊನಾದಿಂದ ಕಳೆದೆರಡು ವರ್ಷಗಳಿಂದ ಶಾಲೆಗಳೇ ಇರಲಿಲ್ಲ. ನಿರಂತರ ಕಲಿಕೆಯಿಂದ ದೂರವೇ ಉಳಿದಿದ್ದ ಮಕ್ಕಳು ಶಾಲೆಗಳು ಆರಂಭವಾಗುತ್ತಿದ್ದಂತೆ ಉತ್ಸಾಹದಿಂದ ಬಂದಿದ್ದಾರೆ ಆದರೆ, ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಸರ್ಕಾರ ಮತ್ತು ಅಧಿಕಾರಿಗಳು ಸಂಪೂರ್ಣವಾಗಿ ಸೋತಿದ್ದಾರೆ.

ಅನುದಾನ ಬಳಕೆಗೆ ಅವಕಾಶವಿಲ್ಲ: ಗ್ರಾಮದ ನಾಗರಿಕರು ಶಾಲಾ ಕಟ್ಟಡ ದುರಸ್ತಿಗೆ ಜಿಪಂ ಗಮನ ಸೆಳೆದಿದ್ದರು. ಸಮಸ್ಯೆಗೆ ಸ್ಪಂದಿಸಿದ ಸಿಇಒ ಶಾಲಾ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಇನ್ನೇನು ಕಾಮಗಾರಿ ಆರಂಭವಾಗಬೇಕು ಎನ್ನುವಷ್ಟರಲ್ಲಿ ಹಾರೋಹಳ್ಳಿ ಪಪಂ ಮೇಲ್ದರ್ಜೆಗೇರಿದ ಹಿನ್ನೆಲೆ ಅನುದಾನ ಬಳಸಿಕೊಳ್ಳಲು ಅವಕಾಶವಿಲ್ಲದೆ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿ ನಿರಾಸೆಯ ಮೂಡಿಸಿತು.

“ಕೆಬ್ಬೆದೊಡ್ಡಿ ಶಾಲೆಯ ಎರಡು ಕಟ್ಟಡಗಳು ಹಾಳಾಗಿವೆ. ಪಪಂ ವ್ಯಾಪ್ತಿಗೆ ಸೇರ್ಪಡೆ ಗೊಂಡಿದೆ. ಹಾಗಾಗಿ ಜಿಪಂ ಮತ್ತು ತಾಪಂ ಅನುದಾನ ಬಳಸಿಕೊಳ್ಳಲು ಅವಕಾಶವಿಲ್ಲ. ತಾಲೂಕಿನ 30 ಶಾಲೆಗಳ ಪಟ್ಟಿ ಕೇಳಿದ್ದಾರೆ. ಈ ಶಾಲೆಯು ಒಳಗೊಂಡಂತೆ ಪಟ್ಟಿ ಸಲ್ಲಿಸಿದೇವೆ. ಸಿಎಸ್‌ಆರ್‌ ಅನುದಾನದಲ್ಲಿ ಈ ಶಾಲೆಯ ಕಟ್ಟಡ ತುರ್ತಾಗಿ ಕೈಗೊಳ್ಳುವಂತೆ ಗಮನಕ್ಕೆ ತಂದಿದ್ದೇವೆ. ಅಲ್ಲಿಯವರೆಗೂ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ.” ಜಯಲಕ್ಷ್ಮೀ, ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next