ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಗೆ ದಿನಗಣನೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ ಅಥ್ಲೇಟ್ ಗಳ ಜತೆ ವರ್ಚುವಲ್ ವಿಡಿಯೋ ಮೂಲಕ ಕುಶಲೋಪರಿ ನಡೆಸಿದ್ದರು.
ಇದನ್ನೂ ಓದಿ:ಭಾರತ: ಕಳೆದ 24ಗಂಟೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ, ಸಾವಿನ ಪ್ರಮಾಣ ಇಳಿಕೆ
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೆಲವು ಅಥ್ಲೇಟ್ ಗಳ ಬಳಿ ಕ್ರೀಡಾಭ್ಯಾಸದ ಬಗ್ಗೆ ವಿಚಾರಿಸಿ ಅವರ ಮನದಾಳದ ಮಾತುಗಳನ್ನು ಆಲಿಸಿ ಧೈರ್ಯ ತುಂಬಿದ್ದರು. ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಜತೆ ಮಾತನಾಡಿದಾಗ, 2016ರ ರಿಯೋ ಒಲಿಂಪಿಕ್ಸ್ ವೇಳೆ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಅವರು ಸಿಂಧು ಅವರಿಂದ ಮೊಬೈಲ್ ಫೋನ್ ದೂರವಿಟ್ಟಿದ್ದು, ಐಸ್ ಕ್ರೀಮ್ ತಿನ್ನದಂತೆ ತಡೆದಿರುವುದನ್ನು ನೆನಪಿಸಿಕೊಂಡರು. ರಿಯೋ ಒಲಿಂಪಿಕ್ಸ್ ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು.
ಈಗ ಮತ್ತೆ ಐಸ್ ಕ್ರೀಮ್ ತಿನ್ನಲು ಅವಕಾಶ ನೀಡಿದ್ದಾರೆಯೇ ಎಂದು ಪ್ರಧಾನಿ ಮೋದಿ ಸಿಂಧು ಬಳಿ ಹಾಸ್ಯ ಚಟಾಕಿ ಹಾರಿಸಿದ್ದರು. ಒಲಿಂಪಿಕ್ಸ್ ಪಂದ್ಯದ ಅಭ್ಯಾಸದ ಹಿನ್ನೆಲೆಯಲ್ಲಿ ಈಗ ಹೆಚ್ಚು ಐಸ್ ಕ್ರೀಮ್ ತಿನ್ನುತ್ತಿಲ್ಲ ಎಂದು ಸಿಂಧು ಉತ್ತರಿಸಿದ್ದರು.
ಒಲಿಂಪಿಕ್ಸ್ ಸ್ಪರ್ಧಿಗಳಿಗೆ ಪ್ರಧಾನಿ ಮೋದಿ ಅವರು ಶುಭ ಹಾರೈಸಿದ್ದು, ಟೋಕಿಯೋ 2020ರ ಯಶಸ್ಸು ಮತ್ತೆ ಪುನರಾವರ್ತನೆಯಾಗಲಿ ಎಂದರು. ಅಷ್ಟೇ ಅಲ್ಲ ನಿಮ್ಮ ಕ್ರೀಡಾ ಯಶಸ್ಸಿನ ನಂತರ ನಾನು ನಿಮ್ಮನ್ನೆಲ್ಲಾ ಭೇಟಿಯಾಗುತ್ತೇನೆ. ಅಲ್ಲದೇ ನಿಮ್ಮ ಜತೆ ಐಸ್ ಕ್ರೀಮ್ ಕೂಡಾ ತಿನ್ನುತ್ತೇನೆ ಎಂದಾಗ ಪಿವಿ ಸಿಂಧು ಮತ್ತು ಆಕೆಯ ಪೋಷಕರು ನಗು ಬೀರಿದ್ದರು. ವರ್ಚುವಲ್ ಕಾರ್ಯಕ್ರಮದಲ್ಲಿ ಸಿಂಧು ಅವರ ಪೋಷಕರು ಕೂಡಾ ಹಾಜರಾಗಿದ್ದರು ಎಂದು ವರದಿ ತಿಳಿಸಿದೆ .